ಬುಧವಾರ, ಡಿಸೆಂಬರ್ 2, 2020
17 °C

PV Web Exclusive| ಕಡಲ ಮಕ್ಕಳಿಗೆ ಬೇಕಿದೆ ‘ಪ್ರಾಧಿಕಾರ’ದ ನೆರಳು

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

Prajavani

ಜೀವದ ಹಂಗು ತೊರೆದು ಕಡಲಿಗೆ ಇಳಿಯುವ ಮೀನುಗಾರರು, ಮರಳಿ ಮನೆ ಸೇರುವುದು 8–10 ದಿನಗಳ ನಂತರವೇ. ಅಷ್ಟೂ ದಿನ ಹಗಲು–ರಾತ್ರಿಗಳನ್ನು ಅಲೆಗಳ ಮಧ್ಯೆಯೇ ಕಳೆಯುವ ಮೀನುಗಾರರಿಗೆ ಇದೀಗ ಸಿಗುವ ಲಾಭವೂ ಅಷ್ಟಕ್ಕಷ್ಟೇ. ಕರಾವಳಿಯ ಆರ್ಥಿಕತೆಯ ಜೀವನಾಡಿ ಮೀನುಗಾರಿಕೆಗೆ ಇದೀಗ ದೊಡ್ಡ ಹೊಡೆತ ಬಿದ್ದಿದೆ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ತಾಪಮಾನ ಏರಿಕೆ, ನೈಸರ್ಗಿಕ ವಿಕೋಪ, ಕ್ಷೀಣಿಸುತ್ತಿರುವ ಮತ್ಸ್ಯ ಸಂತತಿಗಳ ನಡುವೆ ಇದೀಗ ಕೋವಿಡ್‌–19ನ ಸಂಕಷ್ಟವೂ ಮೀನುಗಾರಿಕೆಯನ್ನು ಬಾಧಿಸಿದೆ. ಮೀನುಗಾರಿಕೆಯನ್ನೇ ನಂಬಿಕೊಂಡು ಬದುಕು ನಡೆಸುವವರಿಗೂ ಇದೀಗ ಪ್ರಾಧಿಕಾರದ ಆಸರೆ ಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮೀನುಗಾರಿಕೆಯಲ್ಲಿ ತೊಡಗಿರುವವರು 30 ಸಾವಿರ ಇದ್ದರೆ, ಮೀನುಗಾರಿಕೆಗೆ ಸಂಬಂಧಿಸಿದ ಮಂಜುಗಡ್ಡೆ ಘಟಕಗಳು, ಬೋಟ್‌ಗಳಿಂದ ಮೀನು ತೆಗೆಯುವ ಕಾರ್ಮಿಕರು, ಮೀನು ವ್ಯಾಪಾರಿಗಳು ಸೇರಿದಂತೆ ಮತ್ತೆ 25 ಸಾವಿರ ಮಂದಿ ಕೆಲಸ ಮಾಡುತ್ತಾರೆ. ಮೀನುಗಾರಿಕೆಗೆ ಸ್ವಲ್ಪ ತೊಂದರೆ ಎದುರಾದರೂ, ಇಷ್ಟೂ ಜನರಿಗೆ ಉದ್ಯೋಗವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕರಾವಳಿಯ ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೀನುಗಾರರ ಅಭಿವೃದ್ಧಿಯ ನಿಟ್ಟಿನಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕೆಲಸ ಮಾಡುತ್ತಿದ್ದರೂ, ಮೀನುಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಮೀನುಗಾರಿಕೆಗೆ ಒಂದು ಅರ್ಥಪೂರ್ಣ ಚೌಕಟ್ಟು ನಿರ್ಮಿಸಲು ಇದೀಗ ಮೀನುಗಾರಿಕೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಬೇಡಿಕೆ ಎದುರಾಗಿದೆ.

ಯಾವ ಸರ್ಕಾರ ಬಂದರೂ ಅಷ್ಟೆ: ‘ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಅಷ್ಟೆ, ಮೀನುಗಾರರ ಸಮಸ್ಯೆಯು ಹಾಗೇ ಉಳಿಯುತ್ತದೆ. ಮಂಗಳೂರು ದಕ್ಕೆಯಲ್ಲಿ 1,200 ಯಾಂತ್ರೀಕೃತ ಮತ್ತು 800 ನಾಡದೋಣಿಗಳಿವೆ. ದೇಶದ ಆರ್ಥಿಕತೆಗೆ ಸಾಕಷ್ಟು ಕೊಡುಗೆಯನ್ನೂ ಮೀನುಗಾರಿಕಾ ವಲಯ ನೀಡುತ್ತಿದೆ. ಆದರೆ ಮೀನುಗಾರರ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎನ್ನುವುದು ಟ್ರಾಲ್‌ಬೋಟ್ ಮಾಲೀಕರ ಸಂಘದ ಅಧ್ಯಕ್ಷ ನಿತಿನ್‌ಕುಮಾರ್ ಹೇಳುವ ಮಾತು.

‘ಮಂಗಳೂರು ದಕ್ಕೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಳಿವೆ ಬಾಗಿಲು ಬಳಿ ಹೂಳು ತುಂಬಿದೆ. ಅದನ್ನು ಮೇಲೆತ್ತದೇ ಇರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಕರಾವಳಿಯಲ್ಲಿ ಸದ್ಯ 12 ಮೀನುಗಾರಿಕಾ ಬಂದರುಗಳಿವೆ. ಇಲ್ಲಿನ ಹೂಳೆತ್ತಲು ಸುಸಜ್ಜಿತ ಡ್ರೆಜ್ಜರ್ ಅಗತ್ಯವಿದೆ. ಡ್ರೆಜ್ಜರ್‌ ನಿರ್ವಹಣೆ ಮಾಡುವುದು ಯಾರು ಎಂಬ ಸಮಸ್ಯೆ ಇದೆ. ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಡ್ರೆಜ್ಜರ್‌ ನಿರ್ವಹಣೆಯ ಜವಾಬ್ದಾರಿ ವಹಿಸುವ ಅಗತ್ಯವಿದೆ’ ಎನ್ನುತ್ತಾರೆ ಅವರು.

‘ಈ ಹಿಂದೆ ಮಂಗಳೂರು ಅಡಿಕೆ, ಹೆಂಚು ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಈಗ ಮೀನುಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಮೀನುಗಾರಿಕಾ ವಲಯ ಪ್ರಸಿದ್ಧಿ ಪಡೆದಷ್ಟೇ ಸಮಸ್ಯೆಯನ್ನೂ ಎದುರಿಸುತ್ತಿದೆ. ರೈತರಿಗೆ ಸರ್ಕಾರ ಏನೆಲ್ಲ ಪರಿಹಾರ ನೀಡುತ್ತಿದೆಯೋ, ಮೀನುಗಾರರಿಗೂ ಅದೇ ರೀತಿಯ ಪರಿಹಾರ ನೀಡಬೇಕು’ ಎನ್ನುವುದು ಅವರ ಆಗ್ರಹ.

‘ಚಂಡಮಾರುತ ಬಂದರೆ, ಸಮುದ್ರದಲ್ಲಿ ನಿಲ್ಲಲು ಬಿಡದೇ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹೊಡೆದು ಓಡಿಸುತ್ತಾರೆ. ಹೂಳು ತುಂಬಿದ ಕಾರಣ ದಕ್ಕೆಗೆ ಬರಲೂ ಆಗುವುದಿಲ್ಲ. ರಕ್ಷಣೆ ಪಡೆಯಲು ಎನ್‌ಎಂಪಿಟಿಯೂ ಒಳಗೆ ಬಿಡುವುದಿಲ್ಲ. ಮೀನುಗಾರರ ಪರಿಸ್ಥಿತಿ ಶೋಚನೀಯವಾಗಿದ್ದು, ಸಮುದ್ರಕ್ಕೆ ಹಾರಬೇಕಷ್ಟೇ’ ಎಂದು ಮೀನುಗಾರರು ನೋವು ತೋಡಿಕೊಳ್ಳುತ್ತಾರೆ.

‘ಬೃಹತ್ ಕೈಗಾರಿಕೆಗಳ ವಿಷಯುಕ್ತ, ಕಲುಷಿತ ತ್ಯಾಜ್ಯ ನೀರನ್ನು ನದಿ, ಸಮುದ್ರಗಳಿಗೆ ಬಿಡಲಾಗುತ್ತಿದೆ. ಇದರಿಂದ ಸಮುದ್ರದಲ್ಲಿ ಟಾರ್‌ನಂತಹ ವಸ್ತು ಕಂಡು ಬರುತ್ತಿದೆ. ಇದು ಮತ್ಸ್ಯ ಸಂಕುಲಕ್ಕೆ ಕಂಟಕವೂ ಆಗಿದೆ. ಈ ಬಗ್ಗೆಯೂ ಗಮನ ಹರಿಸಬೇಕಾದ ಅಗತ್ಯವಿದೆ’ ಎನ್ನುವುದು ಮೀನುಗಾರ ಮುಖಂಡರ ಆಗ್ರಹ.

ಪ್ರಾಧಿಕಾರದ ಸ್ವರೂಪ

ರಾಜ್ಯದ ಏಕೈಕ ಮೀನುಗಾರಿಕೆ ಕಾಲೇಜು ಎಂದೇ ಹೆಸರಾಗಿರುವ ನಗರದ ಎಕ್ಕೂರಿನ ಮೀನುಗಾರಿಕೆ ಕಾಲೇಜಿನಿಂದ ಸಮಗ್ರ ಕರಾವಳಿ ಮತ್ತು ಮೀನುಗಾರರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ರಾಜ್ಯ ಮೀನುಗಾರಿಕಾ ಸಚಿವರ ಅಧ್ಯಕ್ಷತೆಯ ಈ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಎನ್‌ಎಂಪಿಟಿ ಅಧ್ಯಕ್ಷರು, ಬಂದರು ಅಧ್ಯಕ್ಷರು, ರಾಜ್ಯ ಪರಿಸರ ಇಲಾಖೆ (ಸಿಆರ್‌ಜೆಡ್) ಕಾರ್ಯದರ್ಶಿ, ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ, ಮೀನುಗಾರಿಕಾ ಕಾಲೇಜಿನ ಡೀನ್, ಮಿನುಗಾರಿಕಾ ಇಲಾಖೆಯ ನಿರ್ದೇಶಕ ಮತ್ತು ಅರಣ್ಯ ಇಲಾಖೆಯ ಕಾರ್ಯದರ್ಶಿಗಳನ್ನು ಉದ್ದೇಶಿತ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸುವಂತೆ ಶಿಫಾರಸಿನಲ್ಲಿ ತಿಳಿಸಲಾಗಿದೆ.

ಮೀನುಗಾರರ ಪ್ರಮುಖ ಬೇಡಿಕೆ

* ಅಳಿವೆ ಬಾಗಿಲು ಮತ್ತು ಮೀನುಗಾರಿಕಾ ಬಂದರು ಇರುವ ಗುರುಪುರ ನದಿ ಹಾಗೂ ನೇತ್ರಾವತಿ ನದಿಯಲ್ಲಿ ಹೂಳೆತ್ತಿ, ಬೋಟ್‌ಗಳ ಸುಗಮ ಸಂಚಾರಕ್ಕೆ ಮತ್ತು ಲಂಗರು ಹಾಕಲು ಅವಕಾಶ ಕಲ್ಪಿಸಬೇಕು.

* ಮೀನುಗಾರಿಕಾ ಬಂದರಿನ 3 ನೇ ಹಂತದ ನಿರ್ಮಾಣ ಕಾಮಗಾರಿ ಪೂರ್ತಿಗೊಳಿಸಬೇಕು.

* ಕೈಗಾರಿಕೆಗಳಿಂದ ಮತ್ತು ಮಹಾನಗರ ಪಾಲಿಕೆಯ ಚರಂಡಿ, ಒಳ ಚರಂಡಿ ಮೂಲಕ ಕಲುಷಿತ ನೀರು ಸಮುದ್ರ ನದಿ ಮೂಲಕ ಸಮುದ್ರ ಸೇರುವುದನ್ನು ತಡೆಯಬೇಕು.

* ಅನಧಿಕೃತ ಮರಳು ಗಣಿಗಾರಿಕೆಯನ್ನು ನಿಯಂತ್ರಿಸಬೇಕು.

* ತುರ್ತು ಸಂದರ್ಭಗಳಲ್ಲಿ ಬೋಟ್‌ಗಳಿಗೆ ಎನ್‌ಎಂಪಿಟಿ ಪ್ರವೇಶಿಸಲು ಅನುಮತಿ ನೀಡುವ ಮೂಲಕ ಎನ್‌ಎಂಪಿಟಿ ಜತೆಗಿನ ಸಂಘರ್ಷವನ್ನು ನಿವಾರಿಸಬೇಕು.

* ಸಿಆರ್‌ಜೆಡ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

* ಶೀತಲೀಕರಣ ಘಟಕ, ಮಂಜುಗಡ್ಡೆ ಸ್ಥಾವರ ಸ್ಥಾಪಿಸಬೇಕು.

* ಸುಸಜ್ಜಿತ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು.

* ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಸೌಲಭ್ಯ ನೈಜ ಮೀನುಗಾರರಿಗೆ ತಲುಪಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು