ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ಅಧಿಕಾರಿಗಳ ವಿರುದ್ಧದ ಪ್ರಕರಣ: ಮತ್ತಷ್ಟು ದಾಖಲೆ ಪತ್ತೆಮಾಡಿದ ಎಸಿಬಿ

Last Updated 19 ಜುಲೈ 2021, 16:55 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ ಒಂಬತ್ತು ಅಧಿಕಾರಿಗಳ ಮೇಲೆ ಗುರುವಾರ ದಾಳಿ ನಡೆಸಿದ್ದ ವೇಳೆ ವಶಪಡಿಸಿಕೊಂಡಿದ್ದ ದಾಖಲೆಗಳ ಪರಿಶೀಲನೆಯನ್ನು ಭ್ರಷ್ಡಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಆರಂಭಿಸಿದ್ದಾರೆ. ಮತ್ತಷ್ಟು ದಾಖಲೆಗಳನ್ನು ತನಿಖಾ ತಂಡ ಪತ್ತೆಮಾಡಿದೆ.

ರಾಜ್ಯದ ವಿವಿಧ ಜಿಲ್ಲೆಗಳ 43 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ದಾಳಿಗೊಳಗಾದವರ ಪೈಕಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಹುದ್ದೆಯಲ್ಲಿದ್ದ ಆರ್‌.ಪಿ. ಕುಲಕರ್ಣಿ ಅವರು ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ರಾಜಧಾನಿಯ ವ್ಯಾಪ್ತಿಯಲ್ಲಿ ಎರಡು ಎಕರೆ ಜಮೀನು ಖರೀದಿಸಿರುವ ದಾಖಲೆಯನ್ನು ತನಿಖಾ ತಂಡ ಪತ್ತೆಮಾಡಿದೆ. ಕೋರಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಎ. ಕೃಷ್ಣಮೂರ್ತಿ ಅವರು ‘ಪೇಯಿಂಗ್‌ ಗೆಸ್ಟ್‌’ ನಡೆಸುತ್ತಿರುವ ದಾಖಲೆಗಳೂ ಸಿಕ್ಕಿವೆ.

ಬೀದರ್‌ನ ಬಸವಕಲ್ಯಾಣ ಗ್ರಾಮೀಣ ಕುಡಿಯುವ ನೀರು ಸರಬರಾಜು ಉಪ ವಿಭಾಗದ ಕಿರಿಯ ಎಂಜಿನಿಯರ್‌ ಸುರೇಶ್‌ ಒಡೆತನದ ಪೆಟ್ರೋಲ್‌ ಬಂಕ್‌ನಲ್ಲಿ ₹ 25 ಲಕ್ಷ ನಗದು ಮತ್ತು 90 ಗ್ರಾಂ. ಚಿನ್ನ ಪತ್ತೆಯಾಗಿದೆ. ಈ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಶೇ 395ರಷ್ಟು ವ್ಯತ್ಯಾಸ: ಕಿರಿಯ ಎಂಜಿನಿಯರ್‌ ಸುರೇಶ್‌ ಅವರ ಆದಾಯ, ವೆಚ್ಚಗಳಿಗೆ ಹೋಲಿಸಿದರೆ ಶೇಕಡ 395.76ರಷ್ಟು ಹೆಚ್ಚಿನ ಆಸ್ತಿ ಅವರ ಬಳಿ ಪತ್ತೆಯಾಗಿದೆ. ಮಂಡ್ಯ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ. ವೆಂಕಟೇಶ್‌ ಬಳಿ ಶೇ 354.33ರಷ್ಟು, ಹಿರಿಯ ಮೋಟಾರು ವಾಹನ ನಿರೀಕ್ಷಕ ಎ. ಕೃಷ್ಣಮೂರ್ತಿ ಬಳಿ ಶೇ 307ರಷ್ಟು, ಮಾಲೂರು ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಎಚ್‌.ಆರ್‌. ಕೃಷ್ಣಮೂರ್ತಿ ಬಳಿ ಶೇ 271.07ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಉಡುಪಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣ ಎಸ್‌. ಹೆಬ್ಸೂರು ಬಳಿ ಶೇ 146.70ರಷ್ಟು, ವಿಜಯಪುರದ ಕೆಪಿಟಿಸಿಎಲ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ ಬಳಿ ಶೇ 129.74ರಷ್ಟು, ಬಳ್ಳಾರಿಯ ಎಲೆಕ್ಟ್ರಿಕ್‌ ಇನ್‌ಸ್ಪೆಕ್ಟರ್‌ ಎ.ಎನ್. ವಿಜಯಕುಮಾರ್‌ ಬಳಿ ಶೇ 127.55ರಷ್ಟು ಮತ್ತು ದಕ್ಷಿಣ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ. ಶ್ರೀಧರ್‌ ಬಳಿ ಶೇ 98.76ರಷ್ಟು ಅಕ್ರಮ ಆಸ್ತಿ ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.

ಸಿಪಿಓ ಆರ್‌.ಪಿ. ಕುಲಕರ್ಣಿ ವರ್ಗಾವಣೆ
ಎಸಿಬಿ ದಾಳಿಗೊಳಗಾಗಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ) ಮುಖ್ಯ ಯೋಜನಾಧಿಕಾರಿ (ಸಿಪಿಓ) ಆರ್‌.ಪಿ. ಕುಲಕರ್ಣಿ ಅವರನ್ನು ಸೋಮವಾರ ವರ್ಗಾವಣೆ ಮಾಡಲಾಗಿದೆ.

ಎಸ್‌ಎಚ್‌ಡಿಪಿ ಸಿಪಿಓ ಹುದ್ದೆಗೆ ಕರ್ನಾಟಕ ರಾಜ್ಯ ಹೆದ್ದಾರಿ ಯೋಜನೆ (ಕೆಶಿಪ್‌) ಮುಖ್ಯ ಯೋಜನಾಧಿಕಾರಿ ಬಿ. ಗುರುಪ್ರಸಾದ್‌ ಅವರನ್ನು ನೇಮಿಸಲಾಗಿದೆ. ಗುರುಪ್ರಸಾದ್‌ ಅವರಿಗೆ ಕೆಶಿಪ್‌ ಮುಖ್ಯ ಯೋಜನಾಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ನೀಡಲಾಗಿದೆ. ಕುಲಕರ್ಣಿ ಅವರಿಗೆ ಯಾವುದೇ ಹುದ್ದೆ ನೀಡಿಲ್ಲ.

ಆರ್‌.ಪಿ. ಕುಲಕರ್ಣಿ ಅವರ ಆದಾಯ, ವೆಚ್ಚದ ಮಾಹಿತಿಗೆ ಹೋಲಿಸಿದರೆ ಶೇ 67.90ರಷ್ಟು ಅಕ್ರಮ ಆಸ್ತಿ ಕಂಡುಬಂದಿದೆ. ಆದರೆ, ಆರೋಪಿತ ಅಧಿಕಾರಿಯ ಮಗ ಮತ್ತು ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರ ಪಾಲುದಾರಿಕೆಯಲ್ಲಿ ಆರಂಭಿಸಿರುವ 13 ನವೋದ್ಯಮಗಳ ಹೆಸರಿನಲ್ಲಿ ₹ 16 ಕೋಟಿ ಲಾಭದ ಲೆಕ್ಕ ತೋರಿಸಲಾಗಿದೆ. ಈ ವಹಿವಾಟು ಸಂಶಯಾಸ್ಪದವಾಗಿದ್ದು, ನಂತರವೇ ಖಚಿತ ಅಂಕಿಅಂಶ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT