ಬುಧವಾರ, ನವೆಂಬರ್ 25, 2020
25 °C
ತನಿಖಾ ಸಂಸ್ಥೆಗಳೆದುರು ಹಾಜರಾಗದಂತೆ ನಿರ್ಬಂಧ ಪ್ರಕರಣ

ಬಿಡಿಎ ಆಯುಕ್ತರ ವಿರುದ್ಧ ಕ್ರಮ: ಪರಿಶೀಲಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಡಿಎ

ಬೆಂಗಳೂರು: ತಮ್ಮ ಅನುಮತಿ ಪಡೆಯದೇ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌), ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೇರಿದಂತೆ ಯಾವುದೇ ತನಿಖಾ ಸಂಸ್ಥೆ ಎದುರು ಹಾಜರಾಗದಂತೆ ಸಿಬ್ಬಂದಿಗೆ ಆದೇಶ ಹೊರಡಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸಿ, ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.

ಬಿಡಿಎ ಆಯುಕ್ತರ ಕ್ರಮ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಎಸ್‌. ಅರುಣಾಚಲಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ, ‘ತನಿಖಾ
ಸಂಸ್ಥೆಗಳ ಕೆಲಸದಲ್ಲಿ ಅಡ್ಡಿಪಡಿಸುವ ಕೃತ್ಯವನ್ನು ಬಿಡಿಎ ಆಯುಕ್ತರು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕವೂ ಸರ್ಕಾರ ಕೈಕಟ್ಟಿ ಕೂರಲಾಗದು’ ಎಂದು ಹೇಳಿತು.

‘ಬಿಡಿಎ ಆಯುಕ್ತರ ಆದೇಶವು ತನಿಖಾ ಸಂಸ್ಥೆಗಳ ಕೆಲಸದಲ್ಲಿ ಹಸ್ತಕ್ಷೇಪ ನಡೆಸುವಂತಿದೆ. ತನಿಖೆಗೆ ಅಗತ್ಯವಿರುವ ಮಾಹಿತಿ ಮತ್ತು ದಾಖಲೆಗಳನ್ನು ತನಿಖಾ ತಂಡದ ಜತೆ ಹಂಚಿಕೊಳ್ಳುವುದನ್ನು ನಿರ್ಬಂಧಿಸುವುದಕ್ಕಾಗಿ ಈ ಆದೇಶ ಹೊರಡಿಸಲಾಗಿದೆ’
ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಬಿಡಿಎ ಆಯುಕ್ತರ ಪರ ವಕೀಲರು, ಆದೇಶದ ಇಂಗ್ಲಿಷ್‌ ಅನುವಾದಿತ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ತನಿಖಾ ಸಂಸ್ಥೆಗಳ ಎದುರು ಹಾಜರಾಗುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಆದೇಶದಲ್ಲಿ ಹೇಳಿರುವುದನ್ನು ನ್ಯಾಯಾಲಯ ಗಮನಿಸಿತು.

‘ಬಿಡಿಎ ಆಯಕ್ತರು ಯಾವ ಕಾಯ್ದೆ ಅಥವಾ ನಿಯಮಗಳ ಅಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ? ಈ ರೀತಿಯ ತಪ್ಪೆಸಗಿರುವ ಆಯುಕ್ತರ ವಿರುದ್ಧ ಬಿಡಿಎ ಕಾಯ್ದೆಯ ಅಡಿಯಲ್ಲಿ ಕ್ರಮ ಜರುಗಿಸಲು ಸರ್ಕಾರ ಸಿದ್ಧವಿದೆಯೆ’ ಎಂದು ವಿಭಾಗೀಯ ಪೀಠ ಪ್ರಶ್ನಿಸಿತು.

ಬಿಡಿಎ ಸಿಬ್ಬಂದಿ ತನಿಖಾ ಸಂಸ್ಥೆಗಳ ಎದುರು ವಿಚಾರಣೆಗೆ ಹಾಜರಾಗುವುದನ್ನು ತಡೆಯುವ ಯಾವುದೇ ಉದ್ದೇಶ ಆಯುಕ್ತರಿಗೆ ಇರಲಿಲ್ಲ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣದ ವಿಚಾರಣೆಯನ್ನು ನವೆಂಬರ್‌ 28ಕ್ಕೆ ಮುಂದೂಡಿದ ನ್ಯಾಯಾಲಯ, ಬಿಡಿಎ ಆಯುಕ್ತರ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು