ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ: ತೋಟಗಾರಿಕೆ ಸಚಿವ ಮುನಿರತ್ನ ಭರವಸೆ

Last Updated 15 ಏಪ್ರಿಲ್ 2022, 21:10 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಮಾವು ಬೆಳೆಗಾರರ ಅನುಕೂಲಕ್ಕಾಗಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತೋಟಗಾರಿಕೆ ಸಚಿವ ಮುನಿರತ್ನ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್‌ಎಂಡಿಎಂಸಿ) ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ಮಾವು ಖರೀದಿದಾರರು ಮತ್ತು ಮಾರಾಟಗಾರರ ಮಾರುಕಟ್ಟೆ ಸಂಪರ್ಕ ಸಮಾವೇಶದಲ್ಲಿ ಅವರು ಮಾತನಾಡಿದರು.

‘ರಾಮನಗರದಲ್ಲಿ ಮಾವು ಮಾರುಕಟ್ಟೆ ನಿರ್ಮಿಸುವ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಮಾವು ಬೆಳೆಗಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದರು.

ಆರೋಗ್ಯ ಸಚಿವ ಕೆ.ಸುಧಾಕರ್, ‘ಜಿಲ್ಲಾ ಮಟ್ಟದಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಅವುಗಳಿಗೆ ರೈತರೇ ಮಾಲೀಕರಾಗಬೇಕು. ಬೆಳೆಗಾರರು ಖರೀದಿದಾರರ ಹಿಡಿತಕ್ಕೆ ಸಿಲುಕದಂತೆ ಕ್ರಮ ವಹಿಸಬೇಕು’ ಎಂದರು.

ದೆಹಲಿ, ಕೋಲ್ಕತ್ತ ಸೇರಿದಂತೆ ಹೊರ ರಾಜ್ಯಗಳ ಮಾವು ಮಾರುಕಟ್ಟೆಗಳಿಂದ ಮಾರಾಟಗಾರರು, ಪೂರೈಕೆದಾರರು, ಇ–ಕಾಮರ್ಸ್‌ ಸಂಸ್ಥೆಗಳು ಹಾಗೂ 150ಕ್ಕೂ ಹೆಚ್ಚು ಮಂದಿ ಮಾವು ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಮಾವು ಪೂರೈಕೆ ದಾರರು ಮತ್ತು ಮಾರಾಟಗಾರರ ನಡುವೆ ಮಾವು ಖರೀದಿ ಸಂಬಂಧ ಒಪ್ಪಂದಗಳು ನಡೆದವು.ಕಾರ್ಯಕ್ರಮದಲ್ಲಿ ನಿಗಮದ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಕೆಎಸ್‌ಎಂಡಿಎಂಸಿ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜ್, ಅಧ್ಯಕ್ಷ ಕೆ.ವಿ.ನಾಗರಾಜ್, ಅಧಿಕಾರಿ ಗಳಾದ ಜೆ.ಗುಣವಂತ, ಲಲಿತಾ ಇದ್ದರು.

ನಿಗಮಕ್ಕೆ ₹4 ಕೋಟಿ ಅನುದಾನ: ಭರವಸೆ

‘ಅನುದಾನದ ಕೊರತೆಯಿಂದಾಗಿಮಾವು ನಿಗಮದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಮಾವಿನ ಕಾಲ ಆರಂಭವಾಗಿರುವುದರಿಂದ ನೆರವಿನ ಅಗತ್ಯವಿದೆ. ಇದಕ್ಕಾಗಿ ನಿಗಮಕ್ಕೆ ಅನುದಾನ ಕೊಟ್ಟರೆ ಅನುಕೂಲ’ ಎಂದುಸಮಾವೇಶದಲ್ಲಿ ಭಾಗವಹಿಸಿದ್ದ ಮಾವು ಬೆಳೆಗಾರರು ಸಚಿವ ಮುನಿರತ್ನ ಅವರಿಗೆ ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ,‘ಮಾವು ನಿಗಮಕ್ಕೆ ₹4 ಕೋಟಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT