ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕೋರ್ಸ್‌ ತಾತ್ಸಾರ ಬೇಡ: ದಿಶಾಂತ್‌ ಜೋಜಿತ್‌ ಜೇಮ್ಸ್‌

Last Updated 22 ಸೆಪ್ಟೆಂಬರ್ 2021, 3:11 IST
ಅಕ್ಷರ ಗಾತ್ರ

ಬೆಂಗಳೂರು:‘ಎಲ್ಲರೂ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕೋರ್ಸ್‌ಗಳ ಬಗ್ಗೆ ಆಸಕ್ತಿ ತೋರುತ್ತಾರೆ.ಕೃಷಿ ಕೋರ್ಸ್‌ ಅನ್ನು ತಾತ್ಸಾರದಿಂದ ನೋಡುತ್ತಾರೆ. ಈ ಮನೋಭಾವ ಬದಲಿಸಬೇಕು. ಈ ಕ್ಷೇತ್ರದಲ್ಲೂ ಸಾಧನೆ ಸಾಧ್ಯ ಎಂಬುದನ್ನು ಸಾಬೀತು ಪಡಿಸಬೇಕು. ಹೀಗಾಗಿ ಪಿ.ಎಚ್‌ಡಿ ಮಾಡಿದೆ’ ಎಂದು ದಿಶಾಂತ್‌ ಜೋಜಿತ್‌ ಜೇಮ್ಸ್‌ ತಿಳಿಸಿದರು.

ಕೇರಳದ ಎರ್ನಾಕುಲಂನ ಜೋಜಿತ್‌, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ 55ನೇ ಘಟಿಕೋತ್ಸವ ಸಮಾರಂಭದಲ್ಲಿ ಮಂಗಳವಾರ ಡಾಕ್ಟರ್‌ ಆಫ್‌ ಫಿಲಾಸಫಿಯಲ್ಲಿ (ಕೃಷಿ ವಿಸ್ತರಣೆ) 3 ಚಿನ್ನ ಹಾಗೂ 1 ದಾನಿಗಳ ಚಿನ್ನದ ಪದಕದ ಪ್ರಮಾಣಪತ್ರ ಪಡೆದಿದ್ದಾರೆ.

‘ನಿರಂತರ ಅಧ್ಯಯನ ಯಶಸ್ಸಿನ ಮಂತ್ರ. ಈಗ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದೆ. ಈ ಮಾಧ್ಯಮವನ್ನು ಕೃಷಿಗೆ ಪೂರಕವಾಗಿ ಬಳಸಿಕೊಳ್ಳುವತ್ತ ಎಲ್ಲರೂ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

ಆನುವಂಶೀಯ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಜ್ಞಾನದಲ್ಲಿ (ಸ್ನಾತಕೋತ್ತರ) 4 ಚಿನ್ನ ಜಯಿಸಿರುವ ಡಿ.ಎಸ್‌.ಸುಪ್ರಿತ ರಾಜ್‌, ‘ಪ್ರಾಧ್ಯಾಪಕರ ಮಾರ್ಗದರ್ಶನದಿಂದ ಸಾಧನೆ ಸಾಧ್ಯವಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಅವರು ಸಂಶೋಧನಾ ಗ್ರಂಥ ಸಿದ್ಧಪಡಿಸುವುದಕ್ಕೆ ತುಂಬಾ ಸಹಕಾರ ನೀಡಿದರು. ನಾನು ಕೃಷಿ ಪದವಿ ಪಡೆಯಬೇಕೆಂಬುದು ಅಪ್ಪ ಬಿ.ಎಸ್‌.ದೇವರಾಜು ಹಾಗೂ ಅಮ್ಮ ಸುನಿತಾ ಅವರ ಆಸೆಯೂ ಆಗಿತ್ತು. ಮುಂದಿನ ದಿನಗಳಲ್ಲಿ ಹಲವು ಸಂಶೋಧನೆಗಳನ್ನು ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಆಸೆ ಇದೆ’ ಎಂದರು.

‘ಎಳವೆಯಿಂದಲೂ ಕಷ್ಟ ನೋಡಿಕೊಂಡು ಬಂದಿದ್ದೇನೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಇತ್ತು. ಹೀಗಾಗಿ ಶ್ರಮಪಟ್ಟು ಓದಿದ್ದೆ. ಅದಕ್ಕೆ ಪ್ರತಿಫಲ ಸಿಕ್ಕಿದೆ. ಕನಕಪುರದ ಚಿಕ್ಕೇನಹಳ್ಳಿಯಲ್ಲಿ ಇರುವ 1 ಎಕರೆ ಜಮೀನಿನಲ್ಲಿ ಅಪ್ಪ ಸೊಪ್ಪು, ತರಕಾರಿ ಬೆಳೆಯುತ್ತಾರೆ. ಅದೇ ನಮಗೆ ಜೀವನಾಧಾರ. ಕೃಷಿಕರ ಕಷ್ಟಗಳ ಅನುಭವ ಇದೆ. ಈ ಕ್ಷೇತ್ರದಲ್ಲಿ ಏನಾದರೂ ಸುಧಾರಣೆ ತರಬೇಕು ಎಂಬ ಉದ್ದೇಶದಿಂದ ಕೃಷಿ ಪದವಿಗೆ ಸೇರಿದ್ದೆ’ ಎಂದು ಬಿ.ಎಸ್ಸಿಯಲ್ಲಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) 6 ಚಿನ್ನದ ಪದಕ ಪಡೆದಿರುವ ಎಂ.ಎಸ್‌.ಮಾನಸ ಹೇಳಿದರು.

‘ಮಹಿಳೆಯರನ್ನು ಉದ್ಯಮಿಗಳನ್ನಾಗಿ ರೂಪಿಸಬೇಕು’

‘ಕೃಷಿ ವಿಶ್ವವಿದ್ಯಾಲಯಗಳು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ದಿಮೆದಾರರ ನೇರ ಸಂಪರ್ಕ ಕಲ್ಪಿಸಬೇಕು. ಮಹಿಳೆಯರನ್ನು ಉದ್ದಿಮೆದಾರರನ್ನಾಗಿ ರೂಪಿಸುವತ್ತ ಚಿತ್ತ ಹರಿಸಬೇಕು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

‘ಸಿರಿಧಾನ್ಯಗಳ ಉತ್ಪಾದನೆ ಹಾಗೂ ಬಳಕೆಗೆ ಆದ್ಯತೆ ನೀಡಬೇಕಿದೆ. ಸಂಶೋಧನೆ, ಬೋಧನೆ ಮತ್ತು ವಿಸ್ತರಣಾ ವಿಭಾಗಗಳಿಗೆ ಅಧಿಕ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT