ಮಂಗಳವಾರ, ಜನವರಿ 18, 2022
24 °C

ಅತಿಥಿ ಉಪನ್ಯಾಸಕರ ಬೇಡಿಕೆ ಬೆಂಬಲಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಿ’, ‘ರಾಜ್ಯದಲ್ಲಿನ ಶೈಕ್ಷಣಿಕ ಗೊಂದಲ ಬಗೆಹರಿಸಿ’, ‘ಹೋರಾಟನಿರತ ಅತಿಥಿ ಉಪನ್ಯಾಸಕರೇ ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಬರಹಗಳುಳ್ಳ ಫಲಕಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎಐಡಿಎಸ್‌ಒ ಅಖಿಲ ಭಾರತ ಘಟಕದ ಅಧ್ಯಕ್ಷ ವಿ.ಎನ್‌.ರಾಜಶೇಖರ್‌, ‘ಬೇಡಿಕೆಗಳನ್ನು ಈಡೇರಿಸುವಂತೆ ಉಪನ್ಯಾಸಕರು ಶಿಕ್ಷಣ ಸಚಿವರ ಬಳಿ ಮನವಿ ಮಾಡಿದ್ದರು. ಅದಕ್ಕೆ ಸಚಿವರು ‘ಬೇಕಾದರೆ ಕೆಲಸ ಮಾಡಿ, ಇಲ್ಲವಾದರೆ ಬಿಟ್ಟು ಹೋಗಿ’ ಎಂದು ದರ್ಪದಿಂದ ಹೇಳಿದ್ದಾರೆ. ಅವರ ವರ್ತನೆ ಹಾಗೂ ಹೇಳಿಕೆ ಖಂಡನಾರ್ಹ’ ಎಂದು ಕಿಡಿಕಾರಿದರು.

ರಾಜ್ಯ ಘಟಕದ ಕಾರ್ಯದರ್ಶಿ ಅಜಯ್‌ ಕಾಮತ್‌, ‘ಅತಿಥಿ ಉಪನ್ಯಾಸಕರ ಪ್ರತಿಭಟನೆಯಿಂದಾಗಿ ತರಗತಿಗಳು ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ಲಾಕ್‌ಡೌನ್‌ ಸಮಯದಲ್ಲಿ ಶಿಕ್ಷಕರು ಸಂಬಳವಿಲ್ಲದೆ ಆನ್‌ಲೈನ್‌ ತರಗತಿಗಳನ್ನು ನಡೆಸಿದ್ದಾರೆ. ಅವರ ಸೇವೆ ಗಮನದಲ್ಲಿಟ್ಟುಕೊಂಡು ಸರ್ಕಾರವು ಅವರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.     

ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಅಭಯಾ ದಿವಾಕರ್, ಉಪಾಧ್ಯಕ್ಷ ಅಪೂರ್ವ, ಕಾರ್ಯದರ್ಶಿ ಕಲ್ಯಾಣ್, ಖಜಾಂಚಿ ವಿನಯ್ ಚಂದ್ರ, ಕಿರಣ್, ಶಾಜಿಯಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.