ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಎಲ್ಲ 97 ಲಕ್ಷ ಮನೆಗಳಿಗೆ ವರ್ಷದೊಳಗೆ ನಲ್ಲಿ ನೀರು: ಸಚಿವ ಈಶ್ವರಪ್ಪ

Last Updated 9 ಏಪ್ರಿಲ್ 2022, 9:10 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ 97 ಲಕ್ಷ ಮನೆಗಳಿಗೆ ‘ಮನೆಮನೆಗೆ ಗಂಗೆ ಯೋಜನೆ’ಯಡಿ ವರ್ಷದೊಳಗೆ ಕುಡಿಯುವ ನೀರು ಪೂರೈಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮನೆಮನೆಗೆ ನಳ್ಳಿ ನೀರು ಸರಬರಾಜು ಕೆಲಸ ತ್ವರಿತಗರಿಯಲ್ಲಿ ನಡೆಯುತ್ತಿದೆ’ ಎಂದರು.

‘ಮನೆಮನೆಗೆ ಗಂಗೆ ಯೋಜನೆ 2020ರಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದೇವೆ. ಈಗಾಗಲೇ 3 ಸಾವಿರ ಗ್ರಾಮಗಳಲ್ಲಿ ಪ್ರತಿ ಮನೆಗೆ ನಳ್ಳಿ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ₹ 3,325 ಕೋಟಿ ನೀಡಿದೆ. ರಾಜ್ಯ ಸರ್ಕಾರ ₹ 2,323 ಕೋಟಿ ಬಿಡುಗಡೆ ಮಾಡಿದೆ. ನೀರು ಪರೀಕ್ಷೆಗೆ 31 ಜಿಲ್ಲೆಗಳ 46 ತಾಲ್ಲೂಕುಗಳಲ್ಲಿ ಪ್ರಯೋಗ ಶಾಲೆ ಸ್ಥಾಪಿಸಲಾಗಿದೆ’ ಎಂದು ವಿವರಿಸಿದರು.

‘18,600 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಹಾಳಾದ ಘಟಕಗಳನ್ನು ದುರಸ್ತಿ ಮಾಡಿಸಲಾಗಿದೆ. ಈ ಯೋಜನೆ ಆರಂಭಕ್ಕೆ ಮೊದಲು ರಾಜ್ಯದ ಶೇ 25 ಮನೆಗಳಿಗೆ ನಳ್ಳಿನೀರಿನ ಸಂಪರ್ಕ ಇತ್ತು. ಇದಾದ ನಂತರ 20,56,650 ಮನೆಗಳಿಗೆ (ಶೇ 46) ಹೊಸದಾಗಿ ನೀರಿನ ಸಂಪರ್ಕ ನೀಡಲಾಗಿದೆ’ ಎಂದರು.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) 2021-22ರಲ್ಲಿ 13 ಕೋಟಿ ಮಾನವ ದಿನಗಳ ಗುರಿ ಹೊಂದಲಾಗಿತ್ತು. ಅದನ್ನು 2021ರ ಡಿಸೆಂಬರ್ ವೇಳೆಗೆ ತಲುಪಲಾಗಿತ್ತು. ಮತ್ತೆ ನಮ್ಮ ಕೋರಿಕೆ ಮೇರೆಗೆ 3 ಕೋಟಿ ಮಾನವ ದಿನಗಳನ್ನು ಕೇಂದ್ರ ಸರ್ಕಾರ ನೀಡಿತ್ತು. ಮಾರ್ಚ್ ಅಂತ್ಯಕ್ಕೆ 3.13 ಕೋಟಿ ಮಾನವ ದಿನಗಳನ್ನು ಬಳಸಿಕೊಂಡು ಗುರಿ ಸಾಧಿಸಿ ದಾಖಲೆ ಮಾಡಿದ್ದೇವೆ. ರಾಜ್ಯದ 32 ಲಕ್ಷ ಕುಟುಂಬಗಳು ಈ ಯೋಜನೆಯಲ್ಲಿವೆ’ ಎಂದು ತಿಳಿಸಿದರು.

‘ನರೇಗಾ ಯೋಜನೆಯಡಿ ₹ 3,957.45 ಕೋಟಿ ಕೂಲಿ ರೂಪದಲ್ಲಿ ನೀಡುತ್ತಿದ್ದೇವೆ. 8.8 ಲಕ್ಷ ಪರಿಶಿಷ್ಟ ಜಾತಿ- ಪಂಗಡದ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಂಡಿವೆ. 6.97 ಕೋಟಿ ಮಾನವ ದಿನಗಳನ್ನು ಮಹಿಳೆಯರಿಗೆ ನೀಡಿ ಮಹಿಳಾ ಸ್ವಾವಲಂಬನೆ ಸಾಧಿಸಲಾಗಿದೆ. 22,441 ಅಂಗವಿಕಲರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದೂ ವಿವರಿಸಿದರು.

‘ಕೇಂದ್ರದ ಜೊತೆ ಮಾತುಕತೆಯ ಬಳಿಕ ನರೇಗಾಕ್ಕೆ ಕೂಲಿಯನ್ನು ₹ 289ರಿಂದ ₹ 309ಕ್ಕೆ ಹೆಚ್ಚಿಸಲಾಗಿದೆ. ಬಾಂಡ್ಲಿ, ಪಿಕಾಸು ತಂದರೆ ₹ 10 ಹೆಚ್ಚು ಕೂಲಿ ನೀಡಲಾಗುತ್ತದೆ. ಮಹಿಳೆ- ಪುರುಷರಿಗೆ ಸಮಾನವಾಗಿ ಕೂಲಿ ಕೊಡಲಾಗುತ್ತಿದೆ. ಹಿಂದೆ ಆರೆಂಟು ತಿಂಗಳ ಕಾಲ ಕೂಲಿ ಹಣ ಸಿಗುತ್ತಿರಲಿಲ್ಲ. ಭ್ರಷ್ಟಾಚಾರವೂ ಸಾಕಷ್ಟು ಆಗುತ್ತಿತ್ತು. ಪಿಡಿಒಗಳು ಕಡಿಮೆ ಕೂಲಿ ಕೊಡುವುದೂ ನಡೆಯುತ್ತಿತ್ತು. ಈಗ ನೇರವಾಗಿ ಕೂಲಿ ಹಣ ಬ್ಯಾಂಕ್ ಖಾತೆಗೇ 15 ದಿನಗಳೊಳಗೆ ಜಮೆ ಮಾಡಲಾಗುತ್ತಿದೆ’ ಎಂದರು.

‘ಜಲಧಾರೆ ಯೋಜನೆಯಡಿ ನಾವು ಮುಂಚೂಣಿಯಲ್ಲಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ನೈರ್ಮಲ್ಯ ಸಾಧನೆಗಾಗಿ ಕೇಂದ್ರ–ರಾಜ್ಯ ಸರ್ಕಾರಗಳು 2021-22ನೇ ಸಾಲಿಗೆ ₹ 2,468 ಕೋಟಿ ಬಿಡುಗಡೆ ಮಾಡಿವೆ. ಇದರಲ್ಲಿ ₹ 2,211 ಕೋಟಿ ವೆಚ್ಚ ಮಾಡಿದ್ದೇವೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 12,62,423 ವೈಯಕ್ತಿಕ ಗೃಹ ಶೌಚಾಲಯಗಳು, 1,496 ಸಮುದಾಯ ಶೌಚಾಲಯಗಳು ಹಾಗೂ 3,982 ಘನ- ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಾವು ಸ್ಥಾಪಿಸಿದ್ದೇವೆ’ ಎಂದು ತಿಳಿಸಿದರು.

ತ್ಯಾಜ್ಯ ನಿರ್ವಹಣಾ ಘಟಕ: ‘ಮಂಗಳೂರು ಮತ್ತು ಉಡುಪಿಯಲ್ಲಿ 45-46 ಗ್ರಾಮ ಪಂಚಾಯತಿಗಳಿಗೆ ಕ್ಲಸ್ಟರ್ ರೂಪದಲ್ಲಿ ಒಂದು ತ್ಯಾಜ್ಯ ನಿರ್ವಹಣಾ ಘಟಕ ಸೇರಿ ನಾಲ್ಕು ಕಡೆ ಕ್ಲಸ್ಟರ್ ಘಟಕ ಆರಂಭಿಸಲು ಯೋಜಿಸಲಾಗಿದೆ. ಉಡುಪಿಯಲ್ಲಿ ಒಂದು ಘಟಕವನ್ನು ಉದ್ಘಾಟಿಸಲಾಗಿದೆ. ಕಸ ವಿಲೇವಾರಿ- ನಿರ್ಮೂಲನೆಗೆ ರಾಜ್ಯದಾದ್ಯಂತ ಜಿಲ್ಲೆಗೊಂದು ಇಂಥ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ನರೇಗಾ, ಮನೆಮನೆಗೆ ಗಂಗೆ ವೇಗ ವರ್ಧನೆಗೆ ಇದೇ 28 ಮತ್ತು 29ರಂದು ಮಂಗಳೂರಿನಲ್ಲಿ ಎಲ್ಲ ಸಿಇಒಗಳಿಗೆ ತರಬೇತಿ ನೀಡಲಾಗುವುದು. ಈಗಿನ ಪರಿಸ್ಥಿತಿ, ಹಿಂದೆ ಬಿದ್ದ ಜಿಲ್ಲೆಗಳು ಗುರಿ ಮುಟ್ಟಲು ಏನು ಮಾಡಬೇಕೆಂಬ ಬಗ್ಗೆ ಈ ಎರಡು ದಿನ ಚರ್ಚಿಸಲಾಗುವುದು’ ಎಂದರು.

‘18 ತಿಂಗಳ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5,623 ಗ್ರಂಥಾಲಯ ಸ್ಥಾಪನೆ ಮಾಡಿದ್ದೇವೆ. ₹ 7 ಸಾವಿರದ ಬದಲು ₹ 12 ಸಾವಿರ ಗೌರವಧನ ನೀಡುತ್ತಿದ್ದು, ಈ ಪೈಕಿ 2,214 ಅನ್ನು ಡಿಜಿಟಲ್ ಗ್ರಂಥಾಲಯ ಆಗಿ ಪರಿವರ್ತನೆ ಮಾಡಿದ್ದೇವೆ. ಉಳಿದವುಗಳನ್ನು ಡಿಜಿಟಲ್ ಗ್ರಂಥಾಲಯ ಮಾಡಲು ಯೋಜಿಸಿದ್ದೇವೆ’ ಎಂದು ವಿವರಿಸಿದರು.

‘ಪ್ರಧಾನಮಂತ್ರಿ ರಸ್ತೆ ಯೋಜನೆಯಡಿ ರಾಜ್ಯಕ್ಕೆ 5,612 ಕಿಮೀ ರಸ್ತೆ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ ನೀಡಿದೆ. ಹಾಳಾದ ರಸ್ತೆಗಳ ದುರಸ್ತಿಗೆ ಕೇಂದ್ರದಿಂದ ಶೇ 90 ಹಣ ನೀಡುತ್ತಿದೆ. 2021-22ರಲ್ಲಿ 3,088 ಕಿಮೀ ಕಾಮಗಾರಿ ಪ್ರಗತಿಯಲ್ಲಿದೆ. ಇದರಡಿ ಶೇ 100 ಸಾಧನೆ ಆಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಗಿರಿರಾಜ್ ಸಿಂಗ್ ಅವರು ಏ. 11ರಿಂದ ಒಂದು ವಾರ ಇಲಾಖೆ ಕುರಿತು ತರಬೇತಿ ನೀಡುತ್ತಿದ್ದಾರೆ. ಒಂದು ದಿನ ಸಚಿವರು, ಉಳಿದ ದಿನಗಳಲ್ಲಿ ಅಧಿಕಾರಿಗಳು ಭಾಗವಹಿಸುವರು’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಳೆದ ಸಾಲಿನಲ್ಲಿ 750 ಹಾಗೂ ಈ ವರ್ಷ 750 ಸೇರಿ 1,500 ಗ್ರಾಮ ಪಂಚಾಯಿತಿಗಳಲ್ಲಿ ‘ಅಮೃತ ಯೋಜನೆ’ ಜಾರಿಯಾಗುತ್ತಿದೆ. ಬೇಗನೆ ಗುರಿ ತಲುಪಿದರೆ ಹೆಚ್ಚುವರಿಯಾಗಿ ₹ 25 ಲಕ್ಷ ನೀಡಲಾಗುವುದು’ ಎಂದು ತಿಳಿಸಿದರು.

ಮನಸ್ಥಿತಿ ಬದಲಾಗಬೇಕು: ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಜಲಜೀವನ್ ಮತ್ತು ಸ್ವಚ್ಛ ಭಾರತ್ ಯಶಸ್ವಿ ಆಗಿದೆ. ಎಲ್ಲ ಮನೆಗಳಲ್ಲೂ ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಆದರೆ, ಕೆಲವರಿಗೆ ರಾತ್ರಿ ತಂಬಿಗೆ ಹಿಡಿದು ಬಯಲಿನಲ್ಲಿ ಕುಳಿತರೇ ತೃಪ್ತಿ. ಈ ಕುರಿತು ಸ್ವಸಹಾಯ ಸಂಘಗಳಿಂದ ಜನಜಾಗೃತಿ ಮಾಡಲಾಗುತ್ತಿದೆ’ ಎಂದರು.

‘ದಾಖಲೆಯಲ್ಲಿ ಶೇ 100 ಶೌಚಾಲಯ ಆಗಿದೆ. ಆದರೆ, ಬೀದಿಗೆ ಬರುವುದು ತಪ್ಪಿಲ್ಲ. ಮನಸ್ಥಿತಿ ಬದಲಾಗದೆ ಇದು ಬದಲಾಗದು’ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಜಿ. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT