ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಣ್ಣಗಾಗಿದ್ದ ಬಿಜೆಪಿ ತುಮುಲ: ಯೋಗೇಶ್ವರ್ ಸೃಷ್ಟಿಸಿದ ಗೊಂದಲ

ಸಿಎಂ ಬದಲು, ಮತ್ತೆ ಹುಯಿಲು
Last Updated 25 ಜೂನ್ 2021, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ‘ಫರ್ಮಾನು’ ಹೊರಡಿಸಿ ನವದೆಹಲಿಗೆ ತೆರಳಿದ ಮೇಲೆ ಮೇಲ್ನೋಟಕ್ಕೆ ತಣ್ಣಗಾದಂತಿದ್ದ ನಾಯಕತ್ವ ಬದಲಾವಣೆಯ ವಿಷಯ ಶುಕ್ರವಾರ ಮತ್ತೆ ಮುನ್ನೆಲೆಗೆ ಬಂದಿದೆ.

ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಇಳಿಸಲು ಮೇಲಿಂದ ಮೇಲೆ ಪಟ್ಟುಗಳನ್ನು ಹಾಕುವವರ ಗುಂಪಿನ ‍ಪ್ರಮುಖ ಪಾತ್ರಧಾರಿಯಾಗಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌, ಕೆಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದರು. ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಅಹವಾಲು ಆಲಿಸಿದಾಗಲೂ ಯೋಗೇಶ್ವರ್‌ ಮಾತನಾಡಿರಲಿಲ್ಲ. ವರಿಷ್ಠರ ಸ್ಪಷ್ಟ ಸೂಚನೆಯೇ ಇದಕ್ಕೆ ಕಾರಣ ಎಂದೂ ಹೇಳಲಾಗಿತ್ತು.

ನಾಯಕತ್ವ ಬದಲಾವಣೆ ಬಿಜೆಪಿಯಲ್ಲಿ ನನೆಗುದಿಗೆ ಬಿದ್ದಿದೆ ಎಂದು ಜನ ಭಾವಿಸಿಕೊಂಡಿರುವ ಹೊತ್ತಿನಲ್ಲೇ ಯೋಗೇಶ್ವರ್‌ ಮತ್ತೆ ಸ್ಫೋಟಕ ಮಾತುಗಳನ್ನು ಆಡಿದ್ದಾರೆ. ‘ಮುಖ್ಯಮಂತ್ರಿ ಬದಲಾವಣೆಯ ಪರೀಕ್ಷೆ ಬರೆದಿದ್ದೇವೆ. ಶೀಘ್ರವೇ ಫಲಿತಾಂಶ ಬರಲಿದೆ’ ಎಂದು ಅವರು ಹೇಳಿರುವುದು ಮತ್ತೊಂದು ಸುತ್ತಿನ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಯಡಿಯೂರಪ್ಪ ಅವರ ಮಕ್ಕಳಾದ ಬಿ.ವೈ. ವಿಜಯೇಂದ್ರ, ಬಿ.ವೈ. ರಾಘವೇಂದ್ರ ಅವರು ಈ ಬೆಳವಣಿಗೆಯ ಆಸುಪಾಸಿನಲ್ಲೇ ದೆಹಲಿಗೆ ಹೋಗಿ ವಾಪಸ್ ಆಗಿರುವುದು, ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ‘ನಿಗೂಢ’ ಚಟುವಟಿಕೆಗಳು ನಡೆಯುತ್ತಿರುವುದರ ಸೂಚಕಗಳಾಗಿವೆ ಎಂದೂ ಹೇಳಲಾಗುತ್ತಿದೆ.

‘ಮುಖ್ಯಮಂತ್ರಿ ಬದಲಾವಣೆಯ ಪರೀಕ್ಷೆ: ಶೀಘ್ರ ಫಲಿತಾಂಶ’

‘ಮುಖ್ಯಮಂತ್ರಿ ಬದಲಾವಣೆ ಸಂಬಂಧಿಸಿದಂತೆ ನಾವೆಲ್ಲ ಪರೀಕ್ಷೆ ಬರೆದಿದ್ದೇವೆ. ಅತೀ ಶೀಘ್ರದಲ್ಲಿ ಫಲಿತಾಂಶ ಹೊರಬೀಳುತ್ತದೆ’ ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ವೈಯಕ್ತಿಕ ಸಮಸ್ಯೆಗಳು, ಸರ್ಕಾರ ಮತ್ತು ಪಕ್ಷದ ಮೂಲಭೂತ ಸಮಸ್ಯೆಗಳ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇನೆ’ ಎಂದು ಹೇಳಿದರು. ‘ಸರ್ಕಾರ ಹಾಗೂ ಪಕ್ಷದ ಮೂಲಭೂತ ಸಮಸ್ಯೆಗಳ ವಿಚಾರವನ್ನು ನಾನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಪರೀಕ್ಷೆ ಬರೆದಿದ್ದೇನೆ, ಅತಿ ಶೀಘ್ರವೇ ಫಲಿತಾಂಶ ಹೊರಬೀಳುತ್ತದೆ’ ಎಂದು ಅವರು ಮಾರ್ಮಿಕವಾಗಿ ನುಡಿದರು.

‘ನಾನೊಬ್ಬ ಜವಾಬ್ದಾರಿಯುತ ಸಚಿವನಾಗಿ ನನ್ನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇನೆ. ವೈಯಕ್ತಿಕ ನೋವುಗಳು ಮತ್ತು ಸಮಸ್ಯೆಗಳನ್ನು ದೆಹಲಿ ನಾಯಕರ ಮುಂದೆ ಹೇಳಿಕೊಂಡಿದ್ದೇನೆ. ಅದರಿಂದ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರ ಉಂಟಾಗಬಾರದು ಎಂಬ ಕಾರಣ ನಾಲ್ಕು ಗೋಡೆಗಳ ಮಧ್ಯೆಯೇ ಮಾತನಾಡಿದ್ದೇನೆ’ ಎಂದು ತಿಳಿಸಿದರು.

ನಾಯಕರ ಹೊಂದಾಣಿಕೆ:‘ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ನನಗೆ ತುಂಬಾ ತೊಂದರೆ ಆಗುತ್ತಿದೆ. ಇಲ್ಲಿ ನಮ್ಮ ಪಕ್ಷದ ನಾಯಕರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಅಡ್ಜೆಸ್ಟ್‌ಮೆಂಟ್‌ ರಾಜಕಾರಣಕ್ಕೆ ಕೊನೆ ಹಾಡಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಅತಿ ಉತ್ತಮ ಸರ್ಕಾರ ಇರಬೇಕು. ಇತರ ಭಾಗಗಳಂತೆ ಹಳೇ ಮೈಸೂರು ಭಾಗದಲ್ಲೂ ಬಿಜೆಪಿ ಪ್ರಬಲವಾಗಿ ಬೇರೂರಬೇಕು ಎಂಬ ಅಪೇಕ್ಷೆ ತೋಡಿಕೊಂಡಿದ್ದೇನೆ’ ಎಂದರು.

ರಮೇಶ ರಾಜೀನಾಮೆ ಕೊಡಲ್ಲ:‘ನಾನು ಮತ್ತು ರಮೇಶ ಜಾರಕಿಹೊಳಿ 20 ವರ್ಷದ ಸ್ನೇಹಿತರು. ಅವರ ಇತ್ತೀಚಿನ ರಾಜಕೀಯ ನಿಲುವಿನ ಬಗ್ಗೆ ಚರ್ಚಿಸಿಲ್ಲ. ಅವರು ಪಕ್ಷಕ್ಕೆ ರಾಜೀನಾಮೆ ಕೊಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯೇಂದ್ರ ದೆಹಲಿ ಭೇಟಿಯ ಗುಟ್ಟು?

ಯಡಿಯೂರಪ್ಪ ಮಗ ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತನ್ನ ಅಣ್ಣ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಜತೆ ನವದೆಹಲಿಗೆ ಹೋಗಿರುವುದರ ಹಿಂದಿನ ಗುಟ್ಟುಗಳ ಬಗ್ಗೆ ಪಕ್ಷದ ವಲಯದಲ್ಲಿ ಗಂಭೀರ ಚರ್ಚೆಗಳು ಶುರುವಾಗಿವೆ.

‘ಈ ವಿಧಾನಸಭೆ ಅವಧಿ ಪೂರ್ಣಗೊಳಿಸುವವರೆಗೆ ಮುಂದುವರಿಯಲು ಯಡಿಯೂರಪ್ಪ ಅವರಿಗೆ ಅವಕಾಶ ಕೊಡಬೇಕು ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಮಕ್ಕಳಿಬ್ಬರು ದೆಹಲಿಗೆ ಹೋಗಿದ್ದರು’ ಎಂದೂ ಹೇಳಲಾಗುತ್ತಿದೆ.

‘ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಗೌರವಯುತವಾಗಿ ಬೀಳ್ಕೊಡಲು ಈ ದಾರಿಯನ್ನು ಪಕ್ಷದ ವರಿಷ್ಠರು ಹುಡುಕಿದ್ದಾರೆ. ದೆಹಲಿಗೆ ಭೇಟಿ ವೇಳೆ, ಯಡಿಯೂರಪ್ಪ ಮಕ್ಕಳಿಗೆ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅದೊಂದನ್ನು ಬಿಟ್ಟರೆ ಬೇರೆ ಯಾವ ಬೇಡಿಕೆಯನ್ನು ಈ ಹಂತದಲ್ಲಿ ಈಡೇರಿಸಲಾಗದು’ ಎಂದು ವರಿಷ್ಠರು ಸೂಚಿಸಿದ್ದಾರೆ ಎಂದು ಬಿಜೆಪಿ ನಾಯಕರ ಮಧ್ಯೆ ಚರ್ಚೆಗಳು ನಡೆಯುತ್ತಿವೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ: ರಮೇಶ ಜಾರಕಿಹೊಳಿ

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಜ’ ಎಂದಿರುವ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ‘ಸರ್ಕಾರ ತೆಗೆದು ಇನ್ನೊಂದು ಸರ್ಕಾರ ಮಾಡುವಷ್ಟು ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಮತ್ತೊಬ್ಬರನ್ನು ಮಂತ್ರಿ ಮಾಡುವ ತಾಕತ್ತಿದೆ’ ಎಂದು ಆರ್ಭಟಿಸಿದ್ದಾರೆ.

ಶುಕ್ರವಾರ ಮೈಸೂರಿನಲ್ಲಿ ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಬೆಳಗಾವಿ ಮರಳಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಗಾಡ್‌ಫಾದರ್‌ ದೇವೇಂದ್ರ ಫಡಣವಿಸ್‌ ಭೇಟಿಯಾಗಲು ಮುಂಬೈಗೆ ಹೋಗಿದ್ದೆ. ಅವರೊಂದಿಗೆ ಚರ್ಚಿಸಿದ್ದನ್ನು ಹೇಳಲಾಗುವುದಿಲ್ಲ. ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುವಷ್ಟು ಸಣ್ಣ ಮನುಷ್ಯ ನಾನಲ್ಲ. ಹೀಗಿರುವಾಗ ನನ್ನನ್ನು ಮಂತ್ರಿ ಮಾಡಿರೆಂದು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ’ ಎಂದರು.

‘ಫಡಣವಿಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿದ್ದಾಗ, ಇಲ್ಲಿ ಆಪರೇಷನ್ ಕಮಲ ಮಾಡಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ತೆಗೆಯುವುದಾಗಿ ಮಾತು ಕೊಟ್ಟಿದ್ದೆ. ಆಗ ನಾನು ಹೇಳಿದ್ದು ನಡೆದಿರುವುದನ್ನು ಅವರಿಗೆ ನೆನಪಿಸಿದೆ. ಅವರು ನನ್ನ ಬೆನ್ನಿಗೆ ನಿಂತಿದ್ದಾರೆ’ ಎಂದರು.

‘ಮುಂಬೈಗೆ ಹೋಗಿದ್ದರಲ್ಲಿ ರಾಜಕಾರಣವಿದೆ. ಅದರಲ್ಲಿ ಮುಚ್ಚು–ಮರೆ ಏನಿಲ್ಲ. ಆದರೆ, ಸುತ್ತೂರು ಮಠಕ್ಕೆ ಹೋಗಿದ್ದರಲ್ಲಿ ರಾಜಕಾರಣವಿಲ್ಲ. ಅವರ ಪೂರ್ವಾಶ್ರಮದ ತಾಯಿ ನಿಧನರಾಗಿದ್ದರಿಂದ ಶ್ರೀಗಳನ್ನು ಮಾತನಾಡಿಸಲು ಹೋಗಿದ್ದೆ’ ಎಂದು ಪ್ರತಿಕ್ರಿಯಿಸಿದರು.

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಜ. ಅದರಲ್ಲಿ ಎರಡು ಮಾತಿಲ್ಲ. ಆಂತರಿಕವಾಗಿ ಮಿತ್ರ ಮಂಡಳಿಯೊಂದಿಗೆ ಈ ಬಗ್ಗೆ ಮಾತನಾಡಿದ್ದೆ. ಅದು ಹೇಗೆ ಸೋರಿಕೆಯಾಯಿತೋ ಗೊತ್ತಿಲ್ಲ. ಇವತ್ತೇ ರಾಜೀನಾಮೆ ಕೊಡುತ್ತೇನೆ ಎಂದಲ್ಲ. 7–8 ದಿನಗಳು ಬಿಟ್ಟು ಎಲ್ಲವನ್ನೂ ತಿಳಿಸುವೆ ಎಂದರು.

‘ಒಂದು ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಬಿಜೆಪಿಯಲ್ಲೇ ಇರುತ್ತೇನೆ. ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ನಲ್ಲಿ 20 ವರ್ಷ ಇದ್ದರೂ ಸಿಗದ ಪ್ರೀತಿ, ವಿಶ್ವಾಸ ಈ ಪಕ್ಷದಲ್ಲಿ ಸಿಕ್ಕಿದೆ. ನನ್ನ ರಾಜಕೀಯ ಜೀವನ ಬಿಜೆಪಿಯಲ್ಲೇ ಕೊನೆಗೊಳ್ಳುತ್ತದೆ’ ಎಂದರು.

ಬೆನ್ನಿಗೆ ಚೂರಿ:

‘ಪಕ್ಷದ ನಾಯಕರೇ ಬೆನ್ನಿಗೆ ಚೂರಿ ಹಾಕಿದರೇ’ ಎಂಬ ಪ್ರಶ್ನೆಗೆ, ‘ಪಕ್ಷ, ಸಂಘ ಪರಿವಾರ ಹಾಗೂ ದೆಹಲಿಯ ಹೈಕಮಾಂಡ್ ನನ್ನನ್ನು ಬಹಳ ಪ್ರೀತಿಯಿಂದ ನಡೆಸಿಕೊಂಡಿದೆ. ಕೆಲವೊಂದು ಜನ ಚೂರಿ ಹಾಕಿದ್ದಾರೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇನೆ’ ಎಂದು ತಿಳಿಸಿದರು.

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಆತುರದ ನಿರ್ಧಾರವಲ್ಲ. ನನ್ನ ಸಹೋದರರು ಶಾಸಕರಾಗಿದ್ದಾರೆ. ನನ್ನ ಮಕ್ಕಳಿದ್ದಾರೆ. ರಮೇಶ ಜಾರಕಿಹೊಳಿ ಮೂಲೆಗುಂಪು ಮಾಡಿದರೆ ಎಲ್ಲವೂ ಮುಗಿದು ಹೋಯಿತು ಎಂದು ನಮ್ಮ ವಿರೋಧಿಗಳು ತಿಳಿದಿರಬಹುದು. ಆದರೆ, ನಮ್ಮ ಮನೆಯಲ್ಲಿ ಹತ್ತು ಪಟ್ಟು ಹುಲಿಗಳಿವೆ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಮುಂದೆ ಹೈಕಮಾಂಡ್‌ ಏನು ನಿರ್ಧಾರ ಕೈಗೊಳ್ಳುತ್ತದೆಯೋ ನೋಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT