ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ವಿರುದ್ಧ ಜಮೀನು ಒತ್ತುವರಿ ಆರೋಪ: ‘ಸಿಎಸ್‌ಗೆ ಮುಕ್ತ ಅವಕಾಶ ಕಲ್ಪಿಸಿ’

Last Updated 17 ಮಾರ್ಚ್ 2023, 0:09 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್‌) ಪ್ರಾಮಾಣಿಕ ಮಹಿಳಾ ಅಧಿಕಾರಿಯಾಗಿದ್ದಾರೆ. ಅಂಥವರು ಮುಕ್ತವಾಗಿ ತಮ್ಮ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು‘ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದೆ.

‘ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ, ಅವರ ಸಂಬಂಧಿ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಮತ್ತಿತರರು ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ‘ಸಮಾಜ ಪರಿವರ್ತನಾ ಸಮುದಾಯ’ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾ. ವೀರಪ್ಪ, ‘ಲೋಕಾಯುಕ್ತ ಆದೇಶ ನೀಡಿ 9 ವರ್ಷಗಳಾದರೂ ಒತ್ತುವರಿ ಜಮೀನು ವಶಪಡಿಸಿಕೊಳ್ಳಲು ಏಕೆ ಮುಂದಾಗಿಲ್ಲ’ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಆದರೆ, ಇದನ್ನು ಬಲವಾಗಿ ಅಲ್ಲಗಳೆದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ‘ಸರ್ಕಾರದ ಒಂದಿಂಚು ಭೂಮಿಯೂ ಒತ್ತುವರಿಯಾಗಲು ಬಿಡುವುದಿಲ್ಲ. ಈ ಪ್ರಕರಣದಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸಲು ಕಟಿಬದ್ಧರಾಗಿದ್ದಾರೆ’ ಎಂಬ ಭರವಸೆ ನೀಡಿದರು.

ಸುದೀರ್ಘ ವಾದ–ಪ್ರತಿವಾದದ ಬಳಿಕ ಅಡ್ವೊಕೇಟ್ ಜನರಲ್ ಅವರ ಭರವಸೆಯನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಸರ್ಕಾರಿ ಆಸ್ತಿಗಳ ರಕ್ಷಣೆ ಮಾಡಲು ಈ ಸರ್ಕಾರಕ್ಕೆ ನಿಜವಾಗಿಯೂ ಆಸಕ್ತಿ ಇದೆಯೇ ಹೇಗೆ ಎಂಬುದನ್ನು ತಿಳಿಯಲು ಕೋರ್ಟ್‌ ಉತ್ಸುಕವಾಗಿದೆ. ಹಾಗಾಗಿ, ಹೈಕೋರ್ಟ್‌ ಆದೇಶ ಜಾರಿಗೆ ಸಂಬಂಧಿಸಿದಂತೆ ನೀವು ಏನು ಮುಂದಡಿ ಇಡುತ್ತೀರಿ ಎಂಬ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ‌ ಕೈಗೊಳ್ಳಲಾಗುವುದು’ ಎಂದು ವಿಚಾರಣೆಯನ್ನು ಮುಂದೂಡಿತು.

ಗಾಬರಿಯಾಗಿದ್ದ ಮುಖ್ಯ ಕಾರ್ಯದರ್ಶಿ: ಕೋರ್ಟ್ ಕಲಾಪದ ವೇಳೆ ನ್ಯಾಯಪೀಠದ ಕಟುನುಡಿಗಳನ್ನು ಕೇಳುತ್ತಿದ್ದಾಗಲೆಲ್ಲಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ತೀವ್ರ ಕಳವಳಕ್ಕೆ ಈಡಾಗಿದ್ದರು.

ಕೋರ್ಟ್ ಹಾಲ್‌ನಲ್ಲಿ ಮುಂದಿನ ಸಾಲಿನಲ್ಲೇ ಕುಳಿತಿದ್ದ ಅವರು, ನ್ಯಾಯಪೀಠ ಸರ್ಕಾರದ ವಿಳಂಬ ಧೋರಣೆಗೆ ಚಾಟಿ ಬೀಸುತ್ತಿದ್ದರೆ, ವಂದಿತಾ ಅವರು ತಮ್ಮ ಎರಡೂ ಕೈಗಳ ಮುಷ್ಟಿ ಬಿಗಿದುಕೊಂಡು ಕಣ್ಮುಚ್ಚಿಕೊಂಡು ಮನಸ್ಸಿನಲ್ಲೇ ಏನನ್ನೋ ಮೌನವಾಗಿ ಧ್ಯಾನಿಸುತ್ತಿದ್ದರು. ಅಂತಿಮವಾಗಿ ನ್ಯಾಯಪೀಠ ಅಡ್ವೊಕೇಟ್ ಜನರಲ್ ಅವರ ಭರವಸೆಯನ್ನು ಮಾನ್ಯ ಮಾಡುತ್ತಿದ್ದಂತೆಯೇ ಹಸನ್ಮುಖರಾಗಿ ಎದ್ದು ನಿಂತು ಸಮಾಧಾನದ ನಿಟ್ಟುಸಿರುಬಿಟ್ಟು ನ್ಯಾಯಪೀಠಕ್ಕೆ ಕೈಮುಗಿದು ನಿರ್ಗಮಿಸಿದರು.

ದೂರುದಾರರ ಪರ ಹಿರಿಯ ವಕೀಲ ಎಸ್.ಬಸವರಾಜ್ ವಾದ ಮಂಡಿಸಿದರು. ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ ಅವರೂ ಹಾಜರಿದ್ದರು.

ಪ್ರಕರಣವೇನು?: ‘ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ 14 ಎಕರೆಗೂ ಹೆಚ್ಚು ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ’ ಎಂದು ಆರೋಪಿಸಿ ಮಾಜಿ ಸಂಸದ ದಿವಂಗತ ಜಿ. ಮಾದೇ
ಗೌಡ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

‘ಈ ದೂರಿನ ಬಗ್ಗೆ ತನಿಖೆ ನಡೆಸಬೇಕು’ ಎಂದು ಲೋಕಾಯುಕ್ತರು ಕಂದಾಯ ಇಲಾಖೆಗೆ 2014ರಲ್ಲಿ ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಆದರೆ, ‘ಈ ಆದೇಶವನ್ನು ಇನ್ನೂ ಪಾಲನೆ ಮಾಡಿಲ್ಲ’ ಎಂದು ಆರೋಪಿಸಿ ಈ ಅರ್ಜಿ ಸಲ್ಲಿಸಲಾಗಿದೆ.

ಸ್ಮಶಾನ ಕೊರತೆ: ಮಾಹಿತಿಗೆ ಸೂಚನೆ
ಬೆಂಗಳೂರು: ‘ರಾಜ್ಯದ ಯಾವ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲ ಎಂಬ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳಿಂದ ಮಾಹಿತಿ ಪಡೆದುಕೊಳ್ಳಿ’ ಎಂದು ಹೈಕೋರ್ಟ್‌, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.

‘ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗಿಲ್ಲ’ ಎಂದು ಆಕ್ಷೇಪಿಸಿ ಬೆಂಗಳೂರಿನ ಮೊಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ವೆಂಕಟೇಶ್ ಟಿ.ನಾಯಕ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಸಾರ್ವಜನಿಕರಿಗೆ ನೀರು, ರಸ್ತೆ ಮತ್ತು ಸ್ಮಶಾನ ಭೂಮಿ ಒದಗಿಸುವುದು ಸರ್ಕಾರಗಳ ಕರ್ತವ್ಯ. ಇವೆಲ್ಲಾ ಕೇವಲ ದಾಖಲೆಗಳಲ್ಲಿ ಮಾತ್ರವೇ ಅನುಷ್ಠಾನಗೊಂಡಂತೆ ಇರಬಾರದು’ ಎಂದು ಸೂಚಿಸಿ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT