ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಬಾಲ ಪೀಠಾಧಿಪತಿ ಪ್ರಕರಣ: ನಾಗಾನಂದ ಅಮಿಕಸ್ ಕ್ಯೂರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉಡುಪಿಯ ಶೀರೂರು ಮಠದ ಪೀಠಾಧಿಪತಿಯನ್ನಾಗಿ ಅಪ್ರಾಪ್ತರನ್ನು ನೇಮಕ ಮಾಡಿರುವ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲಹೆ ನೀಡಲು ವಕೀಲ ಎಸ್.ಎಸ್.ನಾಗಾನಂದ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಿಸಿ ಹೈಕೋರ್ಟ್‌ ಆದೇಶಿಸಿದೆ.

ಮಠದ ಭಕ್ತ ಪಿ. ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಹೊರಡಿಸಿದೆ.

ಅರ್ಜಿಯ ಪ್ರತಿ ಹಾಗೂ ಇತರ ದಾಖಲೆಗಳನ್ನು ಅಮಿಕಸ್ ಕ್ಯೂರಿ ಅವರಿಗೆ ಒದಗಿಸಬೇಕು ಎಂದು ತಿಳಿಸಿದ ಪೀಠ, ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿತು. ವಿಚಾರಣೆಯನ್ನು ಸೆ.23ಕ್ಕೆ ನಿಗದಿಪಡಿಸಿತು.

‘ಬಾಲ ಸನ್ಯಾಸಿಗಳನ್ನು ಮಠದ ಪೀಠಾಧಿಪತಿ ಮಾಡುವ ಸಂಪ್ರದಾಯ ತಲೆ ತಲಾಂತರಗಳಿಂದ ಇದೆ. ಶಂಕರಾಚಾರ್ಯರು 12ನೇ ವಯಸಿನಲ್ಲಿ, ಮಧ್ವಾಚಾರ್ಯರು 10ನೇ ವಯಸಿನಲ್ಲಿ ಸನ್ಯಾಸ ಸ್ವೀಕರಿಸಿ ಪೀಠಾಧಿಪತಿ ಆಗಿದ್ದರು. ಬಾಲ ಸನ್ಯಾಸಿಗೆ ದೀಕ್ಷೆ ಕೊಡಿಸಿ, ಧರ್ಮಶಾಸ್ತ್ರ, ವೇದ ಮತ್ತು ಉಪನಿಷತ್ತುಗಳನ್ನು ಬೋಧಿಸಿದ ಬಳಿಕ ಅವರನ್ನು ಪೀಠಾಧಿಪತಿ ಮಾಡಲಾಗುತ್ತದೆ. ಇದಕ್ಕೆ ಕಾನೂನಿನ ನಿರ್ಬಂಧ ಇಲ್ಲ. ಬಲವಂತವಾಗಿ ಸನ್ಯಾಸ ಹೇರಿಲ್ಲ’ ಎಂದು ಸೋದೆ ವಾದಿರಾಜ ಮಠದ ಪರ ವಕೀಲರು ವಾದಿಸಿದರು.

‘16 ವರ್ಷದ ಬಾಲಕನನ್ನು ಪೀಠಾಧಿಪತಿ ಮಾಡುವ ಮೂಲಕ ಮಕ್ಕಳ ಹಕ್ಕು ಉಲ್ಲಂಘಿಸಲಾಗಿದೆ. 18 ವರ್ಷ ತುಂಬದೇ ಇರುವವರು ನೀಡುವ ಸಮ್ಮತಿಗೂ ಮಾನ್ಯತೆ ಇಲ್ಲ. ಪ್ರಕರಣದಲ್ಲಿ ಅಪ್ರಾಪ್ತರ ಹಕ್ಕುಗಳ ಉಲ್ಲಂಘನೆ. ನ್ಯಾಯಾಲಯ ಅವುಗಳನ್ನು ಪರಿಶೀಲಿಸಬೇಕು’ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.

‘ಇದು ಗಂಭೀರ ವಿಚಾರವಾಗಿದ್ದು, ಬಾಲ ಸನ್ಯಾಸತ್ವ ಮತ್ತು ಮಠಾಧಿಪತಿ ನೇಮಕ ನಿರ್ಬಂಧಿಸಲು ಕಾನೂನು ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ’ ಎಂದು ಪೀಠ ಹೇಳಿತು. ಅಗತ್ಯ ನೆರವು ನೀಡಲು ಅಮಿಕಸ್ ಕ್ಯೂರಿ ಅವರನ್ನು ನೇಮಿಸಿ ಆದೇಶಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು