ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ವಿಷಬೀಜದ ಮತ್ತೊಂದು ಹೆಸರು ತೇಜಸ್ವಿ ಸೂರ್ಯ: ಡಿ.ಕೆ. ಶಿವಕುಮಾರ್

Last Updated 11 ಮೇ 2021, 13:05 IST
ಅಕ್ಷರ ಗಾತ್ರ

ಬೆಂಗಳೂರು: 'ರಾಜ್ಯದಲ್ಲಿ ಕೋಮುವಾದದ ವಿಷಬೀಜಕ್ಕೆ ಇರುವ ಮತ್ತೊಂದು ಹೆಸರು ಸಂಸದ ತೇಜಸ್ವಿ ಸೂರ್ಯ. ಮಾಧ್ಯಮಗಳ ಮುಂದೆ ಮುಸಲ್ಮಾನರ ಹೆಸರುಗಳನ್ನು ಓದಿದ್ದು ಈತನೊ ಅಥವಾ ಅಧಿಕಾರಿಗಳೋ. ಮಾಡುವುದೆಲ್ಲ ಮಾಡಿ ಅಧಿಕಾರಿಗಳನ್ನು ಸಿಕ್ಕಿಸಲು ನೋಡುತ್ತಿದ್ದಾನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಆ ಸಂಸದರನ್ನು ಏನೆಂದು ಕರೆಯಬೇಕೊ ಗೊತ್ತಾಗುತ್ತಿಲ್ಲ. ಪತ್ರಿಕಾಗೋಷ್ಠಿಯಲ್ಲಿ 17 ಜನರ ಹೆಸರು ಓದಿದ್ದು ಈ ಮಹಾನುಭಾವ ಅಲ್ಲವೇ. ಈಗ ಅಧಿಕಾರಿಗಳು ಕೊಟ್ಟ ಹೆಸರು ಓದಿದೆ ಅಂತಿದ್ದಾರೆ. ಅಧಿಕಾರಿಗಳೇಕೆ ಕೇವಲ 17 ಜನರ ಹೆಸರು ಕೊಡುತ್ತಾರೆ? ಅವರು ಕೊಟ್ಟರೆ ಎಲ್ಲರ ಹೆಸರು ಕೊಡುತ್ತಿದ್ದರು. ತಮ್ಮ ತಪ್ಪನ್ನು ಅಧಿಕಾರಿಗಳ ಮೇಲೆ ಹೊರಿಸುತ್ತಿದ್ದಾರೆ’ ಎಂದರು.

‘ಮೂರನೇ ಅಲೆ ಬಗ್ಗೆ ಮುಖ್ಯಮಂತ್ರಿ ಎಚ್ಚರಿಕೆ ಕೊಟ್ಟಿದ್ದಾರೆ. ಅದಕ್ಕೆ ಅವರು ಸಿದ್ಧತೆ ಮಾಡಿಕೊಳ್ಳಲಿ. ಅದಕ್ಕೂ ಮೊದಲು ಈಗ ಬಂದಿರುವ 2ನೇ ಅಲೆ ನಿಯಂತ್ರಿಸಲು ಕಾರ್ಯಕ್ರಮ ರೂಪಿಸಲಿ. ಲಸಿಕೆ ಕೊಡುತ್ತೇವೆ, ನೋಂದಣಿ ಮಾಡಿಸಿ ಎಂದು ಹೇಳಿದರು. ನಾನು ನನ್ನ ಮಕ್ಕಳಿಗೆ ನೋಂದಣಿ ಮಾಡಿಸಲು ಆನ್‌ಲೈನ್‌ನಲ್ಲಿ ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಲಿಲ್ಲ. ನೀವು ಬೇಕಾದರೆ ಪ್ರಯತ್ನಿಸಿ. ಸರ್ಕಾರಕ್ಕೆ ಯಾವುದೇ ಸ್ಪಷ್ಟತೆಯೂ ಇಲ್ಲ’ ಎಂದರು.

‘ಸಿಇಟಿಯಲ್ಲಿ ಯಾವ ಕಾಲೇಜಿನಲ್ಲಿ ಯಾವ್ಯಾವ ಸೀಟು ಎಷ್ಟೆಷ್ಟು ಇದೆ ಎಂದು ತೋರಿಸುವ ರೀತಿಯಲ್ಲಿ ಯಾವ ಆಸ್ಪತ್ರೆಯಲ್ಲಿ ಹಾಸಿಗೆ, ಆಮ್ಲಜನಕ ಇದೆ. ಲಸಿಕೆ ಎಲ್ಲಿ ನೀಡಲಾಗುತ್ತದೆ ಎಂದು ಸಂಪೂರ್ಣ ಮಾಹಿತಿಯನ್ನು ಜನರಿಗೆ ಕೊಡಲಿ’ ಎಂದು ಆಗ್ರಹಿಸಿದರು.

‘ಶಿವಮೊಗ್ಗದಲ್ಲಿ ಒಬ್ಬ ಸಚಿವ, ಜನರಿಗೆ ಪರಿಹಾರ ಕೊಡಲು ನಮ್ಮ ಬಳಿ ನೋಟು ಮುದ್ರಿಸುವ ಯಂತ್ರ ಇಲ್ಲ ಎಂದಿದ್ದಾರೆ. ಆದರೆ, ಅದೇ ಸಚಿವ ಹಿಂದೆ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿರಲಿಲ್ಲವೇ. ನಿಮಗೆ ಪರಿಹಾರ ಕೊಡಕ್ಕೆ ಆಗದಿದ್ದರೆ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಹೇಳಿ. ಜನ ನೋವಿಗೆ ಸಿಲುಕಿದ್ದಾರೆ. ಹೀಗಾಗಿ ಪರಿಹಾರ ಕೇಳುತ್ತಿದ್ದಾರೆ. ನೀವು ಲಾಕ್ ಡೌನ್ ಮಾಡಿರುವುದಕ್ಕೆ ಅವರು ಪರಿಹಾರ ಕೇಳುತ್ತಿದ್ದಾರೆ. ನೆರೆ ರಾಜ್ಯಗಳಲ್ಲಿ ಪರಿಹಾರ ಕೊಡುತ್ತಿದ್ದಾರೆ. ನಿಮ್ಮನ್ನು ಪರಿಹಾರ ಕೇಳದೆ ಬೇರೆ ಯಾರನ್ನು ಕೇಳಬೇಕು’ ಎಂದು ಪ್ರಶ್ನಿಸಿದರು.

‘ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವವರಿಗೆ ಸರ್ಕಾರ ತಕ್ಷಣ ಆರ್ಥಿಕ ನೆರವು ಪ್ಯಾಕೇಜ್ ಘೋಷಿಸಿ ತಿಂಗಳಿಗೆ ₹ 10 ಸಾವಿರ ನೀಡಬೇಕು. ತರಕಾರಿ ಬೆಳೆದ ರೈತನಿಂದ ಬೆಳೆ ಖರೀದಿಯಾಗುತ್ತಿಲ್ಲ. ಕೃಷಿ, ತೋಟಗಾರಿಕೆ ಸಚಿವರೇ, ಯಾವ ರೈತನ ಬಳಿ ಹೋಗಿ ಬೆಳೆ ಖರೀದಿ ಮಾಡಿದ್ದೀರಿ? ಅವರ ಜತೆ ಏನಾದರೂ ಮಾತನಾಡಿದ್ದೀರಾ. ಎಪಿಎಂಸಿಗಳಿಗೆ ಭೇಟಿ ಕೊಟ್ಟು, ರೈತರ ಸಂಕಷ್ಟ ಆಲಿಸಿ. ಕೇವಲ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರೆ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT