ಶನಿವಾರ, ಅಕ್ಟೋಬರ್ 8, 2022
21 °C

ಎಸಿಬಿ ಕಡತಗಳನ್ನು ವರ್ಗಾಯಿಸಲು ಕೋರಿಕೆ: ಪ್ರಕರಣ ಹಸ್ತಾಂತರಕ್ಕೆ ಲೋಕಾಯುಕ್ತ ಪತ್ರ

ವಿ.ಎಸ್‌.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಲ್ಲಿ(ಎಸಿಬಿ) ತನಿಖಾ ಹಂತದಲ್ಲಿರುವ ಮತ್ತು ತನಿಖೆ ಪೂರ್ಣಗೊಂಡು ವಿಚಾರಣಾ ಹಂತದಲ್ಲಿರುವ ಎಲ್ಲ ಪ್ರಕರಣಗಳ ಕಡತಗಳನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ತ್ವರಿತವಾಗಿ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಎಸಿಬಿ ರಚಿಸುವ ಆದೇಶವನ್ನು ರದ್ದುಗೊಳಿಸಿ ಆಗಸ್ಟ್‌ 11ರಂದು ತೀರ್ಪು ನೀಡಿದ್ದ ಹೈಕೋರ್ಟ್‌, ತನಿಖಾ ಹಂತದಲ್ಲಿರುವ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿತ್ತು. ಆದರೆ, ರಾಜ್ಯ ಸರ್ಕಾರ ಪೂರಕ ಆದೇಶ ಹೊರಡಿಸದ ಕಾರಣದಿಂದ ಕಡತಗಳು ಎಸಿಬಿಯಲ್ಲೇ ಉಳಿದಿವೆ.

ಒಟ್ಟು 2,149 ಪ್ರಕರಣಗಳು ಎಸಿಬಿಯಲ್ಲಿ ತನಿಖಾ ಹಂತದಲ್ಲಿವೆ. ಹೈಕೋರ್ಟ್‌ ವಿಭಾಗೀಯ ಪೀಠದ ತೀರ್ಪು ಪ್ರಕಟವಾದ ದಿನದಿಂದಲೇ ಎಸಿಬಿ ಅಧಿಕಾರಿಗಳು ತನಿಖೆ ಸ್ಥಗಿತಗೊಳಿಸಿದ್ದಾರೆ.

ತನಿಖಾ ಹಂತದ ಎಲ್ಲ ಪ್ರಕರಣಗಳ ಕಡತ ಮತ್ತು ದಾಖಲೆಗಳನ್ನು ಗಂಟು ಕಟ್ಟಿ ಒಂದೆಡೆ ಇರಿಸಿರುವ ಎಸಿಬಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಆದೇಶ ಹೊರಬೀಳುವುದನ್ನೇ ಕಾಯುತ್ತಿದ್ದಾರೆ.

‘ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಕಳೆದ ವಾರ ಪತ್ರವೊಂದನ್ನು ಬರೆದಿರುವ ಲೋಕಾ ಯುಕ್ತರು, ಎಸಿಬಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬೇಕೆಂಬ ಹೈಕೋರ್ಟ್‌ ಆದೇಶ ಪಾಲಿಸುವಂತೆ ಕೋರಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ.11ರಂದು ಹೈಕೋರ್ಟ್‌ ತೀರ್ಪು ಪ್ರಕಟವಾದ ಬಳಿಕ ಎಸಿಬಿ ತನ್ನ ಕೆಲಸ ಸ್ಥಗಿತಗೊಳಿಸಿದೆ. ತನಿಖಾ ಹಂತದಲ್ಲಿರುವ ಪ್ರಕರಣಗಳು ಮತ್ತು ವಿಚಾರಣೆಗಳಿಗೆ ಸಂಬಂಧಿಸಿದ ಕಡತಗಳು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೂ ವರ್ಗಾವಣೆಯಾಗಿಲ್ಲ’ ಎಂಬ ಉಲ್ಲೇಖ ಪತ್ರದಲ್ಲಿದೆ.

ವಿಚಾರಣಾ ಹಂತದಲ್ಲೂ ಇಕ್ಕಟ್ಟು: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಸಿಬಿ ಪೊಲೀಸರು ದಾಖಲಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಿಚಾರಣೆಗಳಲ್ಲೂ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ.

ಎಸಿಬಿ ರದ್ದುಗೊಂಡಿರುವುದರಿಂದ ಆ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ ವಕೀಲರು ವಿಚಾರಣೆಗೆ ಹಾಜರಾಗುತ್ತಿಲ್ಲ. ಈ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳೇ ಲೋಕಾಯುಕ್ತಕ್ಕೆ ತಲುಪದಿರುವುದರಿಂದ ಲೋಕಾಯುಕ್ತದ ಪರ ವಕೀಲರೂ ವಿಚಾರಣೆಯಲ್ಲಿ ವಾದ ಮಂಡಿಸಲು ಆಗುತ್ತಿಲ್ಲ.

‘ಒಂದು ವಾರದಿಂದ ಈಚೆಗೆ ಹಲವು ಪ್ರಕರಣಗಳಲ್ಲಿ ಇಂತಹ ಇಕ್ಕಟ್ಟಿನ ಸನ್ನಿವೇಶ ನಿರ್ಮಾಣವಾಗಿತ್ತು. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಯಲ್ಲಿ ಹಿನ್ನಡೆ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ನೋಟಿಸ್‌ ಪಡೆದುಕೊಂಡು ಮುಂದಿನ ಕ್ರಮ ವಹಿಸುವಂತೆ ಸಂಸ್ಥೆಯ ವಕೀಲರಿಗೆ ಲೋಕಾಯುಕ್ತರು ಸೂಚಿಸಿದ್ದರು. ಈಗ ಹಲವು ಪ್ರಕರಣಗಳಲ್ಲಿ ಲೋಕಾಯುಕ್ತದ ವಕೀಲರೇ ನೋಟಿಸ್‌ ಸ್ವೀಕರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಹೈಕೋರ್ಟ್‌ ಮತ್ತು ವಿಚಾರಣಾ ನ್ಯಾಯಾಲಯದಿಂದ ತನಿಖಾ ತಂಡದ ಪ್ರತಿನಿಧಿಯಾಗಿ ನೋಟಿಸ್‌ ಸ್ವೀಕರಿಸಿದ ಬಳಿಕವೂ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳು ಇಲ್ಲದ ಕಾರಣದಿಂದ ಮುಂದಿನ ವಾದ ಮಂಡನೆಗೆ ಸಿದ್ಧತೆ ನಡೆಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಎಸಿಬಿ ಅಧಿಕಾರಿಗಳಿಗೆ ಪತ್ರ ಬರೆದು ಕೆಲವು ಪ್ರಕರಣಗಳ ಕಡತಗಳನ್ನು ತರಿಸಿಕೊಳ್ಳಲಾಗಿದೆ.

ಸಿಬ್ಬಂದಿ ಬಲ ಹೆಚ್ಚಿಸಲು ಪ್ರಸ್ತಾವ
ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನೂ ನಡೆಸಬೇಕಿರುವುದರಿಂದ ಲೋಕಾಯುಕ್ತ ಪೊಲೀಸ್‌ ವಿಭಾಗದ ಬಲ ಹೆಚ್ಚಿಸಬೇಕು ಎಂಬ ಪ್ರಸ್ತಾವವನ್ನು ಸರ್ಕಾರದ ಮುಂದಿಡಲು ಲೋಕಾಯುಕ್ತರು ಸಿದ್ಧತೆ ನಡೆಸಿದ್ದಾರೆ.

ಎಸಿಬಿಯಲ್ಲಿರುವ ಅನುಭವಿ, ಕಳಂಕರಹಿತ ಅಧಿಕಾರಿಗಳನ್ನು ಆಯ್ದು ಲೋಕಾಯುಕ್ತ ಪೊಲೀಸ್‌ ವಿಭಾಗದಲ್ಲಿ ನಿಯೋಜಿಸಲು ಲೋಕಾಯುಕ್ತರು ನಿರ್ಧರಿಸಿದ್ದಾರೆ. ಲೋಕಾಯುಕ್ತದಲ್ಲಿ ಹಾಲಿ ಇರುವ ಪೊಲೀಸ್‌ ಅಧಿಕಾರಿಗಳಲ್ಲಿ ಕೆಲವರನ್ನು ಬದಲಾವಣೆ ಮಾಡುವ ಯೋಚನೆಯೂ ಇದೆ ಎಂದು ಮೂಲಗಳು ತಿಳಿಸಿವೆ.

*
ಈಗ ಉಂಟಾಗಿರುವ ನಿರ್ವಾತದ ಸ್ಥಿತಿಯು ಎಸಿಬಿಯಲ್ಲಿರುವ ಪ್ರಕರಣಗಳ ತನಿಖೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರಕರಣಗಳನ್ನು ಹಸ್ತಾಂತರಿಸುವಂತೆ ಕೋರಿದ್ದೇನೆ.
-ನ್ಯಾ. ಬಿ.ಎಸ್‌. ಪಾಟೀಲ, ಲೋಕಾಯುಕ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು