ಭಾನುವಾರ, ಏಪ್ರಿಲ್ 11, 2021
29 °C
ಶೇ 50ರಷ್ಟು ಗುತ್ತಿಗೆ ಸಿಬ್ಬಂದಿ ಕೆಲಸದಿಂದ ಬಿಡುಗಡೆ

ಎಪಿಎಂಸಿ: ಸಿಬ್ಬಂದಿಯೂ ಇಲ್ಲ, ಆದಾಯವೂ ಇಲ್ಲ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೃಷಿ ಉತ್ಪನ್ನ ಮಾರುಕಟ್ಟೆಯ ಹೊರಗಡೆ ಮಾರಾಟವಾಗುವ ಕೃಷಿ ಉತ್ಪನ್ನಗಳಿಗೆ ವಿಧಿಸುತ್ತಿದ್ದ ಸೆಸ್‌ ಸಂಗ್ರಹಕ್ಕೆ ಕಡಿವಾಣ ಬಿದ್ದ ಮೇಲೆ ಹುಬ್ಬಳ್ಳಿಯ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ ಆದಾಯ ಕುಸಿತವಾಗಿದೆ. ನಿರ್ವಹಣೆ ವೆಚ್ಚ ಭರಿಸಲಾಗದೆ ಶೇ 50ರಷ್ಟು ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ.

ಮಾರುಕಟ್ಟೆ ಹೊರಗಡೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ವಹಿವಾಟಿಗೆ ಅವಕಾಶ ನೀಡಿರುವುದು ಹಾಗೂ ವ್ಯಾಪಾರಸ್ಥರಿಂದ ಸಂಗ್ರಹಿಸುತ್ತಿದ್ದ ಸೆಸ್ ಪ್ರಮಾಣ ಕಡಿತಗೊಳಿಸಲಾಗಿದೆ. ಇದರಿಂದಾಗಿ 2019 ಜನವರಿಗೆ ₹7.86 ಕೋಟಿಯಿಂದ 2020ರ ಜನವರಿಗೆ ₹1.72 ಕೋಟಿಗೆ ಕುಸಿದಿದೆ. 

2020ರ ಆಗಸ್ಟ್‌ನಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಮಾರುಕಟ್ಟೆ ಪ್ರಾಂಗಣದ ಹೊರಗೆ ಮುಕ್ತ ವಹಿವಾಟಿಗೆ ಅವಕಾಶ ಕಲ್ಪಿಸಿದ ನಂತರ ಹೊರಗಡೆ ನಡೆಯುತ್ತಿದ್ದ ವಹಿವಾಟಿನಿಂದ ಬರುತ್ತಿದ್ದ ಆದಾಯ ನಿಂತು ಹೋಗಿದೆ. ಜೊತೆಗೆ ಈ ಮೊದಲು ಎಪಿಎಂಸಿಯ ಒಳಗೆ ವ್ಯಾಪಾರಸ್ಥರಿಂದ ಪ್ರತಿ ₹100 ವಹಿವಾಟಿಗೆ ಒಂದೂವರೆ ರೂಪಾಯಿ ಸೆಸ್‌ ಸಂಗ್ರಹಿಸಲಾಗುತ್ತಿತ್ತು. ಅದನ್ನು ಈಗ 60 ಪೈಸೆಗೆ ಇಳಿಸಿರುವುದೂ ಆದಾಯ ಕುಸಿತಕ್ಕೆ ಕಾರಣವಾಗಿದೆ.

ಕಾಳು ಹಾಗೂ ತರಕಾರಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿರುವ ಮಾರುಕಟ್ಟೆಗೆ ಧಾರವಾಡ ಜಿಲ್ಲೆಯಲ್ಲದೆ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಕೊಪ್ಪಳ ಮುಂತಾದ ಜಿಲ್ಲೆಗಳಿಂದಲೂ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ.

ಎರಡೂವರೆ ವರ್ಷಗಳಲ್ಲಿ ಆರು ಮಂದಿ ಹೆಚ್ಚುವರಿ ನಿರ್ದೇಶಕರು

ಎರಡೂವರೆ ವರ್ಷಗಳಲ್ಲಿ ಆರು ಮಂದಿ ಹೆಚ್ಚುವರಿ ನಿರ್ದೇಶಕರಾಗಿದ್ದಾರೆ. ಅವರಲ್ಲಿ ನಾಲ್ವರು ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪೂರ್ಣ ಪ್ರಮಾಣದ ಹೆಚ್ಚುವರಿ ನಿರ್ದೇಶಕರನ್ನು ನೀಡದ ಪರಿಣಾಮ ಎಪಿಎಂಸಿ ಆಡಳಿತ ಸರಾಗವಾಗಿ ಸಾಗುತ್ತಿಲ್ಲ.

2018ರಲ್ಲಿ ಬೆಳಗಾವಿ ಎಪಿಎಂಸಿ ಕಾರ್ಯದರ್ಶಿಯಾಗಿದ್ದ ಗುರುಪ್ರಸಾದ, ನಂತರ ಏಳು ತಿಂಗಳ ಕಾರ್ಯ ನಿರ್ವಹಿಸಿದ ಬ್ಯಾಡಗಿ ಎಪಿಎಂಸಿಯ ಕಾರ್ಯದರ್ಶಿ ಎಸ್‌.ಬಿ. ನ್ಯಾಮಗೌಡರ, ಈಗ ಬೆಳಗಾವಿ ಎಪಿಎಂಸಿ ಕಾರ್ಯದರ್ಶಿಯಾಗಿರುವ ಕೆ. ಕೊಡಿಗೌಡರ ಸೇರಿದಂತೆ ಹಲವು ಇಲ್ಲಿನ ಪ್ರಭಾರಿ ಹೆಚ್ಚುವರಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ವಾರದಲ್ಲಿ ಎರಡರಿಂದ ಮೂರು ದಿನ ಮಾತ್ರ ಇಲ್ಲಿಗೆ ಬರುವುದರಿಂದ ಆಡಳಿತ ಕುಂಠಿತಗೊಂಡಿದೆ.

ಎಪಿಎಂಸಿಯಲ್ಲಿ 47 ಮಂದಿ ಕಾಯಂ ಸಿಬ್ಬಂದಿ ಇರಬೇಕಾಗಿತ್ತು. 17 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 30 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆಯಿಂದಾಗಿ ಕೆಲಸದ ಒತ್ತಡ ಜಾಸ್ತಿಯಾಗಿದ್ದು, ಇಲ್ಲಿರಲು ಯಾರೂ ಬಯಸುತ್ತಿಲ್ಲ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸಿಬ್ಬಂದಿಯೊಬ್ಬರು ಹೇಳಿದರು.

ಸಿಬ್ಬಂದಿ ಕಡಿತ

ಎಪಿಎಂಸಿ ಆದಾಯ ಕುಸಿತದ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲಿದ್ದ ಶೇ 50ರಷ್ಟು ಸಿಬ್ಬಂದಿ ಕಡಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಅದರ ಪ್ರಕಾರ ಹುಬ್ಬಳ್ಳಿಯಲ್ಲಿನ ಗುತ್ತಿಗೆ ಸಿಬ್ಬಂದಿ ಸಂಖ್ಯೆಯನ್ನೂ ಕಡಿತ ಮಾಡಲಾಗಿದೆ ಎಂದು ಪ್ರಭಾರಿ ಹೆಚ್ಚುವರಿ ನಿರ್ದೇಶಕ ಕೆ. ಕೋಡಿಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು