ಭಾನುವಾರ, ಏಪ್ರಿಲ್ 11, 2021
33 °C

ಅಡಿಕೆಗೆ ಡ್ರಗ್ಸ್‌ ಪಟ್ಟ: ಬಿಜೆಪಿ ಶಾಸಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ನಲ್ಲಿ ಅಡಿಕೆಯನ್ನು ಡ್ರಗ್ಸ್‌ ಆ್ಯಂಡ್ ನಾರ್ಕೊಟಿಕ್‌ ವಿಭಾಗದಲ್ಲಿ ಸೇರಿಸಲಾಗಿದ್ದು, ಈ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಹಲವು ಶಾಸಕರು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಶುಕ್ರವಾರ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಹರತಾಳು ಹಾಲಪ್ಪ, ‘ಸರ್ಕಾರದ ಸೂಚನೆಯ ಮೇರೆಗೆ ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆಯೇ ಅಥವಾ ಅಧಿಕಾರಿಗಳೇ ಈ ತೀರ್ಮಾನ ತೆಗೆದುಕೊಂಡಿದ್ದಾರಾ’ ಎಂದು ಪ್ರಶ್ನಿಸಿದರು.

‘ಈ ವಿಭಾಗದಲ್ಲಿ ಸೇರಿಸಿದ್ದರಿಂದ ಒಂದೇ ದಿನದಲ್ಲಿ ಅಡಿಕೆಯ ಧಾರಣೆ ₹5 ಸಾವಿರದಷ್ಟು ಕಡಿಮೆ ಆಗಿದೆ. ಈಗ ಅಡಿಕೆ ಕೊಯಿಲಿನ ಸಮಯ. ಅಡಿಕೆ ಕೊಯಿಲಿಗೆ ಬಂದಾಗಲೇ ಇಂತಹ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಬೆಲೆ ಕುಸಿದು ರೈತರಿಗೆ ಅನ್ಯಾಯವಾಗುತ್ತಿದೆ’ ಎಂದರು.

ಆರಗ ಜ್ಞಾನೇಂದ್ರ, ‘ವೆಬ್‌ಸೈಟ್‌ನಲ್ಲಿ ಅಡಿಕೆಯನ್ನು ಸೇರಿಸಿದ ಮಹಾನುಭವರು ಯಾರು ಎಂಬ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ಮಾಡಾಳು ವಿರೂಪಾಕ್ಷಪ್ಪ, ಎಂ.ಪಿ.ಕುಮಾರಸ್ವಾಮಿ ಮತ್ತಿತರರು ಧ್ವನಿಗೂಡಿಸಿದರು.

ಪ್ರತಿಕ್ರಿಯಿಸಿದ ಗೃಹ ಹಾಗೂ ಕಾನೂನು ಸಚಿವ ಬಸವರಾಜ ಬೊಮ್ಮಾಯಿ , ‘ಎಪಿಎಂಸಿ ಸಚಿವರ ಗಮನಕ್ಕೆ ತಂದು ಈ ಲೋಪ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು