ಸೋಮವಾರ, ಅಕ್ಟೋಬರ್ 19, 2020
24 °C
2008 ರಿಂದ ನನೆಗುದಿಗೆ: ರಾಜ್ಯದಲ್ಲಿ 1,450 ಹುದ್ದೆಗಳು ಖಾಲಿ

ಚಿತ್ರಕಲಾ ಶಿಕ್ಷಕರ ನೇಮಕಾತಿ ಇಲ್ಲದೇ 12 ವರ್ಷ

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಚಿತ್ರಕಲಾ ಪದವಿ ಪಡೆದು ಶಿಕ್ಷಕರಾಗಿ ಸರ್ಕಾರಿ ಉದ್ಯೋಗ ಪಡೆಯುವ ಆಸೆ ಬಹಳಷ್ಟು ಚಿತ್ರಕಲಾ ಶಿಕ್ಷಕರದ್ದು. ಆದರೆ ನೇಮಕಾತಿ ಪ್ರಕ್ರಿಯೆ ಮಾತ್ರ ನಡೆಯುತ್ತಿಲ್ಲ. 2008ರ ನಂತರ ಈವರೆಗೆ ಚಿತ್ರಕಲಾ ಶಿಕ್ಷಕರ ನೇಮಕಾತಿಯೇ ನಡೆದಿಲ್ಲ.

ಚಿತ್ರಕಲೆಯಲ್ಲಿ ಡಿಎಂಸಿ, ಆರ್ಟ್‌ ಮಾಸ್ಟರ್‌ ಡಿಪ್ಲೊಮಾ ಪಡೆದವರು ನೌಕರಿಗಾಗಿ ಕಾದು ಕಾದು ಹಲವರ ವಯಸ್ಸು ಮೀರಿದೆ; ಕೆಲವರಿಗೆ ಮೀರುವ ಹಂತದಲ್ಲಿದೆ. ಸರ್ಕಾರಿ ಹುದ್ದೆಯ ಆಸೆ ಬಿಟ್ಟು ವಿವಿಧ ಕ್ಷೇತ್ರಗಳಲ್ಲಿ ಬದುಕು ಕಂಡುಕೊಳ್ಳುವತ್ತ ಮುಖಮಾಡಿದ್ದಾರೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಚಿತ್ರಕಲಾ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಸುಮಾರು 1,450 ಚಿತ್ರಕಲಾ ಶಿಕ್ಷಕರ ಹುದ್ದೆ ಖಾಲಿ ಇವೆ. ಇನ್ನು ಅನುದಾನಿತ ಶಾಲೆಗಳಿಗೆ ನೇಮಕ ಮಾಡಿಕೊಳ್ಳಬೇಕಾದ ಶಿಕ್ಷಕರ ಸಂಖ್ಯೆ ಕೂಡ ಸರಿಸುಮಾರು ಇಷ್ಟೇ ಇವೆ. ಆದರೆ ಹಲವು ಅನುದಾನಿತ ಶಾಲೆಗಳಲ್ಲಿ ಚಿತ್ರಕಲಾ ವಿಭಾಗವನ್ನೇ ಬಂದ್ ಮಾಡಲಾಗಿದೆ.

‘2008ರಲ್ಲಿ ಒಮ್ಮೆ ಅರ್ಜಿ ಕರೆದಿದ್ದರು. ಆದರೆ  ಆಯ್ಕೆ ಆಗಲಿಲ್ಲ. ಮತ್ತೆ ನೇಮಕಾತಿ ನಡೆಯಲೇ ಇಲ್ಲ. ಹೀಗಾಗಿ ನಾವು ಕಲಾ ಸ್ಟುಡಿಯೊ ಮಾಡಿಕೊಳ್ಳಬೇಕಾಯ್ತು’ ಎಂದು ಹುಬ್ಬಳ್ಳಿ ಕಲಾವಿದ ಗುರುಸಿದ್ದಪ್ಪ ಮಲ್ಲಾಪುರ ಬೇಸರಿಸಿಕೊಂಡರು.

‘ನಿಗದಿತ ಪಠ್ಯಕ್ರಮದ ನಡುವೆ ಚಿತ್ರಕಲಾ ಅಭ್ಯಾಸ ಮಕ್ಕಳ ಆಲೋಚನೆಗೆ ಹೊಸ ಹೊಳಹು ನೀಡುತ್ತದೆ. ಪ್ರಾಥಮಿಕ ಹಂತದಿಂದಲೇ ಚಿತ್ರಕಲಾ ಶಿಕ್ಷಣ ಪಠ್ಯಕ್ರಮದಲ್ಲಿ ಸೇರಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೇಳುತ್ತಲೇ ಬಂದಿದೆ’ ಎನ್ನುತ್ತಾರೆ ಹುಬ್ಬಳ್ಳಿ ಚಿತ್ರಕಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಮೋಹನ್‌ ಮಿರಾಂಡ.

‘ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಪಠ್ಯಕ್ರಮದಂತೆ ಚಿತ್ರಕಲೆ ಮತ್ತು ಸಂಗೀತ ವಿಷಯಗಳಿಗೆ ಒತ್ತು ನೀಡಲಾಗಿದೆ. ಆದರೆ ಈ ಎರಡೂ ವಿಷಯಗಳಿಗೆ ಆದ್ಯತೆ ಮೇಲೆ ಶಿಕ್ಷಕರ ನೇಮಕಾತಿ ಆಗುತ್ತಿಲ್ಲ. ನೆರೆಯ ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಪ್ರತಿವರ್ಷ ನೇಮಕಾತಿ ನಡೆಯುತ್ತಿದೆ. ನಮ್ಮಲ್ಲಿ ಚಿತ್ರಕಲೆ ಡಿಪ್ಲೊಮಾ ಮತ್ತು ಪದವೀಧರ ಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಚಿತ್ರಕಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಭೀಮರಾಯ ಅವಟಿ ‘ಪ್ರಜಾವಾಣಿ’ಗೆ ತಿಳಿಸಿದರು.

***

ಧಾರವಾಡ ಜಿಲ್ಲೆಯೊಂದರಲ್ಲಿಯೇ ಸುಮಾರು 170 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮನಸ್ಸು ಮಾಡಬೇಕು

- ಸಂಜೀವ ಕಾಳೆ, ಧಾರವಾಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು