ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಕುರ್ಚಿ ಭದ್ರ: ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಅರುಣ್‌ ಸಿಂಗ್

Last Updated 18 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ: ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪಕ್ಷವು ಕೆಳಗಿಳಿಸಲಿದೆ ಎಂಬ ವದಂತಿಗಳಿಗೆ ತೆರೆ ಎಳೆಯಲು ಬಿಜೆಪಿ ವರಿಷ್ಠರು ಬಯಸಿದ್ದಾರೆ.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಪ್ರಶ್ನೆಯೇ ಇಲ್ಲ’ ಎಂದು ಕರ್ನಾಟಕದ ಉಸ್ತುವಾರಿ ಹೊತ್ತಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ.

‘ಯಡಿಯೂರಪ್ಪ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದ ಬಗ್ಗೆ ಪಕ್ಷಕ್ಕೆ ಖುಷಿ ಇದೆ’ ಎಂದು ಸಿಂಗ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಉಪ ಚುನಾವಣೆ ನಡೆದ ಎರಡು ಕ್ಷೇತ್ರಗಳಲ್ಲಿ ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ವಿಧಾನ ಪ‍ರಿಷತ್ತಿನ ಸ್ಥಾನಗಳಲ್ಲಿಯೂ ಗೆಲುವು ಪಡೆದಿದೆ. ಮುಂದೆ ನಡೆಯಲಿರುವ ಪಂಚಾಯಿತಿ ಚುನಾವಣೆಗಳಲ್ಲಿಯೂ ಬಿಜೆಪಿ ಉತ್ತಮ ಪ್ರದರ್ಶನ ತೋರುವುದು ಖಚಿತ. ಮುಂಬರುವ ವಿಧಾನಸಭೆ ಉಪ ಚುನಾವಣೆ ಇರಲಿ, ಬೆಳಗಾವಿ ಲೋಕಸಭಾ ಉಪಚುನಾವಣೆ ಇರಲಿ, ಎಲ್ಲದರಲ್ಲಿಯೂ ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿಯ ಗೆಲುವಿನ ಓಟ ಮುಂದುವರಿಯಲಿದೆ’ ಎಂಬ ವಿಶ್ವಾಸವನ್ನು ಸಿಂಗ್‌ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಅವರ ಕಾರ್ಯನಿರ್ವಹಣೆ ಬಗ್ಗೆ ಬಿಜೆಪಿ ಶಾಸಕರಿಗೆ ಅಸಮಾಧಾನ ಇದೆ ಎಂಬುದನ್ನು ಅವರು ಅಲ್ಲಗಳೆದಿದ್ದಾರೆ.

‘ಯಡಿಯೂರಪ್ಪ ಅವರ ವಿರುದ್ಧ ಈವರೆಗೆ ಯಾವುದೇ ದೂರು ಬಂದಿಲ್ಲ. ರಾಜ್ಯದ ಕೆಲವು ನಾಯಕರು ಕಳೆದ ತಿಂಗಳು ದೆಹಲಿಯಲ್ಲಿ ನನ್ನನ್ನು ಭೇಟಿಯಾಗಿದ್ದು ಹೌದು. ಅವರಲ್ಲಿ ಯಾರೂ ಮುಖ್ಯಮಂತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ನಡುವೆ ಸಮನ್ವಯ ಇಲ್ಲ ಎಂಬ ವಿಚಾರವನ್ನೂ ಅವರು ಅಲ್ಲಗಳೆದಿದ್ದಾರೆ. ಇದು ಸಂಪೂರ್ಣ ಸುಳ್ಳು. ಇಬ್ಬರು ನಾಯಕರ ನಡುವೆ ಅತ್ಯುತ್ತಮ ಸಮನ್ವಯ ಇದೆ ಎಂದಿದ್ದಾರೆ.

‘ಮುಖ್ಯಮಂತ್ರಿ ಕೈಗೊಳ್ಳುವ ಯಾವುದೇ ನಿರ್ಧಾರವು ರಾಜ್ಯದ ಜನರ ಹಿತಾಸಕ್ತಿಗೆ ಪೂರಕವಾಗಿರುತ್ತದೆ. ಯಡಿಯೂರಪ್ಪ ಅವರು ನುರಿತ ರಾಜಕಾರಣಿ ಮತ್ತು ಅನುಭವಿ ನಾಯಕ. ತಮ್ಮ ಸರ್ಕಾರ, ಪಕ್ಷಗಳೆರಡನ್ನೂ ದೃಷ್ಟಿಯಲ್ಲಿ ಇರಿಸಿಕೊಂಡು ಹೇಗೆ ನಿರ್ಧಾರ ಕೈಗೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ಎಲ್ಲ ಸಮುದಾಯಗಳು ಮತ್ತು ಧರ್ಮಗಳನ್ನು ಜತೆಗೆ ಒಯ್ಯಲು ಬೇಕಾದ ಆಡಳಿತಾತ್ಮಕ ಕೌಶಲ ಯಡಿಯೂರಪ್ಪ ಅವರಲ್ಲಿ ಇದೆ’ ಎಂದು ಅರುಣ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ‌.

ನಿರ್ಧಾರ ಕೈಗೊಳ್ಳುವಾಗ ಮುಖ್ಯಮಂತ್ರಿಯವರು ಸಚಿವರು ಮತ್ತು ಇತರ ಮುಖಂಡರನ್ನುವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ದೂರು ಇದೆಯಲ್ಲವೇ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದು ಖಚಿತ ಎಂಬ ಮಾತುಗಳು ಕಳೆದ ಕೆಲವು ತಿಂಗಳಲ್ಲಿ ತೀವ್ರವಾಗಿ ಕೇಳಿ ಬಂದಿದ್ದವು. ನಾಯಕತ್ವ ಬದಲಾಗಲಿದೆ ಎಂಬ ಕಾರಣಕ್ಕಾಗಿಯೇ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಗೆ ಬಿಜೆಪಿ ವರಿಷ್ಠರು ಅನುಮತಿ ಕೊಡುತ್ತಿಲ್ಲ ಎಂಬ ವರದಿಗಳೂ ಪ್ರಕಟವಾಗಿದ್ದವು.

‘ಸಚಿವ ಸಂಪುಟ ವಿಸ್ತರಣೆ ಶೀಘ್ರ’

ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಗೆ ಯಾವುದೇ ತೊಡಕು ಇಲ್ಲ ಎಂದು ಅರುಣ್‌ ಸಿಂಗ್‌ ಹೇಳಿದ್ದಾರೆ.

‘ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕೋವಿಡ್‌ ಇದೆ. ಹಾಗಾಗಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲು ಆಗಿಲ್ಲ. ಅವರು ಚೇತರಿಸಿಕೊಂಡ ಕೂಡಲೇ, ನಾನು ಹಾಗೂ ಮುಖ್ಯಮಂತ್ರಿಯವರು ನಡ್ಡಾ ಜತೆಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ಸಂಪುಟ ಪುನರ್‌ರಚನೆಗೆ ಅನುಮೋದನೆ ಕೊಡಲು ಬಿಜೆಪಿ ವರಿಷ್ಠರು ಉತ್ಸುಕರಾಗಿದ್ದಾರೆ. ಈ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ ಎಂದು ಅವರು ಹೇಳಿದ್ದಾರೆ.

‘ವಿಜಯೇಂದ್ರ ಹಸ್ತಕ್ಷೇಪ ಇಲ್ಲ’: ‘ಯಡಿಯೂರಪ್ಪ ಅವರ ಮಗ ಬಿ.ವೈ ವಿಜಯೇಂದ್ರರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಬಗ್ಗೆ ಯಾವುದೇ ದೂರು ಇಲ್ಲ. ವಿಜಯೇಂದ್ರ ಅಥವಾ ಯಡಿಯೂರಪ್ಪ ಕುಟುಂಬದ ಇತರ ಯಾವುದೇ ಸದಸ್ಯ ರಾಜ್ಯದ ಆಡಳಿತದಲ್ಲಿ ಕೈಯಾಡಿಸುತ್ತಿದ್ದಾರೆ ಎಂಬ ಮಾತನ್ನು ನಾನು ಕೇಳಿಯೇ ಇಲ್ಲ’ ಎಂದು ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಬಿ.ವೈ ವಿಜಯೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT