ಬೆಂಗಳೂರು/ಶಿರಸಿ: ಜೆಡಿಎಸ್‌ನ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಮತ್ತು ಬಿಜೆಪಿಯ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಶುಕ್ರವಾರ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಗೋಪಾಲಕೃಷ್ಣ ಅವರು ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆಯವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರೆ, ರಾಮಸ್ವಾಮಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಪತ್ರ ನೀಡಿದರು. ಗೋಪಾಲಕೃಷ್ಣ ಅವರು ಕಾಂಗ್ರೆಸ್ ಪಕ್ಷ ಸೇರುವುದು ಖಚಿತವಾಗಿದೆ.
ರಾಮಸ್ವಾಮಿ ಯಾವ ಪಕ್ಷವನ್ನು ಸೇರುತ್ತೇನೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಅದರೆ, ಅವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುವ ಸಾಧ್ಯತೆ ಇದೆ.
ಮನಿ ಪವರ್‌ಗೆ ಬಲಿಯಾದೆ: ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಮಸ್ವಾಮಿ, ‘ನಾನು ಜೆಡಿಎಸ್ ಬಿಡಲಿಲ್ಲ. ಆದರೆ, ಮನಿ ಪವರ್ ಮುಂದೆ ಬಲಿಪಶುವಾದೆ. ಎಲ್ಲ ಪಕ್ಷಗಳಲ್ಲೂ ಲೋಪದೋಷಗಳಿವೆ. ಅಕ್ರಮಗಳನ್ನು ಎತ್ತಿ ಹಿಡಿಯುವುದೇ ತಪ್ಪು, ಶಾಪ ಎನ್ನುವುದಾದರೆ ಅದನ್ನು ಸವಾಲಾಗಿ ಸ್ವೀಕರಿಸುತ್ತೇನೆ’ ಎಂದರು.
‘ಶಾಸಕ ಸ್ಥಾನಕ್ಕೆ ಸಂತೋಷದಿಂದ ರಾಜೀನಾಮೆ ನೀಡಿದ್ದೇನೆ. ಸಭಾಧ್ಯಕ್ಷ ಕಾಗೇರಿಯವರು ಬೆಂಗಳೂರಿಗೆ ಬಂದ ಬಳಿಕ ರಾಜೀನಾಮೆ ಅಂಗೀಕಾರ ಮಾಡುವಂತೆ ಕೋರುತ್ತೇನೆ. ಶಾಸಕನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಜೆಡಿಎಸ್ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇವತ್ತೇ ಶಾಸಕರ ಕೊಠಡಿಯನ್ನೂ ಬಿಟ್ಟುಕೊಡುತ್ತೇನೆ. ಎಲ್ಲ ಪಕ್ಷಗಳ ಜತೆಗೂ ಬಾಂಧವ್ಯ ಚೆನ್ನಾಗಿಯೇ ಇದೆ. ನನ್ನ ರಾಜಕೀಯ ವಿರೋಧಿಗಳಿಗೂ ಒಳ್ಳೆಯದಾಗಲಿ’ ಎಂದು ಅವರು ಹೇಳಿದರು.
ಸಚಿವ ಸ್ಥಾನ ಸಿಗದ ನೋವು:ಎನ್.ವೈ
ಸುದ್ದಿಗಾರರ ಜತೆ ಮಾತನಾಡಿದ ಎನ್.ವೈ.ಗೋಪಾಲಕೃಷ್ಣ , ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನ್ನನ್ನು ಡೆಪ್ಯುಟಿ ಸ್ಪೀಕರ್ ಆಗಿ ಮಾಡಲಾಗಿತ್ತು. ಈ ವಿಚಾರವಾಗಿ ಧರ್ಮಸಿಂಗ್ ಅವರನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ. ಎರಡು- ಮೂರು ಸಾರಿ ಗೆದ್ದವರಿಗೆ ಸಚಿವ ಸ್ಥಾನ ನೀಡುತ್ತಾರೆ. ಆದರೆ ನಾನು ಆರು ಬಾರಿ ಗೆದ್ದಿದ್ದರೂ ನನಗೇನೂ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ನೋವಿದೆ. ಇವರೂ ಕೊಡಲಿಲ್ಲ, ಅವರೂ ಕೊಡಲಿಲ್ಲ’ ಎಂದು ನೋವು ತೋಡಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.