ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಚ್‌ಎಂ ಸಿಬ್ಬಂದಿ ವೇತನ ಹೆಚ್ಚಿಸಿ

ವಿಧಾನ ಪರಿಷತ್‌ನಲ್ಲಿ ಆಯನೂರು ಮಂಜುನಾಥ್‌ ಆಗ್ರಹ
Last Updated 8 ಫೆಬ್ರುವರಿ 2021, 17:09 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸಂದರ್ಭದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ರಾಷ್ಟ್ರೀಯ ಆರೋಗ್ಯ ಮಿಷನ್‌ನ (ಎನ್‌ಎಚ್‌ಎಂ) 32,000 ಸಿಬ್ಬಂದಿಯ ವೇತನ ಹೆಚ್ಚಳದ ಶಿಫಾರಸಿಗೆ ರಾಜ್ಯ ಸರ್ಕಾರ ಕಿಂಚಿತ್ತೂ ತಡಮಾಡದೆ ಒಪ್ಪಿಗೆ ನೀಡಬೇಕು ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌ ವಿಧಾನ ಪರಿಷತ್‌ನಲ್ಲಿ ಸೋಮವಾರ ಒತ್ತಾಯಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ಅವರು, ‘ಎನ್‌ಎಚ್‌ಎಂ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆಯ ಇತರ ಸಿಬ್ಬಂದಿ ವೇತನದ ನಡುವೆ ಭಾರಿ ಅಂತರವಿದೆ. ಈ ತಾರತಮ್ಯ ಸರಿಯಲ್ಲ. ಶ್ರೀನಿವಾಸಾಚಾರಿ ಸಮಿತಿ ವರದಿ ನೀಡಿ ವರ್ಷಗಳೇ ಕಳೆದಿದೆ. ಅವರ ವೇತನ ಹೆಚ್ಚಳಕ್ಕೆ ಹಣಕಾಸು ಇಲಾಖೆಯ ಅಧಿಕಾರಿಗಳು ತಡೆ ಹಾಕುತ್ತಿದ್ದಾರೆ. ಇದು ಸರಿಯಲ್ಲ’ ಎಂದರು.

‘ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕೋವಿಡ್‌ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರ ವೇತನ, ಭತ್ಯೆ ಹೆಚ್ಚಳಕ್ಕೆ ಸರ್ಕಾರ ಕ್ರಮ ಜರುಗಿಸಬೇಕು. ಮೃತಪಟ್ಟವರ ಕುಟುಂಬದವರಿಗೆ ₹ 30 ಲಕ್ಷ ಪರಿಹಾರ ನೀಡುವುದೇನೋ ಸರಿ. ಆದರೆ, ಬದುಕಿದ್ದಾಗಲೇ ಅವರ ನೆರವಿಗೆ ಬರಬೇಕಾದುದು ಸರ್ಕಾರದ ಜವಾಬ್ದಾರಿ ಅಲ್ಲವೇ‘ ಎಂದು ಪ್ರಶ್ನಿಸಿದರು.

‘ಕೋವಿಡ್‌ ಕಾರಣದಿಂದ ಶಾಸಕರ ವೇತನದಲ್ಲಿ ಶೇಕಡ 30ರಷ್ಟು ಕಡಿತ ಮಾಡಲಾಗಿದೆ. ಈ ಬಗ್ಗೆ ನಮ್ಮ ತಕರಾರು ಇಲ್ಲ. ಸಣ್ಣ ಸಂಬಳದ ಸಿಬ್ಬಂದಿಯ ವೇತನ ಕಡಿತ ಬೇಡ. ಆದರೆ, ಲಕ್ಷಗಟ್ಟಲೆ ವೇತನ, ಭತ್ಯೆ ಪಡೆಯುವ ಅಧಿಕಾರಿಗಳ ಸಂಬಳ ಏಕೆ ಕಡಿತ ಮಾಡಿಲ್ಲ? ಅಧಿಕಾರಿಗಳೇ ಸ್ವಯಂಪ್ರೇರಿತ ನಿರ್ಧಾರ ಮಾಡಬೇಕಿತ್ತು. ರಾಜ್ಯಪಾಲರಾದರೂ ತಮ್ಮ ಭಾಷಣದಲ್ಲಿ ಈ ಕುರಿತು ನಿರ್ದೇಶನ ನೀಡಬೇಕಿತ್ತು’ ಎಂದು ಆಯನೂರು ಹೇಳಿದರು.

‘ನಾನು ಗೋಹತ್ಯೆ ನಿಷೇಧ ಮಸೂದೆಯ ಪರ ಇದ್ದೇನೆ. ಅದು ಆಗಲೇಬೇಕು. ಅದರ ಜತೆಯಲ್ಲೇ ಶಿಕ್ಷಕರ ರಕ್ಷಣೆಯೂ ಆಗಬೇಕು. ಗುರುಗಳನ್ನು ದೇವರೆಂದರೆ ಸಾಲದು. ಸಂಕಷ್ಟದಲ್ಲಿರುವ ಅವರ ನೆರವಿಗೆ ಬರಬೇಕಾದುದು ಸರ್ಕಾರದ ಕರ್ತವ್ಯ’ ಎಂದರು.

ಶಾಸಕರ ಹಿಡಿತಕ್ಕೆ ಆಕ್ಷೇಪ
‘ಬಹುತೇಕ ಶಾಸಕರು ಕ್ಷೇತ್ರದಲ್ಲಿ ನಾವು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎಂಬಂತೆ ವರ್ತಿಸುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಅಪಾಯದೆಡೆಗೆ ಸಾಗುತ್ತಿದೆ. ಇಂತಹ ವಿಚಾರಗಳನ್ನು ಎಲ್ಲಿಯೂ ಚರ್ಚಿಸಲಾಗದ ಸ್ಥಿತಿ ಇದೆ. ವಿಪ್‌ ವ್ಯವಸ್ಥೆ ನಮ್ಮ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುತ್ತಿದೆ. ಇದಕ್ಕೆ ಎಲ್ಲ ಪಕ್ಷಗಳೂ ಹೊಣೆಗಾರರು’ ಎಂದು ಆಯನೂರು ಮಂಜುನಾಥ್‌ ಹೇಳಿದರು.

‘ಪಕ್ಷದ ಕಚೇರಿಯಲ್ಲೂ ಮಾತನಾಡಲಾಗದ ಸ್ಥಿತಿ ಇದೆ’ ಎಂದು ಸಭಾಪತಿಯವರ ಪೀಠದಲ್ಲಿದ್ದ ಎಚ್‌. ವಿಶ್ವನಾಥ್‌ ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT