ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲಾತಿಗಾಗಿ ಬಲಿಜ ಸಮುದಾಯ ಮನವಿ

Last Updated 4 ಡಿಸೆಂಬರ್ 2020, 7:13 IST
ಅಕ್ಷರ ಗಾತ್ರ

ಬೆಂಗಳೂರು: ಬಲಿಜ ಸಮುದಾಯಕ್ಕೆ 2ಎ ಪೂರ್ಣಪ್ರಮಾಣದ ಮೀಸಲಾತಿ ನೀಡಬೇಕು ಎಂದು ಕರ್ನಾಟಕ ಪ್ರದೇಶ ಬಲಿಜ ಸಂಘದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಆರ್. ಜಯರಾಂ, ಎಂ.ಆರ್. ಸೀತಾರಾಂ, ಬಲಿಜ ಸಂಘದ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ಹಾಗೂ ಇತರ ಮುಖಂಡರು ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಕಾರಾತ್ಮವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮನವಿ ಪರಿಗಣಿಸುವ ಭರವಸೆ ನೀಡಿದರು.

ಇದಕ್ಕೂ ಮುನ್ನ ರಾಜ್ಯ ಬಲಿಜ ಹಕ್ಕುಗಳ ಹೋರಾಟ ಸೇವಾ ಸಮಿತಿ ನೇತೃತ್ವದಲ್ಲಿ ಸಮುದಾಯದ ಸ್ವಾಮೀಜಿಗಳು ಸುದ್ದಿಗೋಷ್ಠಿ ನಡೆಸಿ, ‘ನಾವು ಮೀಸಲಾತಿ ಭಿಕ್ಷೆ ಬೇಡುತ್ತಿಲ್ಲ, ಸಂವಿಧಾನ ಬದ್ಧವಾಗಿ ದೊರೆತಿದ್ದ 2ಎ ಪೂರ್ಣ ಪ್ರಮಾಣದ ಮೀಸಲಾತಿಯನ್ನು ಮತ್ತೆ ನೀಡಬೇಕು’ ಎಂದು ಆಗ್ರಹಿಸಿದರು.

ಸಂಖ್ಯಾಶಾಸ್ತ್ರ ಜ್ಯೋತಿಷಿ ಜಯಶ್ರೀನಿವಾಸನ್ ಗುರೂಜಿ ಮಾತನಾಡಿ, ‘ರಾಜ್ಯದಲ್ಲಿ ಬಲಿಜ ಸಮುದಾಯದ ಸುಮಾರು 40 ಲಕ್ಷ ಜನರಿದ್ದಾರೆ. ಈ ಹಿಂದೆ ಸಮುದಾಯ 2ಎ ಮೀಸಲಾತಿ ಹೊಂದಿತ್ತು. ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆಗಿದ್ದಾಗ 2ಎ ಮೀಸಲಾತಿ ಹಿಂತೆಗೆದುಕೊಳ್ಳಲಾಗಿತ್ತು. ಯಡಿಯೂರಪ್ಪ ಅವರು ಈ ಹಿಂದಿನ ಕಾಲಾವಧಿಯಲ್ಲಿ ಈ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ 2ಎ ಮೀಸಲಾತಿ ನೀಡಿದ್ದರು. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಆದರೆ, ಈಗ ಅವರು ಕೊಟ್ಟಮಾತು ಮರೆತಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರಕ್ಕೆ ಒಂದು ವಾರ ಗಡುವು ನೀಡುತ್ತೇವೆ. ಅಷ್ಟರಲ್ಲಿ ನಿರ್ಧಾರಕ್ಕೆ ಬರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಆಮರಣಾಂತ ಉಪವಾಸ ಆರಂಭಿಸುತ್ತೇವೆ’ ಎಂದು ಎಚ್ಚರಿಸಿದರು.

ರಾಮೋಹಳ್ಳಿ ನಾಗದುರ್ಗ ಪೀಠಾಧ್ಯಕ್ಷ ಶಕ್ತಂ ಶ್ರೀ ಶಕ್ತಿ ಬಾಲಮ್ಮ ಸ್ವಾಮೀಜಿ ಮಾತನಾಡಿ, ‘ಉದ್ಯೋಗದಲ್ಲಿ ಮೀಸಲಾತಿ ಸಿಗದ ಕಾರಣ ಬಲಿಜ ಸಮುದಾಯದ ಲಕ್ಷಾಂತರ ಯುವಕ–ಯುವತಿಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತು ಮೀಸಲಾತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ದಕ್ಷಿಣ ಶಿರಡಿ ಇಂಟರ್ ನ್ಯಾಷನಲ್ ಪೀಠಾಧ್ಯಕ್ಷ ಸಾಯಿ ರಾಮ್ ಪ್ರಸಾದ್ ಗುರೂಜಿ, ರಾಮಪ್ರಸಾದ್ ಗುರೂಜಿ, ಕತ್ರಿಗುಪ್ಪೆ ಅಯ್ಯಪ್ಪ ದೇವಸ್ಥಾನ ಸಮಿತಿಯ ಪೀಠಾಧ್ಯಕ್ಷ ಎಂ.ಡಿ.ಸ್ವಾಮೀಜಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT