ಶನಿವಾರ, ಜೂನ್ 25, 2022
25 °C

ಸಚಿವಾಲಯ ಬಂದ್‌ ಕಾನೂನು ಬಾಹಿರ– ಸಿಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವಾಲಯ ನೌಕರರ ಸಂಘದವರು ಶುಕ್ರವಾರ ‘ಸಚಿವಾಲಯ ಬಂದ್‌’ಗೆ ಕರೆ ನೀಡಿರುವುದು ಕಾನೂನು ಬಾಹಿರ. ಕಚೇರಿಗೆ ಹಾಜರಾಗಲು ಬರುವ ಅಧಿಕಾರಿ–ಸಿಬ್ಬಂದಿಗೆ ಅಡ್ಡಿಪಡಿಸಿದರೆ ಕ್ರಿಮಿನಲ್‌ ಮೊಕದ್ದಮೆ ಹೂಡಿ, ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

‘ನೌಕರರ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆದ್ದರಿಂದ, ಸಚಿವಾಲಯದ ಎಲ್ಲಾ ಅಧಿಕಾರಿ, ಸಿಬ್ಬಂದಿ ಕಚೇರಿಗೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಪೂರ್ವಾನುಮತಿ ಪಡೆಯದೇ ಕಚೇರಿಗೆ ಗೈರು ಹಾಜರಾದರೆ ಅದನ್ನು ‘ಲೆಕ್ಕಕ್ಕಿಲ್ಲದ ಅವಧಿ’ ಎಂದು ಪರಿಗಣಿಸಲಾಗುವುದು’ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

‘ವಿಧಾನಪರಿಷತ್‌ ಮತ್ತು ರಾಜ್ಯಸಭೆ ಚುನಾವಣೆಗಳು ನಡೆಯುತ್ತಿರುವುದರಿಂದ ಬಂದ್‌ನಲ್ಲಿ ಯಾರೂ ಭಾಗವಹಿಸಬಾರದು ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯವರು ನೌಕರರಿಗೆ ಸೂಚನೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ. 

ಬಂದ್‌ ಏಕೆ: ಆಡಳಿತ ಸುಧಾರಣೆ ಮತ್ತು ಆರ್ಥಿಕ ಮಿತವ್ಯಯದ ನೆಪವೊಡ್ಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಜನಸ್ಪಂದನ ವಿಭಾಗ ರದ್ದು, ಕಾನೂನು ಕೋಶ ಶಾಖೆಯಲ್ಲಿನ ಕಾರ್ಯದರ್ಶಿ ಹುದ್ದೆಗಳು ಸೇರಿ ಹಲವು ಹುದ್ದೆಗಳನ್ನು ಕಡಿತಗೊಳಿಸುತ್ತಿರುವುದನ್ನು ವಿರೋಧಿಸಿ ಸರ್ಕಾರದ ಸಚಿವಾಲಯ ನೌಕರರ ಸಂಘ ಸಚಿವಾಲಯ ಬಂದ್‌ಗೆ ಕರೆ ನೀಡಿದೆ.

ಹುದ್ದೆ ಕಡಿತಗೊಳಿಸುವ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ ಕೆಲವು ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳೇ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಚಿವಾಲಯ ನೌಕರರು ದೂರಿದ್ದಾರೆ. ವಿಧಾನಸೌಧ, ವಿಕಾಸಸೌಧ ಸಚಿವಾಲಯದ ಸಿಬ್ಬಂದಿ ಕಚೇರಿಗೆ ಸಾಮೂಹಿಕ ರಜೆ ಹಾಕುವ ಮೂಲಕ ಬಂದ್‌ ಆಚರಿಸಲು ತೀರ್ಮಾನಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು