ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ವಿಮೆ: 4 ಪಟ್ಟು ಹೆಚ್ಚಳ

Last Updated 15 ನವೆಂಬರ್ 2022, 4:16 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಶೇ 65ರಷ್ಟು ಅಂಗವಿಕಲತೆಗೆ ಒಳಗಾದ ಎಂಜನಿಯರ್‌ಗೆ ಮೋಟಾರು ವಾಹನ ಕ್ಲೇಮು ನ್ಯಾಯಮಂಡಳಿ ಆದೇಶಿಸಿದ್ದ ₹ 11.39 ಲಕ್ಷ ಪರಿಹಾರವನ್ನು ನಾಲ್ಕು ಪಟ್ಟು ಹೆಚ್ಚಿಸಿ, ಹೈಕೋರ್ಟ್‌ ತೀರ್ಪು ನೀಡಿದೆ.

‘ವಾರ್ಷಿಕ 8ರ ಬಡ್ಡಿ ದರದಲ್ಲಿ ₹ 11,39,340 ರಂತೆ ನೀಡಬೇಕಿದ್ದ ಪರಿಹಾರವನ್ನು ₹ 44,92,140ಕ್ಕೆ ಹೆಚ್ಚಿಸಿದೆ. 2009ರಿಂದ ಪಾವತಿಸಬೇಕಾದ ಬಡ್ಡಿಯನ್ನು ಶೇಕಡಾ 8 ರಿಂದ 6 ಕ್ಕೆ ಇಳಿಸಿ’ ತೀರ್ಪು ನೀಡಿದೆ.

ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಮಂಗಳೂರು ತಾಲ್ಲೂಕಿನ ಮೂಡಬಿದಿರೆ ಶಾಖೆಯ ನ್ಯಾಷನಲ್‌ ಇನ್ಶೂರೆನ್ಸ್‌ ಕಂಪನಿಯ ಸಹಾಯಕ ವ್ಯವಸ್ಥಾಪಕ ಸಲ್ಲಿಸಿದ್ದ ಮೇಲ್ಮನವಿ (ಎಂಎಫ್‌ಎ ಸಂಖ್ಯೆ: 8449/2015) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ 2022ರ ಅಕ್ಟೋಬರ್‌ 19ರಂದು ತೀರ್ಪು ಪ್ರಕಟಿಸಿದೆ.

ಪ್ರಕರಣವೇನು?: ಮೂಡಬಿದಿರೆಯ ಮಾಸ್ತಿಕಟ್ಟೆ ನಿವಾಸಿ ಅಲ್ವಿನ್‌ ಲೊಬೊ ತಮ್ಮ ಸಹೋದರನ ಜೊತೆ 2009ರ ಮೇ 23ರಂದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ಬಂದ ಆಟೊ ರಿಕ್ಷಾ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಲೊಬೊ ಅವರಿಗೆ ಗಂಭೀರ ಗಾಯಗಳಾಗಿದ್ದವು.

ಪ್ರಕರಣ ನ್ಯಾಯ ಮಂಡಳಿ ಮುಂದೆ ವಿಚಾರಣೆಗೆ ಬಂದಾಗ ವಿಮಾ ಕಂಪನಿ, ‘ಬೈಕ್‌ ಮತ್ತು ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿಲ್ಲ. ಬೈಕ್‌ ಸವಾರರು ಆಯ ತಪ್ಪಿ ಬಿದ್ದಿದ್ದಾರೆ. ಅರ್ಜಿದಾರರು ಈ ಘಟನೆಯನ್ನು ತಿರುಚಿದ್ದಾರೆ’ ಎಂಬ ವಾದ ಮಂಡಿಸಿತ್ತು.

ಇದನ್ನು ಅಲ್ಲಗಳೆದಿದ್ದ ನ್ಯಾಯ ಮಂಡಳಿ, ‘ಅರ್ಜಿದಾರ ಲೊಬೊ ಅಬುಧಾಬಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ₹50 ಸಾವಿರ ವೇತನ ಪಡೆಯುತ್ತಿದ್ದಂತಹ ವ್ಯಕ್ತಿಯಾಗಿದ್ದಾರೆ. ಅಪ ಘಾತ ಸಂಭವಿಸಿದಾಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ಅಪಘಾತ ಸಂಭವಿಸಿಲ್ಲ ಎಂಬುದಕ್ಕೆ ವಿಮಾ ಕಂಪನಿ ಯಾವ ದಾಖಲೆಯನ್ನೂ ಒದಗಿಸಿಲ್ಲ’ ಎಂಬ ಕಾರಣ ನೀಡಿ, ಅಲ್ವಿನ್‌ ಲೊಬೊ ಅವರಿಗೆ ವಾರ್ಷಿಕ 8ರ ಬಡ್ಡಿ ದರದಲ್ಲಿ ₹ 11,39,340 ಪರಿಹಾರ ನೀಡುವಂತೆ 2015ರ ಜೂನ್‌ 20ರಂದು ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ‘ಅರ್ಜಿದಾರರ ತಲೆಗೆ ತಲೆಗೆ ಗಂಭೀರ ಗಾಯವಾಗಿರುವುದು ದೃಢಪಟ್ಟಿದ್ದು, ಅವರು ಶೇ 65ರಷ್ಟು ಶಾಶ್ವತ ದೈಹಿಕ ಅಂಗವಿಕಲತೆಗೆ ಒಳಗಾಗಿದ್ದಾರೆ. ಆದರೆ, ಯಾವುದೇ ಕಾರಣ ನೀಡದೆ ನ್ಯಾಯಮಂಡಳಿ ಅಂಗವಿಕಲತೆಯ ಪ್ರಮಾಣವನ್ನು ಶೇ 25ಕ್ಕೆ ಇಳಿಸಿದ್ದು, ನ್ಯಾಯಮಂಡಳಿಯ ಆದೇಶವನ್ನು ರದ್ದುಗೊಳಿಸಲು ಯಾವುದೇ ಆಧಾರ ಇಲ್ಲ’ ಎಂದು ಹೇಳಿತ್ತು.

‘ಸಂತ್ರಸ್ತರು ಪರಿಹಾರ ಹೆಚ್ಚಳ ಮಾಡುವಂತೆ ಕೋರಿಲ್ಲ. ಆದಾಗ್ಯೂ, ಪರಿಹಾರವನ್ನು ನೀಡುವಾಗ ಸಂತ್ರಸ್ತ ಅಥವಾ ಮೃತರಿಗೆ ಅನ್ಯಾಯವಾಗಿದ್ದರೆ, ಸಿಪಿಸಿ (ಸಿವಿಲ್ ಪ್ರೊಸಿಜರ್ ಕೋಡ್‌) ನಿಯಮಗಳ ಅನುಸಾರ 41, ನಿಯಮ 33 ಅನ್ನು ಅನ್ವಯಿಸಬಹುದು’ ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT