ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಸಮುದಾಯ| ಕುಂಚೇನಹಳ್ಳಿ ತಾಂಡಾ: ಮೂರು ತಾಸು ರಸ್ತೆ ತಡೆ

ಬಂಜಾರ ಸಮುದಾಯದ ಮುಂದುವರಿದ ಪ್ರತಿಭಟನೆ l ಸರ್ಕಾರದ ವಿರುದ್ಧ ಘೋಷಣೆ
Last Updated 28 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಜಿಲ್ಲೆಯ ಶಿಕಾರಿಪುರದಲ್ಲಿ ಸೋಮವಾರ ಬಂಜಾರ ಸಮುದಾಯ ನಡೆಸಿದ ಪ್ರತಿಭಟನೆ ಜಿಲ್ಲೆಯ ಬೇರೆಡೆಗೂ
ವ್ಯಾಪ್ತಿಸುತ್ತಿದೆ.

ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿ ತಾಂಡಾ ನಿವಾಸಿಗಳು ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಪ್ರತಿಭಟನಕಾರರು ರಸ್ತೆಗೆ ಟೈರ್‌ಗಳನ್ನು ಅಡ್ಡ ಇಟ್ಟು ಬೆಂಕಿ ಹಚ್ಚಿದ್ದರಿಂದ ಸುಮಾರು ಮೂರು ಗಂಟೆಗಳ ಕಾಲ ಶಿವಮೊಗ್ಗ– ಸವಳಂಗ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಮೇಲಿನ ಕುಂಚೇನಹಳ್ಳಿ ಹಾಗೂ ಕೆಳಗಿನ ಕುಂಚೇನಹಳ್ಳಿ ಗ್ರಾಮಗಳ ನಡುವೆ ಹೆದ್ದಾರಿ ಪಕ್ಕದಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬಂದೋಬಸ್ತ್‌ಗೆ ಹೊರಟಿದ್ದ ಡಿಎಆರ್ ಸಿಬ್ಬಂದಿ ಇದ್ದ ವಾಹನ ಹಾಗೂ ಪೊಲೀಸ್ ಅಧಿಕಾರಿಗಳಿದ್ದ ವಾಹನಗಳು ಗಂಟೆಗಟ್ಟಲೇ ಕಾಯಬೇಕಾಯಿತು.

ರಸ್ತೆಯಲ್ಲಿ ಕುಳಿತು ಸರ್ಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು. ಭೋವಿ, ಕೊರಚ, ಕೊರಮ ಹಾಗೂ ತಮಿಳು ಸಮುದಾಯದವರು ಬೆಂಬಲ ಸೂಚಿಸಿದ್ದರು.

ಬೃಹತ್ ಪ್ರತಿಭಟನೆ ನಾಳೆ: ಶಿವಮೊಗ್ಗದ ಬಂಜಾರ ಕನ್ವೆನ್‌ಷನ್‌ ಹಾಲ್‌ನಲ್ಲಿ ಮಂಗಳವಾರ ಸಂಜೆ ಸಮುದಾಯದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಮಾರ್ಚ್ 30ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲು
ನಿರ್ಧರಿಸಲಾಯಿತು.

ಚನ್ನಗಿರಿಯಲ್ಲೂ ನಾಳೆ ಪ್ರತಿಭಟನೆ: ಒಳಮೀಸಲಾತಿಯನ್ನು ವಿರೋಧಿಸಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಮಾರ್ಚ್‌ 30ರಂದು ಬೆಳಿಗ್ಗೆ 11ರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕಾಂಗ್ರೆಸ್‌ನ ಮೂವರು ಮುಖಂಡರ ಬಂಧನ

ಶಿಕಾರಿಪುರದಲ್ಲಿ ಸೋಮವಾರ ಬಂಜಾರ ಸಮುದಾಯದ ಪ್ರತಿಭಟನೆ ವೇಳೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ, ಪೊಲೀಸರ ಮೇಲಿನ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ತಿಳಿಸಿದ್ದಾರೆ.

ಶಿಕಾರಿಪುರ ತಾಲ್ಲೂಕು ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಕಾಂಗ್ರೆಸ್ ಮುಖಂಡರಾದ ಜೋಗಿಹಳ್ಳಿಯ ನಿವಾಸಿ ಪುನೀತ್‌ ನಾಯ್ಕ, ಚುಂಚನಕೊಪ್ಪದ ಪ್ರೇಮಕುಮಾರ್ ನಾಯ್ಕ ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT