ಸೋಮವಾರ, ಮೇ 23, 2022
24 °C

ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ: ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಮುಖ್ಯಮಂತ್ರಿಯಾಗಲು ₹2500 ಕೋಟಿ ಬೇಕು ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಅವರು ಭಾನುವಾರ ಹೇಳಿದರು.

ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಯತ್ನಾಳ ಅವರು ಯಾಕೆ ಈ ರೀತಿ ಮಾತನಾಡುತ್ತಾರೋ ಗೊತ್ತಿಲ್ಲ. ಅವರು ಹಿರಿಯ ನಾಯಕರು. ಕೇಂದ್ರ ಸಚಿವರಾಗಿದ್ದವರು. ದೊಡ್ಡ ಸಮುದಾಯದ ನಾಯಕರು. ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆ ಯಾರೂ ನೀಡಬಾರದು' ಎಂದರು.

'ಯತ್ನಾಳ ಅವರು ತಪ್ಪು ಮಾಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಈ ವಿಚಾರದ ಬಗ್ಗೆ ಗಮನಹರಿಸಿದ್ದಾರೆ' ಎಂದರು.

ಮುಖ್ಯಮಂತ್ರಿ ಬದಲಾವಣೆ ಇಲ್ಲ: 'ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಮೊನ್ನೆ ಬಂದಿದ್ದ ಅಮಿತ್ ಶಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರನ್ನು 'ಲೋಕಮಾನ್ಯ ಮುಖ್ಯಮಂತ್ರಿ' ಎಂದು ಸಂಬೋಧಿಸಿದ್ದಾರೆ. ಇದರ ಅರ್ಥ ಏನು? ಸಿಎಂ ಆಗಿ ಅವರೇ ಮುಂದುವರಿಯಲಿದ್ದಾರೆ. ಗೊಂದಲಗಳೆಲ್ಲವೂ ಮಾಧ್ಯಮ ಸೃಷ್ಟಿ' ಎಂದು ಸೋಮಣ್ಣ ಹೇಳಿದರು.

'ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಮಾಡುವುದು ಮುಖ್ಯಮಂತ್ರಿ ಅವರ ಪರಮಾಧಿಕಾರ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ವರಿಷ್ಠರು ಈ ಬಗ್ಗೆ ನಿರ್ಧರಿಸಲಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇಶದ್ರೋಹಿಗಳು: ಪಾಕಿಸ್ತಾನ ಪರ ಘೋಷಣೆ ಪ್ರಕರಣ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, 'ಇದು ದೊಡ್ಡ ದುರಂತ. ಕಿಡಿಗೇಡಿಗಳು ಮಾಡುವ ಕೃತ್ಯದಿಂದ ಬೇಸರವಾಗಿದೆ. ಭಾರತ ಜಾತ್ಯತೀತ ರಾಷ್ಟ್ರ ನಾವು ಯಾವುದೇ ಸಮಾಜವನ್ನು ದ್ವೇಷ ಮಾಡಬಾರದು. ಒಬ್ಬರು ಇಬ್ಬರು ಮಾಡುವ ಕೆಲಸಕ್ಕೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ. ಆದರೆ, ಕಿಡಿಗೇಡಿಗಳಿಗೆ ಆ ಸಮುದಾಯದ ಮುಖಂಡರು ಬುದ್ಧಿ ಹೇಳಬೇಕು. ಕಠಿಣ ಶಿಕ್ಷೆ ವಿಧಿಸಬೇಕು' ಎಂದರು.

'ದೇಶದ್ರೋಹಿ ಕೆಲಸ ಮಾಡುವವರು ಎಷ್ಟೇ‌ ದೊಡ್ಡವರಾದರೂ ದೇಶ ದ್ರೋಹಿಗಳೇ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು