ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: ಅಸಮತೋಲನದ ಸಂಪುಟ- ರಾಜಕೀಯ ಲೆಕ್ಕಾಚಾರ

Last Updated 6 ಆಗಸ್ಟ್ 2021, 6:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟ ರಚನೆಯಾಗಿದೆ. ಬೊಮ್ಮಾಯಿ ಅವರದ್ದೂ ಬಿಜೆಪಿ ಸರ್ಕಾರವೇ ಆದರೂ, ಜನರಲ್ಲಿ ಹೊಸ ಸರ್ಕಾರದ ಮೇಲೆ ಹೊಸ ಭರವಸೆಗಳು ಹುಟ್ಟಿಕೊಂಡಿವೆ. ಬೊಮ್ಮಾಯಿ ಸಚಿವ ಸಂಪುಟ ಹೊಸ ದಾರಿ ಹಿಡಿಯಬಹುದೇ? ‘ಪ್ರಜಾವಾಣಿ’ ಹಮ್ಮಿಕೊಂಡಿದ್ದ ಸಂವಾದದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ, ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರರಾವ್‌, ರಾಜಕೀಯ ವಿಶ್ಲೇಷಕ ಡಿ. ಉಮಾಪತಿ, ಕಾಂಗ್ರೆಸ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ವಿವರ ಇಲ್ಲಿದೆ.

***

ದಲಿತರಿಗೆ ಅನ್ಯಾಯ


ಬಿಜೆಪಿಯಲ್ಲಿ ನೈತಿಕ ದಿವಾಳಿತನ ಎದ್ದು ಕಾಣುತ್ತಿದೆ. ಹೊಸ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಪಾಲನೆಗೆ ಅವಕಾಶವಿದ್ದರೂ, ಪಾಲನೆ ಮಾಡಿಲ್ಲ. ಮಹಿಳೆಯರಿಗೆ ಪ್ರಾತಿನಿಧ್ಯ ಕೊಡುವಲ್ಲಿ ಎಡವಿದೆ. ಒಳ್ಳೆಯವರಿಗೆ, ಮಹಿಳೆಯರಿಗೆ ಇನ್ನಷ್ಟು ಅವಕಾಶ ಕೊಡಬಹುದಿತ್ತು. ಪ್ರಾದೇಶಿಕ ಅಸಮತೋಲನ ಎದ್ದು ಕಾಣುತ್ತಿದೆ.

ಬೆಂಗಳೂರಿಗೆ ಹೆಚ್ಚು ಪ್ರಾತಿನಿಧ್ಯ, ಗ್ರಾಮೀಣ, ಕಲ್ಯಾಣ ಕರ್ನಾಟಕ, ಮೈಸೂರು ಭಾಗಕ್ಕೆ ಅನ್ಯಾಯ ಯಾಕೆ? ಕಾಂಗ್ರೆಸ್‌ ಪಕ್ಷವು ದಲಿತ ಮುಖ್ಯಮಂತ್ರಿ ಮಾಡಲಿಲ್ಲ ಎಂದು ದೂರುವ ಬಿಜೆಪಿಯೂ, ದಲಿತರಿಗೆ ಅನ್ಯಾಯ ಮಾಡಿದೆ.

ಕೋವಿಡ್‌, ಪ್ರವಾಹ ನಿರ್ವಹಣೆ ಅಧಿಕಾರದಲ್ಲಿರುವವರ ಕೆಲಸ. ಜನರ ಸಂಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬ ಸರಿಯಾದ ಚಿತ್ರಣವಿಲ್ಲ. ‘ಹೇಳುವುದು ಒಂದು, ಮಾಡುವುದು ಒಂದು’ ಎಂಬುದೇ ಅವರ ನೀತಿ.ಅಧಿಕಾರ ನೀಡುವ ವಿಷಯ ಬಂದಾಗ ಹೆಣ್ಣುಮಕ್ಕಳೆಲ್ಲರನ್ನು ದಲಿತರಂತೆ ಪರಿಗಣಿಸಲಾಗುತ್ತದೆ.ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವಾಗಲೂ ಮೇಲ್ಜಾತಿಯವರಿಗೆ ಅವಕಾಶ ನೀಡಲಾಗುತ್ತದೆ.

–ಪುಷ್ಪಾ ಅಮರನಾಥ್, ಅಧ್ಯಕ್ಷೆ, ರಾಜ್ಯ ಮಹಿಳಾ ಕಾಂಗ್ರೆಸ್‌

***

ಸಂಘಟನೆಯ ದೃಷ್ಟಿಯಿಂದ ಸಂಪುಟ

ಪ್ರಾದೇಶಿಕ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸಂಪುಟ ರಚನೆ ಮಾಡಲಾಗಿದೆ. ಪಕ್ಷ ಸಂಘಟನೆಯನ್ನೂ ಗಮನದಲ್ಲಿಟ್ಟು ಯುವಕರು ಹಾಗೂ ಹೊಸಬರು ಹಾಗೂ ಅನುಭವಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೊರಗಿನಿಂದ ಬಂದವರಿಗೆ ಅವಕಾಶ ಕೊಟ್ಟು, ಉಳಿದವರಲ್ಲಿ ಪಕ್ಷದವರಿಗೆ ಅವಕಾಶ ನೀಡಬೇಕಾದ ಅನಿವಾರ್ಯ ಇತ್ತು.

ಮೂರನೇ ಅಲೆಯು ಮಕ್ಕಳಿಗೆ ಬರುತ್ತದೆ ಎಂದು ವರದಿ ಎಲ್ಲಿದೆ? ಮೂರನೇ ಅಲೆ ತಡೆಯಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರ ಪ್ರಗತಿಪಥದಲ್ಲಿ ಸಾಗಲಿದೆ.

ಸಿದ್ದರಾಮಯ್ಯ ಮಂಡಿಸಿರುವ 11 ಬಜೆಟ್‌ಗಳಲ್ಲಿ ಯಾವುದಾದರೂ ಹೆಜ್ಜೆ ಗುರುತುಗಳಿವೆಯೇ? ಜನಪರ ಯೋಜನೆ, ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ.

-ಅಶ್ವತ್ಥ ನಾರಾಯಣಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

***

ಒಳಿತಿನ ದಾರಿಯೇ?

ಹೊಸ ಸಚಿವ ಸಂಪುಟದಲ್ಲಿ 13 ಜಿಲ್ಲೆಗಳಲ್ಲಿ ಪ್ರಾತಿನಿಧ್ಯ ಇಲ್ಲ. ಶಾಸಕರಿದ್ದ ಜಿಲ್ಲೆಗಳಲ್ಲಿ ಏನಾಗಿದೆ ಎಂಬುದನ್ನು ಬಿಜೆಪಿಯವರೇ ಹೇಳಬೇಕು. ಬಿಜೆಪಿಯವರ ನೈತಿಕತೆ ಬಗ್ಗೆ ಟೀಕೆ ಮಾಡುವ ನೈತಿಕತೆ ಕಾಂಗ್ರೆಸ್‌ನವರಿಗೂ ಇಲ್ಲ.‌23 ಹಳೆಯ ಮುಖಗಳಲ್ಲಿ ಕೆಲವು ಮುಖಗಳ ಬಗ್ಗೆ ಜನರು ಬೇಸರ ಪಟ್ಟುಕೊಂಡಿದ್ದಾರೆ. ಅವರನ್ನು ಪಕ್ಕಕ್ಕೆ ಇಡಲಾಗದ್ದು ಬೊಮ್ಮಾಯಿ ಅವರ ಅಸಹಾಯಕತನ ತೋರಿಸುತ್ತದೆ.

ಯಡಿಯೂರಪ್ಪ ಅವರನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು ಎನ್ನುವ ಹೈಕಮಾಂಡ್ ನಿರೀಕ್ಷೆ ಸುಳ್ಳಾಗಿದೆ. ಒಳ ಜಗಳವು ಜನ ಹಿತದ ಕಲ್ಯಾಣ ಕಾರ್ಯಕ್ರಮಗಳಿಗೆ ದೊಡ್ಡ ತಡೆಯೊಡ್ಡಲಿದೆ. ಒಳ್ಳೆಯ ದಾರಿ ಹಿಡಿಯಬಹುದು ಎಂಬುದು ಪ್ರಶ್ನೆಯಾಗಿಯೇ ಉಳಿಯುವ ಆತಂಕವಿದೆ.

ಮೋದಿ ಅವರು ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದಾರೆ. ಅದನ್ನು ರಾಜ್ಯ ಮಾದರಿಯಾಗಿಸಿ ಕೊಳ್ಳಬೇಕಿತ್ತು. ಅಧಿಕಾರ ಅನುಭವಿಸಲೆಂದೇ ಇರುವ ಮನೋಭಾವದ ಸಮುದಾಯಗಳನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು.

ಸಚಿವ ಸಂಪುಟದಲ್ಲಿ ಸುರೇಶ್‌ ಕುಮಾರ್, ಜಗದೀಶ ಶೆಟ್ಟರ್ ಅವರಂತವರಿಗೆ ಅವಕಾಶವಿಲ್ಲದಂತಾಗಿದೆ. ಯಡಿಯೂರಪ್ಪ ಅವರು ಸುಮ್ಮನೇ ಕುಳಿತುಕೊಳ್ಳುವ ಜಾತಕದವರಲ್ಲ. ಅವರಿಗೆ ಗೆಲ್ಲುವ ಶಕ್ತಿ ಇರದಿದ್ದರೂ, ಸೋಲಿಸುವ ಶಕ್ತಿ ಇದೆ.

–ಎಂ.ಕೆ. ಭಾಸ್ಕರರಾವ್, ಹಿರಿಯ ಪತ್ರಕರ್ತ

–––––

ಧರ್ಮ ಧ್ರುವೀಕರಣಕ್ಕೆ ಒತ್ತು

ರಾಜಕೀಯ ಪಕ್ಷಗಳಿಗೆ ಜನ ಹಿತದ ಲೆಕ್ಕಾಚಾರಕ್ಕಿಂತ ರಾಜಕೀಯ ಲಾಭ–ನಷ್ಟದ ಲೆಕ್ಕಾಚಾರವೇ ಮುಖ್ಯವಾಗಿರುತ್ತದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮುಂದೆ ಇರುವ ಇತಿಮಿತಿಯೊಳಗೆ ಇದಕ್ಕಿಂತ ಉತ್ತಮ ಮಾಡಲು ಸಾಧ್ಯವಿರಲಿಲ್ಲ.

ಈ ಪ್ರಹಸನದ ಮುಖ್ಯ ಗುರಿ ನಾಯಕತ್ವ ಬದಲಾವಣೆಯಾಗಿತ್ತು. ಸುರೇಶ್ ಕುಮಾರ್ ಅವರಿಗೆ ಸೌಮ್ಯವಾದಿ ಅನ್ನುವ ಇಮೇಜ್ ಇತ್ತು. ಅದನ್ನು ಕಳೆದುಕೊಳ್ಳುವುದಕ್ಕೆ ಅವರು ಬಹಳ ಪ್ರಯತ್ನಗಳನ್ನು ಮಾಡಿದ್ರು. ಹಲವು ಸಲ hawkish ಆಗಿ ಮಾತನಾಡಿದ್ರು. ಆದರೆ ಅವರ ಬದಲಿಗೆ ಅವರಿಗಿಂತ ಕಿರಿಯರಾದ ಸುನಿಲ್ ಕುಮಾರ್‌ರನ್ನುಸಂಪುಟಕ್ಕೆ ತಂದಿದ್ದಾರೆ. ಆ ಆಯ್ಕೆ ಈ ಸರ್ಕಾರದ ಇಮೇಜ್‌ಗೆಹೊಂದುತ್ತದೆ. ಸುರೇಶ್ ಕುಮಾರ್‌ರನ್ನುಹಾಗೇ ಬಿಟ್ಟುಬಿಡ್ತಾರೆ ಅಂತ ನನಗೆ ಅನ್ನಿಸುವುದಿಲ್ಲ. ಸಂಘಟನೆಗೆ ಬಳಸ್ತಾರೆ ಅಂತ ಅನ್ಸುತ್ತೆ. ಇದು ಬೊಮ್ಮಾಯಿ ಸಂಪುಟ ಅನ್ನುವುದಕ್ಕಿಂತ ಹೈಕಮಾಂಡ್ ಸಂಪುಟ ಅನ್ನುವುದೇ ಹೆಚ್ಚು ನಿಜ.

ಅಲ್ಪಸಂಖ್ಯಾತರಿಲ್ಲದೇ ರಾಜಕಾರಣ ಮಾಡುತ್ತೇವೆ, ಅಲ್ಪಸಂಖ್ಯಾತರು ಎರಡನೇ ದರ್ಜೆಯ ನಾಗರಿಕರಂತೆ ಬದುಕಬೇಕು ಎಂಬ ಸಂದೇಶ ಅವರದ್ದಾಗಿದೆ. ಸಿಎಎ, ಎನ್‌ಆರ್‌ಸಿ ಅವರನ್ನೇ ಗುರಿಯಾಗಿಸಿಕೊಂಡು ಜಾರಿಗೆ ತರಲಾಗಿದೆ. ಬಿಜೆಪಿ ಕೋಮು ಧ್ರುವೀಕರಣದ ರಾಜಕೀಯ ಮಾಡುತ್ತಿದೆ.

ಯಡಿಯೂರಪ್ಪ ಅವರ ಮೊದಲ ಆದ್ಯತೆ ಬೊಮ್ಮಾಯಿ ಆಗಿರಲಿಲ್ಲ. ಲಿಂಗಾಯತ ಸಮಾಜದ ನಾಯಕತ್ವ ತಮ್ಮಲ್ಲಿಯೇ ಇರಬೇಕು ಎಂದು ಬಯಸಿದ್ದರು. ಆದರೆ, ಹೈಕಮಾಂಡ್‌ ಆ ಮಾತನ್ನು ನಡೆಸಿಕೊಡಲಿಲ್ಲ.

ಯಡಿಯೂರಪ್ಪ ಅವರಿಗೆ ಬೇರೆ ದಾರಿ ಇಲ್ಲ. 2012ರ ಯಡಿಯೂರಪ್ಪ ಇವರಲ್ಲ. ಆವತ್ತಿನ ಹೈಕಮಾಂಡೇ ಬೇರೆ, ಇವತ್ತಿನ ಹೈಕಮಾಂಡ್‌ನಲ್ಲಿ ಮೋದಿ, ಶಾ ಅಂತಹ ಗಟ್ಟಿಗರಿದ್ದಾರೆ. ಬೊಮ್ಮಾಯಿ ಬಹಳ ಸ್ಮಾರ್ಟ್‌ ಪಾಲಿಟಿಷಿಯನ್, ಸದಾನಂದಗೌಡ, ಶೆಟ್ಟರ್‌ಗಿಂತ ಉತ್ತಮರು. ಕೆಲಸ ಮಾಡುವ ತುಡಿತ ಇದೆ. ಆದರೆ ಪಕ್ಷವು ಜಾತಿ ಧರ್ಮ ಧ್ರುವೀಕರಣಕ್ಕೆ ಒತ್ತು ನೀಡುತ್ತಿದೆ.

-ಡಿ. ಉಮಾಪತಿ, ರಾಜಕೀಯ ವಿಶ್ಲೇಷಕ

ಸಂವಾದವನ್ನು ವೀಕ್ಷಿಸಲು

https://youtu.be/Th3N-wLlUZQ

https://www.facebook.com/prajavani.net/videos/354660242822503

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT