ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಇಎಲ್‌ ಉದ್ಯೋಗಿಗಳಿಗಾಗಿ ನೆರವಿನ ಯೋಜನೆ

Last Updated 6 ಜುಲೈ 2021, 13:17 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ತನ್ನ ಉದ್ಯೋಗಿಗಳಿಗಾಗಿ ‘ಭಾರತ್‌ ಎಲೆಕ್ಟ್ರಾನಿಕ್ಸ್‌ ಸ್ಕೀಮ್‌ ಫಾರ್‌ ಅಸಿಸ್ಟನ್ಸ್‌ ಟು ಫ್ಯಾಮಿಲಿ ಆಫ್‌ ಡಿಸೀಸ್ಡ್‌ ಎಂಪ್ಲಾಯಿಸ್‌ (ಬಿ.ಇ.ಎಸ್‌.ಎ.ಎಫ್‌.ಇ)’ ಯೋಜನೆ ಪ್ರಕಟಿಸಿದೆ.

2021ರ ಏಪ್ರಿಲ್‌1ರ ನಂತರ ಕೋವಿಡ್‌ ಅಥವಾ ಇತರ ಕಾಯಿಲೆಗಳಿಂದ ಮೃತಪಟ್ಟ ಉದ್ಯೋಗಿಗಳ ಪತಿ, ಪತ್ನಿ ಅಥವಾ ಮಕ್ಕಳಿಗೆ ಕುಟುಂಬ ನಿರ್ವಹಣೆಗಾಗಿ ಮಾಸಿಕವಾಗಿ ಹಣಕಾಸಿನ ನೆರವು ಒದಗಿಸುವುದು ಹಾಗೂಶಿಕ್ಷಣ, ವೃತ್ತಿಪರ ಮತ್ತು ಕೌಶಲ ತರಬೇತಿ ನೀಡುವುದು ಈ ಯೋಜನೆಯ ಉದ್ದೇಶ.

‘ಮೃತ ಉದ್ಯೋಗಿಗಳು ಕೊನೆಯದಾಗಿ ಪಡೆದ ಮೂಲ ವೇತನದ ಜೊತೆಗೆ ತುಟ್ಟಿಭತ್ಯೆಯ ಶೇ 50ರಷ್ಟು ಮೊತ್ತಕ್ಕೆ ಸಮನಾದ ನೆರವಿನ ಹಣವನ್ನು ಸೇರಿಸಿ ಅವರ ಕುಟುಂಬದವರಿಗೆ ಮಾಸಿಕ ಕಂತಿನಲ್ಲಿ ಮರಣ ಹೊಂದಿದ ದಿನದಿಂದ ನಿವೃತ್ತಿವರೆಗೆ ಅಥವಾ ಐದು ವರ್ಷಗಳವರೆಗೆ, ಇವುಗಳಲ್ಲಿ ಯಾವುದು ಮೊದಲೋ ಆ ಅವಧಿಗೆ ಇದನ್ನು ಪಾವತಿಸಲಾಗುತ್ತದೆ. ಮೃತರ ಪೈಕಿ 10 ವರ್ಷಗಳ ಸೇವೆ ಪೂರ್ಣಗೊಳಿಸಿದ್ದವರ ಪತಿ ಅಥವಾ ಪತ್ನಿಯು ಬಿಇಎಲ್‌ ನಿವೃತ್ತ ಉದ್ಯೋಗಿಗಳ ವಂತಿಗೆ ಆರೋಗ್ಯ ಯೋಜನೆಗೆ (ಬಿ.ಇ.ಆರ್‌.ಇ.ಸಿ.ಎಚ್‌.ಎಸ್‌) ಒಳಪಡುತ್ತಾರೆ. ಒಂದು ವೇಳೆ ಮೃತ ಉದ್ಯೋಗಿಯು10 ವರ್ಷಗಳ ಸೇವಾವಧಿ ಪೂರ್ಣಗೊಳಿಸದೇ ಇದ್ದರೆ ಅಂಥವರ ಪತಿ, ಪತ್ನಿ, ಅವಲಂಬಿತ ಪೋಷಕರು ಮತ್ತು ಮಕ್ಕಳು ಪ್ರತಿ ವರ್ಷ ₹ 8 ಲಕ್ಷದಂತೆ ಐದು ವರ್ಷಗಳ ಅವಧಿಗೆ ವೈದ್ಯಕೀಯ ವಿಮೆ ಪಡೆಯಲು ಕೋರಿಕೆ ಸಲ್ಲಿಸಬಹುದು’ ಎಂದು ಬಿಇಎಲ್‌ ನಿರ್ದೇಶಕ (ಎಚ್‌ಆರ್‌) ಕೆ.ಎಂ.ಶಿವಕುಮಾರ ಮಾಹಿತಿ ನೀಡಿದ್ದಾರೆ.

‘ಮೃತ ಉದ್ಯೋಗಿಗಳ ಮಕ್ಕಳು ಪ್ರಾಥಮಿಕ ಹಂತದಿಂದ ಪದವಿವರೆಗೂ ಶಿಕ್ಷಣ ಪಡೆಯಲು ಅನುವಾಗುವಂತೆ ಪ್ರತಿ ಮಗುವಿಗೆ ವಾರ್ಷಿಕ₹ 25 ಸಾವಿರದಿಂದ ₹ 40 ಸಾವಿರದವರೆಗೆ ಶಿಕ್ಷಣ ಶುಲ್ಕ ಮರುಪಾವತಿಯ ಅವಕಾಶವನ್ನೂ ಈ ಯೋಜನೆಯ ಅಡಿಯಲ್ಲಿ ಕಲ್ಪಿಸಲಾಗಿದೆ. ಬಿಇ, ಬಿಟೆಕ್‌, ಎಂಬಿಬಿಎಸ್‌ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವವರಿಗೆ ವಾರ್ಷಿಕ ಗರಿಷ್ಠ ₹ 1 ಲಕ್ಷದವರೆಗೆ ಶುಲ್ಕ ಮರುಪಾವತಿಸಲಾಗುತ್ತದೆ. ಅಂಗವಿಕಲ ಮಕ್ಕಳಿಗೆ ಅವರ ವಿದ್ಯಾಭ್ಯಾಸದ ಅವಧಿಯಲ್ಲಿ ವಾರ್ಷಿಕ ಗರಿಷ್ಠ ₹ 25 ಸಾವಿರದವರೆಗೂ ನೆರವು ಒದಗಿಸಲಾಗುತ್ತದೆ. ಮೃತ ಉದ್ಯೋಗಿಗಳ ಮಕ್ಕಳು ಬಿಇಎಲ್‌ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದರೆ ಅವರಿಗೆ ಪದವಿಯವರೆಗೂ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಮೃತ ಉದ್ಯೋಗಿಗಳ ಕುಟುಂಬವು ಒಂದು ವರ್ಷದವರೆಗೂ ಕಂಪನಿಯ ವಸತಿ ಸಮುಚ್ಛಯದಲ್ಲಿ ವಾಸಿಸಲು ಅನುಮತಿ ನೀಡಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT