ಗುರುವಾರ , ಮಾರ್ಚ್ 23, 2023
23 °C
ಸವದತ್ತಿಯ ಯಲ್ಲಮ್ಮನ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ ಜನನಾಯಕ, ವಿಧಾನಸಭೆ ಉಪಸಭಾಧ್ಯಕ್ಷ

ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ಆನಂದ ಮಾಮನಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಸವದತ್ತಿ (ಬೆಳಗಾವಿ ಜಿಲ್ಲೆ): ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ (56) ಇನ್ನು ನೆನಪು ಮಾತ್ರ. ತೀವ್ರ ಅನಾರೋಗ್ಯದ ಕಾರಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಶನಿವಾರ ಮಧ್ಯರಾತ್ರಿ 12ರ ಸುಮಾರಿಗೆ ಕೊನೆಯುಸಿರೆಳೆದರು.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದವರಲ್ಲಿ ಮುಂಚೂಣಿಯಲ್ಲಿದ್ದರು. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಎಚ್.ವಿ. ಕೌಜಲಗಿ, ಎಸ್.ಬಿ. ಪದಕಿ, ವೆಂಕರಡ್ಡಿ ಎಸ್. ತಿಮ್ಮರಡ್ಡಿ, ಕೆ.ಎಚ್. ವೀರಭದ್ರಪ್ಪ, ಜಿ.ಕೆ. ಟಕ್ಕೇದ, ಆರ್.ವಿ. ಪಾಟೀಲ, ಸಿ.ಎಂ. ಮಾಮನಿ, ಎಸ್.ಎಸ್. ಕೌಜಲಗಿ, ವಿಶ್ವನಾಥ ಕೆ. ಮಾಮನಿ ಇವರೆಲ್ಲ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿನಿಧಿಸಿದ ಘಟಾನುಘಟಿಗಳು. ಈ ಸಂಪ್ರದಾಯವನ್ನು ಸಮರ್ಥವಾಗಿ ಮುಂದುವರಿಸಿದವರು ಆನಂದ ಮಾಮನಿ.

ಒಬ್ಬರೇ ಸತತ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿ ಜಯಗಳಿಸಿದವರಿಲ್ಲ. ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ್ದರು. ಅಭಿಮಾನಿಗಳಿಂದ ಅಜಾತ ಶತ್ರುವೆಂದು ಕರೆಸಿಕೊಂಡಿದ್ದ ಅವರು ಮೃದು ಸ್ವಭಾವದಿಂದಾಗಿಯೇ ಜನಾನುರಾಗಿ ಆಗಿದ್ದರು.

ಶಾಸಕರಾಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಯಲ್ಲಮ್ಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಪ್ರಸಕ್ತ ವಿಧಾನಸಭೆ ಉಪಸಭಾಧ್ಯಕ್ಷರ ಹುದ್ದೆ ನಿಭಾಯಿಸುತ್ತಿದ್ದ ಮಾಮನಿ; ಸೋಲಿಲ್ಲದ ಸರದಾರ. ಸವದತ್ತಿ ಸಾಹುಕಾರ, ಜನಪರ ನಾಯಕ ಎಂಬ ಹಲವು ಅಂಕಿತಗಳೂ ಅವರ ಸ್ವಂತ. ಅವರ ಜನಪರ ನಿಲುವು, ಮುತ್ಸದ್ಧಿ ಗುಣಗಳು, ಕ್ಷೇತ್ರದಲ್ಲಿ ನಿತ್ಯ ಪರ್ಯಟನೆ ಮಾಡುವ ಕ್ರಿಯಾಶೀಲತೆಯಿಂದಲೇ ಆಪ್ತವಾಗುತ್ತಿದ್ದರು.

ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ಸತತ ಎರಡು ಬಾರಿ ಅವಿರೋಧ ಆಯ್ಕೆಯಾಗುವ ಮೂಲಕ ಸಹಕಾರ ರಂಗದಲ್ಲೂ ಕಾರ್ಯಕ್ಷಮತೆ ತೋರಿಸಿದ್ದರು.

ತಂದೆ ಹಾದಿ ಹಿಡಿದ ಮಗ:

ದಿವಂಗತ ಚಂದ್ರಶೇಖರ ಎಂ. ಮಾಮನಿ ಅವರು 1995-1999 ಅವಧಿಯಲ್ಲಿ ಉಪಸಭಾಧ್ಯಕ್ಷರಾಗಿದ್ದರು. ಆ ಸ್ಥಾನವನ್ನೇ ಆನಂದ ಮಾಮನಿ ಕೂಡ ಈಗ ಪಡೆದಿದ್ದರು. ತಂದೆಯ ಗತ್ತಿನಲ್ಲೇ ಹುದ್ದೆ ನಿಭಾಯಿಸಿದ್ದರು. ಉಪಸಭಾಧ್ಯಕ್ಷರಾಗಿದ್ದಾಗಲೇ ಚಂದ್ರಶೇಖರ ಮಾಮನಿ ಅವರೂ ಇಹಲೋಕ ತ್ಯಜಿಸಿದ್ದರು. ಕಾಕತಾಳೀಯ ಎಂಬಂತೆ ಆನಂದ ಮಾಮನಿ ಅವರು ಸಾವಿನಲ್ಲೂ ತಂದೆಯ ಹೆಜ್ಜೆ ಅನುಸರಿಸಿದರು.

ಚಂದ್ರಶೇಖರ ಅವರು 1985-1989 ಹಾಗೂ 1995-1999 ಅವಧಿಯಲ್ಲಿ ಶಾಸಕರಾಗಿದ್ದರು.

ಕೊನೆಯ ಕಾರ್ಯಕ್ರಮ:

ಆಗಸ್ಟ್ ತಿಂಗಳಲ್ಲಿ ಮನೆಮನೆ ತಿರಂಗಾ ಯಾತ್ರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಸಾರ್ವಜನಿಕ ಧ್ವಜಾರೋಹಣದಲ್ಲಿ ಭಾಗಿಯಾಗಿದ್ದರು. ಬಳಿಕ ಅನಾರೋಗ್ಯ ಬೆನ್ನತ್ತಿದ ಕಾರಣ ಸ್ವಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ಆಯಾಸದ ಕಾರಣ ಕೆಲವೇ ಸಮಯದಲ್ಲಿ ಮಾತು ಮುಗಿಸಿ ತೆರಳಿದ್ದರು.

‘ನನಗೆ ಆಯಾಸವಾಗುತ್ತಿದೆ. ಮುಂದಿನ ಬಾರಿ ಮತ್ತೆ ನಿಮ್ಮ ಮುಂದೆ ಬಂದು, ಶಾಸಕನಾಗಲು ಆಶೀರ್ವದಿಸಿ’ ಎನ್ನುತ್ತ  ಕೈಜೋಡಿಸಿ ನಮಿಸಿದ್ದರು. ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರು ಭಾವುಕರಾಗಿದ್ದರು. ಇದೇ ಅವರ ಕೊನೆಯ ಜನಪರ ಕಾರ್ಯಕ್ರಮ.

ಮತ್ತೆ ನಿಮ್ಮೆಲ್ಲರ ಸೇವೆ ಮಾಡುವೆ ಎಂದಿದ್ದರು:

ಅನಾರೋಗ್ಯದಿಂದ ಬಳಲುತ್ತಿದ್ದ ಮಾಮನಿ ಕುರಿತು ತಿಂಗಳ ಹಿಂದೆ ಹಲವು ವದಂತಿಗಳು ಹರಿದಾಡಿದವು. ಆಗ ಆಸ್ಪತ್ರೆಯಿಂದಲೇ ವಿಡಿಯೊ ಹರಿಬಿಟ್ಟ ಅವರು ‘ನಾನು ಆರೋಗ್ಯವಾಗಿದ್ದೇನೆ. ಜೀವನದಲ್ಲಿ ಕಷ್ಟ, ರೋಗ ಸಹಜ. ಇದನ್ನು ಜಯಿಸಿ ಮತ್ತೆ ಬಂದು ನಿಮ್ಮ ಸೇವೆ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದರು. ದಸರೆಯ ಸಂದರ್ಭದಲ್ಲಿ ದಿನವೂ ಟ್ವೀಟ್‌ ಮಾಡಿ ಶುಭಾಶಯ ತಿಳಿಸಿದ್ದರು. ಈ ಮೂಲಕ ಕ್ಷೇತ್ರದ ಜನರಲ್ಲಿ ಧೈರ್ಯ ತುಂಬಿದ್ದರು.

ಅವರ ಆರೋಗ್ಯವಂತರಾಗಿ ಮರಳಲಿ ಎಂದು ಕಾರ್ಯಕರ್ತರು, ಅಭಿಮಾನಿಗಳು ವಿವಿಧ ಕ್ಷೇತ್ರಗಳಲ್ಲಿ ಪೂಜೆ, ಪಾದಯಾತ್ರೆ, ಉರುಳು ಸೇವೆ ಮಾಡಿದ್ದರು. ಆದರೂ ಅವರ ಪ್ರಾರ್ಥನೆ ಫಲಿಸಲಿಲ್ಲ.

ರಾಜಕೀಯ ಹಿರಿಮೆಯ ಕುಟುಂಬ:

ರಾಜಕೀಯ ಕುಟುಂಬದ ಹಿನ್ನೆಲೆಯಲ್ಲಿ ಬಂದ ಮಾಮನಿ 1966ರ ಜನವರಿ 18ರಂದು ಸವದತ್ತಿಯಲ್ಲಿ ಚಂದ್ರಶೇಖರ ಮತ್ತು ಗಂಗಮ್ಮ ಅವರ ಉದರದಲ್ಲಿ ಜನಿಸಿದರು. ಬಿ.ಕಾಂ ಪದವಿ ಹೊಂದಿದ್ದರು. ತಂದೆ ಚಂದ್ರಶೇಖರ ಮಾಮನಿ ಎರಡು  ಬಾರಿ ಶಾಸಕರಾಗಿ, ಒಮ್ಮೆ ಉಪಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ದೊಡ್ಡಪ್ಪನ ಮಗ ವಿಶ್ವನಾಥ (ರಾಜಣ್ಣ) ಮಾಮನಿ ಸಹ ಶಾಸಕರಾಗಿದ್ದರು.

ಸವದತ್ತಿಯಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ ಮಾಮನಿ ಬಿಜೆಪಿ ನೆಲೆಯೂರುವಂತೆ ಮಾಡಿದರು. 2008ರ ಮೊದಲ ಪ್ರಯತ್ನದಲ್ಲಿ ವಿಧಾನಸಭೆ ಪ್ರವೇಶಿಸಿದರು. ಬಳಿಕ ಅವರ ಜನಪರ ಕಾಳಜಿಗೆ ತಾವು ಸ್ಪರ್ಧಿಸಿದ ಮೂರು ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ್ದು ಇದೀಗ ಇತಿಹಾಸ. ಅವರ ಅಭಿಮಾನಿ ಬಳಗದವರು ‘ಸವದತ್ತಿ ಮೋದಿ’ ಎಂದೆಲ್ಲ ಉಪನಾಮಗಳನ್ನು ನೀಡಿದ್ದರು.

ಯರಗಟ್ಟಿ ತಾಲ್ಲೂಕಿನ ರೂವಾರಿ:

2019ರಲ್ಲಿ ಎಚ್.ಡಿ ಕುಮಾರಸ್ವಾಮಿ ಸರ್ಕಾರದಿಂದ ಯರಗಟ್ಟಿಯನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಾಯಿತು. ಇದಕ್ಕಾಗಿ ಶ್ರಮಿಸಿದ ಆನಂದ ಅವರನ್ನು ಯರಗಟ್ಟಿ ಜನ ಮರೆಯುವಂತಿಲ್ಲ. ಒಂದೇ ಸೂರಿನಡಿ ಎಲ್ಲ ಇಲಾಖಾ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆಯನ್ನೂ ಸಹ ನೆರವೇರಿಸಿದ್ದರು. ಮುನವಳ್ಳಿಯನ್ನು ಗ್ರಾಮ ಪಂಚಾಯಿತಿಯಿಂದ ಪುರಸಭೆಗೆ, ಯರಗಟ್ಟಿಯನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಉನ್ನತ್ತೀಕರಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ.

ಸವದತ್ತಿ ಮಾತ್ರವಲ್ಲದೇ ರಂಭಾಪುರಿ, ಶ್ರೀಶೈಲ, ಕಾಶಿ, ಸುತ್ತೂರು, ಗೋಕರ್ಣ, ಮುಗಳಖೋಡ-ಜಿಡಗಾ, ವಿಜಯಪುರ, ಧಾರವಾಡ ಸೇರಿದಂತೆ ನಾಡಿನ ಎಲ್ಲ ಮಠಾಧೀಶರು, ಪಂಚ ಪೀಠಾಧೀಶರೊಂದಿಗೂ ಅವರು ಆತ್ಮೀಯತೆ ಹೊಂದಿದ್ದರು.

1984ರಿಂದ 1990 ರವರೆಗೆ ಹತ್ತಿಯ ವ್ಯಾಪಾರ ಮಾಡಿಕೊಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ರಾಜಕೀಯಕ್ಕೆ ಧುಮುಕಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು