ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡ ಗಡಿ ನಾಶ: ಗುರುತಿಗೆ ತಕರಾರು

ನಿಖರ ಮಾಹಿತಿಗೆ ಸರ್ವೆ ಆಫ್‌ ಇಂಡಿಯಾಕ್ಕೆ ರಾಜ್ಯ ಸರ್ಕಾರದ ಪತ್ರ
Last Updated 24 ಡಿಸೆಂಬರ್ 2020, 19:06 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ನಾಶವಾಗಿರುವ ಕರ್ನಾಟಕ– ಆಂಧ್ರಪ್ರದೇಶ ಅಂತರ ರಾಜ್ಯ ಗಡಿ ಗುರುತಿಸುವ ಪ್ರಕ್ರಿಯೆ ಕುರಿತು ರಾಜ್ಯ ಸರ್ಕಾರ ತಕರಾರು ಎತ್ತಿದೆ.

ಗಡಿ ಗುರುತುಗಳ ನಿಖರ ಮಾಹಿತಿ ಹಂಚಿಕೊಳ್ಳುವಂತೆ ಸರ್ವೆ ಆಫ್‌ ಇಂಡಿಯಾ ಸಂಸ್ಥೆಯನ್ನು ಕೋರಿದ್ದು, ಗಡಿ ಗುರುತಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ.

ಬಳ್ಳಾರಿ ಮೀಸಲು ಅರಣ್ಯದಲ್ಲಿ ಹಾದು ಹೋಗಿರುವ ಅಂತರ ರಾಜ್ಯ ಗಡಿಯ ಗುರುತುಗಳನ್ನು ಹೊಸದಾಗಿ ಗುರುತಿಸಿ, ಮರು ಸ್ಥಾಪಿಸುವಂತೆ ಸುಪ್ರೀಂಕೋರ್ಟ್‌ 2018ರ ಸೆಪ್ಟೆಂಬರ್‌ 17ರಂದು ಸರ್ವೆ ಆಫ್‌ ಇಂಡಿಯಾಗೆ ಆದೇಶಿಸಿತ್ತು. ಎರಡು ವರ್ಷಗಳ ದೀರ್ಘ ಕಸರತ್ತಿನ ಬಳಿಕ ಅಕ್ಟೋಬರ್‌ 15ರಂದು ಗಡಿ ಗುರುತಿಸುವ ಪ್ರಕ್ರಿಯೆ ಆರಂಭವಾಗಿತ್ತು. ಅಂತರ ರಾಜ್ಯ ಗಡಿಯಲ್ಲಿ ಕೆಲವು ಗುರುತುಗಳನ್ನೂ ನಿರ್ಮಿಸಲಾಗಿತ್ತು.

1896ರ ಬಳ್ಳಾರಿ ಮೀಸಲು ಅರಣ್ಯ ನಕ್ಷೆಯನ್ನು ಆಧಾರವಾಗಿಟ್ಟುಕೊಂಡು ಗಡಿ ಗುರುತಿಸುತ್ತಿದ್ದು, ಇದರಿಂದ ಅಕ್ರಮ ಗಣಿಗಾರಿಕೆ ನಡೆಸಿದವರಿಗೆ ಅನುಕೂಲವಾಗಲಿದೆ ಎಂದು ಆಕ್ಷೇಪಿಸಿ ತುಮಟಿ ಮೈನ್ಸ್‌ ಮಾಲೀಕ ಟಪಾಲ್‌ ಗಣೇಶ್‌ ನವೆಂಬರ್‌ 15ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು. ಪ್ರಧಾನಿ ಕಾರ್ಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೂ ದೂರು ರವಾನಿಸಿದ್ದರು. ಮೂಲ ದಾಖಲೆಗಳ ಆಧಾರದಲ್ಲೇ ಗಡಿ ಗುರುತಿಸಲು ಸರ್ವೆ ಆಫ್‌ ಇಂಡಿಯಾಗೆ ನಿರ್ದೇಶನ ನೀಡುವಂತೆ ಕೋರಿದ್ದರು.

ಜಿಲ್ಲಾಧಿಕಾರಿ ಪತ್ರ: ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಅಧಿಕಾರಿಗಳ ಸಹಭಾಗಿತ್ವದಲ್ಲಿ ಗಡಿ ಗುರುತಿಸುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿತ್ತು. ಬಳ್ಳಾರಿ ಜಿಲ್ಲಾಧಿಕಾರಿ ರಾಜ್ಯದ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆದರೆ, ಅಂತರ ರಾಜ್ಯ ಗಡಿಯಲ್ಲಿ ಪತ್ತೆಮಾಡಿರುವ ಗಡಿ ಗುರುತುಗಳ ಕುರಿತು ರಾಜ್ಯದ ತಂಡದೊಂದಿಗೆ ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳು ನಿಖರವಾದ ಮಾಹಿತಿ ಹಂಚಿಕೊಂಡಿರಲಿಲ್ಲ. ಯಾವ ನಕ್ಷೆ ಆಧಾರದಲ್ಲಿ ಗಡಿ ಗುರುತುಗಳನ್ನು ನಿರ್ಮಿಸಲಾಗುತ್ತಿದೆ ಎಂಬುದರ ಕುರಿತೂ ರಾಜ್ಯಕ್ಕೆ ಮಾಹಿತಿ ನೀಡಿರಲಿಲ್ಲ.

ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಕೆಲವು ದಿನಗಳ ಹಿಂದೆ ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಗಡಿ ಗುರುತುಗಳನ್ನು ಅಳವಡಿಸಲು ಗುರುತಿಸಿರುವ ಸ್ಥಳದ ಜಿಪಿಎಸ್‌ ರೀಡಿಂಗ್‌ನಲ್ಲಿ ದಾಖಲಾಗಿರುವ ಅಕ್ಷಾಂಶ, ರೇಖಾಂಶಗಳ ಮಾಹಿತಿಯೊಂದಿಗೆ ಆ ಸ್ಥಳವನ್ನು ಯಾವ ಆಧಾರದಲ್ಲಿ ಗುರುತಿಸಲಾಗಿದೆ ಎಂಬುದರ ವಿವರವನ್ನೂ ಒದಗಿಸುವಂತೆ ಕೋರಿದ್ದಾರೆ. ಆ ಬಳಿಕ ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳ ತಂಡ ಕೆಲಸ ಸ್ಥಗಿತಗೊಳಿಸಿ ವಾಪಸ್‌ ಹೋಗಿದೆ.

ಒಪ್ಪಿದ ಬಳಿಕವೇ ಮುಂದಿನ ಕೆಲಸ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್‌, ‘ಅಂತರ ರಾಜ್ಯ ಗಡಿ ಗುರುತುಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ನಾನು ಕೂಡ ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ನಕ್ಷೆ ಮತ್ತು ಗಡಿ ಗುರುತುಗಳ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸುವವರೆಗೂ ಪ್ರಕ್ರಿಯೆ ಮುಂದುವರಿಸದಂತೆ ಕೋರಿದ್ದೇವೆ’ ಎಂದರು.

ಗ್ರಾಮ ನಕ್ಷೆಯನ್ನೇ ಪರಿಗಣಿಸಲು ಆಗ್ರಹ
1887ರ ಬಳ್ಳಾರಿ ಮೀಸಲು ಅರಣ್ಯ ನಕ್ಷೆಯ ಕುರಿತು ದೀರ್ಘ ಕಾಲದಿಂದ ತಕರಾರುಗಳಿವೆ. ಈ ಕಾರಣದಿಂದ 1887ರ ಸರ್ವೆಯ ‘ಟ್ರಾವರ್ಸ್‌ ಡೇಟಾ’ ಮತ್ತು ಗ್ರಾಮ ನಕ್ಷೆಗಳ ಆಧಾರದಲ್ಲಿ ಅಂತರ ರಾಜ್ಯ ಗಡಿ ಗುರುತಿಸಬೇಕೆಂಬ ಆಗ್ರಹವನ್ನು ಟಪಾಲ್‌ ಗಣೇಶ್‌ ಸೇರಿದಂತೆ ಹಲವರು ಮುಂದಿಟ್ಟಿದ್ದಾರೆ. ರಾಜ್ಯ ಸರ್ಕಾರ ಕೂಡ ಇದೇ ನಿಲುವು ತಾಳಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT