ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಕ್ಷದ ತತ್ವದಡಿ ‘ಭಾರತ ಒಗ್ಗೂಡಿಸಿ’: ದಿಗ್ವಿಜಯ

Last Updated 1 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷದ ಸಿದ್ಧಾಂತವಾದ ಸರ್ವಧರ್ಮ ಸಹಬಾಳ್ವೆ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ ಒಗ್ಗೂಡಿಸಿ’ (ಭಾರತ್ ಜೋಡೊ) ಯಾತ್ರೆ ನಡೆಯಲಿದೆ’ ಎಂದು ಯಾತ್ರೆಯ ರಾಷ್ಟ್ರೀಯ ಸಮಿತಿ ಅಧ್ಯಕ್ಷ ದಿಗ್ವಿಜಯ ಸಿಂಗ್ ಹೇಳಿದರು.

‘ಭಾರತ ಒಗ್ಗೂಡಿಸಿ’ ಯಾತ್ರೆ ಕುರಿತು ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಪದಾಧಿ ಕಾರಿಗಳು, ಸಮನ್ವಯಕಾರರು, ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದರು.

‘ಭ್ರಷ್ಟಾಚಾರ, ಜಿಎಸ್‌ಟಿ, ನಿರುದ್ಯೋಗ, ಬಡತನ ಇವುಗಳನ್ನು ಮುಂದಿಟ್ಟುಕೊಂಡು ಈ ಯಾತ್ರೆ ಮಾಡುತ್ತೇವೆ. ಆ ಮೂಲಕ, ಇಡೀ ದೇಶದ ಜನರನ್ನು ಒಂದುಗೂಡಿಸಲು ಹೊರಟಿದ್ದೇವೆ‘ ಎಂದರು.

‘ಬಿಜೆಪಿ ಕೋಮುವಾದ ರಾಜ ಕಾರಣ ಮಾಡುತ್ತಿದೆ. ಆದರೆ, ನಮ್ಮದು ಸರ್ವರನ್ನು ಒಳಗೊಂಡ ಅಭಿವೃದ್ಧಿ ಸಿದ್ಧಾಂತ. ಮೂರು ಹಂತ ಗಳಲ್ಲಿ ಈ ಯಾತ್ರೆ ನಡೆಯಲಿದೆ. ಪ್ರತಿದಿನ 7 ಗಂಟೆಗೆ ಪಾದಯಾತ್ರೆ ಆರಂಭ ವಾಗಲಿದೆ. ಮಧ್ಯಾಹ್ನ 2 ಗಂಟೆಗೆ ವಿಭಿನ್ನ ಸಮುದಾಯಗಳ ಜನರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿ ದ್ದಾರೆ. 3.30ಕ್ಕೆ ಮತ್ತೆ ಪಾದಯಾತ್ರೆ ಮುಂದುವರೆಯಲಿದೆ’ ಎಂದರು.

ರಾಜ್ಯಸಭೆ ಸದಸ್ಯ ಜೈರಾಂ ರಮೇಶ್, ‘ತಮಿಳುನಾಡು 3,‌ ಕೇರಳ 18, ಕರ್ನಾಟಕ 21, ತೆಲಂಗಾಣ 21, ಆಂಧ್ರಪ್ರದೇಶ 3, ಮಹಾರಾಷ್ಟ್ರ 16, ಮಧ್ಯಪ್ರದೇಶ 16, ರಾಜಸ್ಥಾನ 21, ಉತ್ತರಪ್ರದೇಶ 3, ಹರಿಯಾಣ 2, ಜಮ್ಮು- ಕಾಶ್ಮೀರದಲ್ಲಿ 2 ದಿನ, ಹೀಗೆ ಒಟ್ಟು 3,570 ಕಿ.ಮೀ ಈ ಯಾತ್ರೆ ಸಾಗಲಿದೆ’ ಎಂದು ಮಾಹಿತಿ ನೀಡಿದರು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ‌, ‘ಲೋಕತಂತ್ರ, ಪ್ರಜಾತಂತ್ರ ಉಳಿವಿಗೆ ಪಕ್ಷ ಈ ಯಾತ್ರೆ ಹಮ್ಮಿಕೊಂಡಿದೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಯಾತ್ರೆ ಆರಂಭವಾಗುವ ದಿನ (ಸೆ. 7) ಸಂಜೆ 5 ಗಂಟೆಗೆ ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ ಸದ್ಭಾವನಾ ಯಾತ್ರೆ ಮಾಡಬೇಕು. 8, 9 ಹಾಗೂ 10ರಂದು ಎಲ್ಲ 224 ಕ್ಷೇತ್ರಗಳಲ್ಲಿ ಒಂದೊಂದು ದಿನ ಈ ಯಾತ್ರೆ ವಿಚಾರವಾಗಿ ಬ್ಲಾಕ್ ಮಟ್ಟದಲ್ಲಿ ತಯಾರಿ ಸಭೆ ಮಾಡಬೇಕು. ಜಿಲ್ಲಾ, ಬ್ಲಾಕ್, ಪಂಚಾಯಿತಿ ಮಟ್ಟದಲ್ಲಿ ಎಲ್ಲರಿಗೂ ಉಸ್ತುವಾರಿ ಜವಾಬ್ದಾರಿ ನೀಡಬೇಕು’ ಎಂದು ಸಲಹೆ ನೀಡಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಆರ್‌. ಧ್ರುವನಾರಾಯಣ್, ಶಾಸಕರಾದ ಎಚ್‌.ಕೆ. ಪಾಟೀಲ, ಕೆ.ಜೆ. ಜಾರ್ಜ್, ಯು.ಟಿ. ಖಾದರ್, ಸಂಸದ ಡಿ.ಕೆ. ಸುರೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT