ಗುರುವಾರ , ಮೇ 19, 2022
21 °C

ಲಸಿಕೆ ತಪ್ಪದೇ ಹಾಕಿಸಿಕೊಳ್ಳಿ: ಜಿ.ಪದ್ಮನಾಭನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಲಸಿಕೆ ಯಾವುದೇ ಆಗಿರಲಿ ಅದರಿಂದ ಸಣ್ಣಪುಟ್ಟ ಅಡ್ಡ ಪರಿಣಾಮಗಳು ಆಗುವುದು ಸಹಜ. ಅದಕ್ಕೆ ಹೆದರಿ ಯಾರೂ ಲಸಿಕೆಯಿಂದ ದೂರ ಉಳಿಯಬೇಡಿ. ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ’ ಎಂದು ಐಐಎಸ್‌ಸಿ ಮಾಜಿ ನಿರ್ದೇಶಕ ಜಿ.ಪದ್ಮನಾಭನ್‌ ಮನವಿ ಮಾಡಿದರು.

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು (ವಿಐಟಿಎಂ) ಸ್ಥಾಪಿಸಿರುವ ‘ಜೈವಿಕ ತಂತ್ರಜ್ಞಾನ’ ಗ್ಯಾಲರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್‌ ರೋಗ ನಿಯಂತ್ರಣಕ್ಕೆ ಬಂದಿರಬಹುದು. ಆದರೆ ವೈರಾಣು ಇನ್ನೂ ಸತ್ತಿಲ್ಲ. ಅದು ರೂಪಾಂತರಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾರೂ ಮೈಮರೆಯಬಾರದು. ಚಿಕ್ಕಂದಿನಲ್ಲಿ ನಾನು ಕಾಲರಾ ಲಸಿಕೆ ಹಾಕಿಸಿಕೊಂಡಿದ್ದೆ. ಆಗ ಎರಡು ದಿನ ನೋವಾಗಿತ್ತು. ಲಸಿಕೆ ಚುಚ್ಚಿಸಿಕೊಂಡ ನಂತರ ಇಂತಹ ಅನುಭವಗಳಾಗುವುದು ಸಹಜ’ ಎಂದರು.

‘ಈ ಗ್ಯಾಲರಿಯನ್ನು ದೇಸಿಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ‘ಆತ್ಮ ನಿರ್ಭರ ಭಾರತ’ ಯೋಜನೆಗೆ ಉತ್ತಮ ನಿದರ್ಶನ. ಕೃಷಿ, ಕೈಗಾರಿಕೆ, ಹೈನುಗಾರಿಕೆ ಹಾಗೂ ಪರಿಸರ ಜೈವಿಕ ತಂತ್ರಜ್ಞಾನಗಳ ಕುರಿತು ಈ ಗ್ಯಾಲರಿಯಲ್ಲಿ ವಿಶೇಷ ಮಾಹಿತಿ ಒದಗಿಸಲಾಗಿದೆ. ಮಕ್ಕಳು, ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಐಐಟಿ (ಗುವಾಹಟಿ) ನಿರ್ದೇಶಕ ಹಾಗೂ ವಿಐಟಿಎಂ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಟಿ.ಜಿ.ಸೀತಾರಾಂ ಹೇಳಿದರು.

‘ಸುಮಾರು ₹1 ಕೋಟಿ ವೆಚ್ಚದಲ್ಲಿ ಗ್ಯಾಲರಿ ನಿರ್ಮಿಸಲಾಗಿದೆ. ಹಿಂದಿನ ಕೆಲ ವರ್ಷಗಳಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದಿವೆ. ಅವುಗಳ ಕುರಿತು ಜನರಿಗೆ ಮಾಹಿತಿ ಒದಗಿಸಬೇಕೆಂಬುದು ಈ ಗ್ಯಾಲರಿಯ ಉದ್ದೇಶ. ದಕ್ಷಿಣ ಭಾರತದಲ್ಲೇ ಇದೊಂದು ಹೊಸ ಪ್ರಯೋಗ’ ಎಂದು ವಿಐಟಿಎಂ ನಿರ್ದೇಶಕ ಕೆ.ಮದನ್‌ ಗೋಪಾಲ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು