ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಹಾಗೂ ಬಿಟ್‌ ಕಾಯಿನ್‌ ಹಗರಣ ಮುಚ್ಚಿ ಹಾಕುತ್ತಿದ್ದಾರೆ: ಸಿದ್ದರಾಮಯ್ಯ

Last Updated 27 ಅಕ್ಟೋಬರ್ 2021, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಪ್ರಭಾವಿ ರಾಜಕಾರಣಿಗಳು ಶಾಮೀಲಾಗಿರುವ ಡ್ರಗ್ಸ್‌ ಮತ್ತು ಬಿಟ್‌ ಕಾಯಿನ್‌ ಹಗರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಕುರಿತು ಬುಧವಾರ ಟ್ವೀಟ್‌ ಮಾಡಿರುವ ಅವರು, ‘ಡ್ರಗ್ಸ್‌ ಹಾಗೂ ಬಿಟ್‌ ಕಾಯಿನ್‌ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬ ವರದಿ ಕಳವಳಕಾರಿಯಾದುದು’ ಎಂದು ಹೇಳಿದ್ದಾರೆ.

‘ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ಪ್ರಭಾವ ಬೀರಿ ತನಿಖೆಯ ಹಾದಿ ತಪ್ಪಿಸಬಾರದು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಆರೋಪಿಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಚರ್ಚೆಗೆ ಗ್ರಾಸವಾದ ಟ್ವೀಟ್‌: ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಭಾಗಿಯಾಗಿರುವ ಡ್ರಗ್ಸ್‌ ಮತ್ತು ಬಿಟ್‌ ಕಾಯಿನ್‌ ಹಗರಣದಲ್ಲಿ ರಾಜ್ಯದ ‘ಅಧಿಕಾರಸ್ಥ ಪ್ರಭಾವಿ’ ಗಳ ನಂಟು ಪತ್ತೆಯಾಗಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಈ ಕುರಿತು ಸಿದ್ದರಾಮಯ್ಯ ಟ್ವೀಟ್‌ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಹ್ಯಾಕರ್‌ ಶ್ರೀಕೃಷ್ಣನನ್ನು ಸಿಸಿಬಿ ಪೊಲೀಸರು 2020ರಲ್ಲಿ ಬಂಧಿಸಿದ್ದರು. ಆತನಿಂದ ₹ 9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದ್ದರು. ಶ್ರೀಕೃಷ್ಣ ರಾಜ್ಯದ ಇ–ಸಂಗ್ರಹಣಾ ವ್ಯವಸ್ಥೆಯ ಪೋರ್ಟಲ್‌ ಹ್ಯಾಕ್‌ ಮಾಡಿ ₹ 11 ಕೋಟಿ ಮೊತ್ತವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದ.ಡಾರ್ಕ್‌ ವೆಬ್‌ ಮೂಲಕ ಮಾದಕವಸ್ತು ತರಿಸಿ, ಪೂರೈಕೆ ಮಾಡುತ್ತಿದ್ದ ಪ್ರಕರಣದಲ್ಲಿ ಶ್ರೀಕೃಷ್ಣನನ್ನು ಬಂಧಿಸಲಾಗಿತ್ತು. ಬಳಿಕ ಹ್ಯಾಕಿಂಗ್‌ ಮತ್ತು ಬಿಟ್‌ ಕಾಯಿನ್‌ ಹಗರಣ ಪತ್ತೆಯಾಗಿತ್ತು.

ಆರೋಪಿಗಳು ವಿವಿಧ ರಾಜ್ಯಗಳ ಪೋರ್ಟಲ್‌ಗಳು ಮತ್ತು ಹಣಕಾಸು ವಹಿವಾಟಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿರುವುದು ತನಿಖೆ ವೇಳೆ ಬಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT