ಗುರುವಾರ , ಮೇ 26, 2022
23 °C

ಬಿಟ್‌ಕಾಯಿನ್‌ ಹಗರಣ: ಭದ್ರತೆ ಬೆನ್ನಲ್ಲೇ ಹ್ಯಾಕರ್ ಶ್ರೀಕಿ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಟ್‌ಕಾಯಿನ್‌ ಹಗರಣದ ಸೂತ್ರದಾರ ಎನ್ನಲಾಗಿರುವ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಗೆ ಪೊಲೀಸ್‌ ಭದ್ರತೆ ನೀಡಲಾಗಿದೆ. ಭದ್ರತೆಗೆ ನಿಯೋಜನೆಯಾಗಿರುವ ಇನ್‌ಸ್ಪೆಕ್ಟರ್‌ ಆತನ ಮನೆಗೆ ಹೋಗಿ ನೋಡಿದರೆ ಆತ ನಾಪತ್ತೆ!

ಶ್ರೀಕಿ ಜೀವಕ್ಕೆ ಅಪಾಯವಿದ್ದು, ಆತನಿಗೆ ಪೊಲೀಸ್‌ ಭದ್ರತೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಹೀಗಾಗಿ ಬೆಂಗಳೂರು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರು ಆತನ ಭದ್ರತೆಗೆ ಇನ್‌ಸ್ಪೆಕ್ಟರ್‌ವೊಬ್ಬರನ್ನು ನಿಯೋಜಿಸಿದ್ದರು.

‘ಜಯನಗರದ ಈಸ್ಟ್‌ ಬ್ಲಾಕ್‌ನ 10ನೇ ಮುಖ್ಯರಸ್ತೆಯಲ್ಲಿರುವ ಶ್ರೀಕಿಗೆ ಮನೆಗೆ ಪೊಲೀಸರು ಮಂಗಳವಾರ ಹೋಗಿದ್ದರು. ಆದರೆ ಆತ ಮನೆಯಲ್ಲಿ ಇರಲಿಲ್ಲ. ಅವರ ಅಪ್ಪ ಅಮ್ಮ ಹಾಗೂ ಸಹೋದರನನ್ನು ವಿಚಾರಿಸಿದಾಗ ಹೊರಗಡೆ ಹೋಗಿರುವುದಾಗಿ ಸಿಬ್ಬಂದಿಗೆ ತಿಳಿಸಿದ್ದರು. ಆತ ಬರಬಹುದೆಂದು ಅವರು ಅಲ್ಲೇ ಕಾದಿದ್ದಾರೆ. ಸಾಕಷ್ಟು ಸಮಯ ಆದರೂ ಬಾರದಿದ್ದಾಗ ಆತನ ಮೊಬೈಲ್ ಸಂಖ್ಯೆ ನೀಡುವಂತೆ ಕೇಳಿದ್ದಾರೆ. ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದ್ದು ಆತ ಬಂದ ನಂತರ ಮಾಹಿತಿ ನೀಡುವುದಾಗಿ ಅವರು ತಿಳಿಸಿದ್ದಾರೆ. ದಿನವಿಡೀ ಕಾದ ಸಿಬ್ಬಂದಿ ಆತ ಪತ್ತೆಯಾಗದಿದ್ದಾಗ ವಾಪಸ್ಸಾಗಿದ್ದಾರೆ’ ಎಂದು ಕಮಲ್‌ ಪಂತ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬುಧವಾರ ಬೆಳಿಗ್ಗೆಯೂ ಸಿಬ್ಬಂದಿ ಆತನ ಮನೆ ಬಳಿ ಹೋಗಿದ್ದರು. ಆಗಲೂ ಆತನ ಸುಳಿವು ಸಿಕ್ಕಿಲ್ಲ’ ಎಂದು ಹೇಳಿದರು. 

ಕಾಂಗ್ರೆಸ್‌ ಪತ್ರಿಕಾಗೋಷ್ಠಿಯಲ್ಲಿ ಗುಪ್ತದಳ!

ಶ್ರೀಕಿ ಭಾಗಿಯಾಗಿರುವ ಬಿಟ್‌ಕಾಯಿನ್‌ ಹ್ಯಾಕಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಮುಖಂಡರು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯ ವೇಳೆ ಹಾಜರಿದ್ದ ರಾಜ್ಯ ಗುಪ್ತದಳದ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಲಾಯಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮತ್ತು ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಪತ್ರಿಕಾಗೋಷ್ಠಿ ನಿಗದಿಯಾಗಿತ್ತು. ಗೋಷ್ಠಿ ಆರಂಭಕ್ಕೂ ಮೊದಲೇ ಮಫ್ತಿಯಲ್ಲಿ ಬಂದಿದ್ದ ಗುಪ್ತದಳದ ಪೊಲೀಸ್‌ ಇನ್‌ಸ್ಪೆಕ್ಟರ್‌ ಕಾತ್ಯಾಯಿನಿ ಆಳ್ವ ಮತ್ತು ಸಿಬ್ಬಂದಿ ಸಭಾಂಗಣದಲ್ಲಿ ಆಸೀನರಾಗಿದ್ದರು. ಪತ್ರಿಕಾಗೋಷ್ಠಿ ಆರಂಭವಾಗುತ್ತಿದ್ದಂತೆಯೇ ಪಕ್ಷದ ಮುಖಂಡ ಎಂ. ರಾಮಚಂದ್ರಪ್ಪ ಮತ್ತು ಕೆಲವು ಕಾರ್ಯಕರ್ತರು, ಪೊಲೀಸ್‌ ಅಧಿಕಾರಿಗಳು ಅಲ್ಲಿರುವುದನ್ನು ಗುರುತಿಸಿದರು.

ಕಾತ್ಯಾಯಿನಿ ಬಳಿ ತೆರಳಿದ ರಾಮಚಂದ್ರಪ್ಪ, ‘ಪತ್ರಿಕಾಗೋಷ್ಠಿ ನಡೆಯುತ್ತಿದೆ. ಇಲ್ಲಿ ಪೊಲೀಸರು ಹಾಜರಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದಾಗ, ಪೊಲೀಸರು ಅಲ್ಲಿಂದ ಹೊರ ನಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು