ಬೆಂಗಳೂರು: ಮೊಸರು ಪೊಟ್ಟಣಗಳ ಮೇಲೆ ‘ದಹಿ’ ಎಂದು ಉಲ್ಲೇಖಿಸಬೇಕೆಂಬ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)’ದ ಆದೇಶ ರದ್ದಾದ ಬೆನ್ನಿಗೇ ಕ್ರೆಡಿಟ್‌ಗಾಗಿ ಕಿತ್ತಾಟ ಆರಂಭವಾಗಿದೆ.
ನಮ್ಮ ಮನವಿಗೆ ಸ್ಪಂದಿಸಿಯೇ ಎಫ್‌ಎಸ್‌ಎಸ್‌ಎಐ ತನ್ನ ಆದೇಶ ಪರಿಷ್ಕರಿಸಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ. ಅದಕ್ಕಾಗಿ ಎಫ್‌ಎಸ್‌ಎಸ್‌ಎಐಗೆ ಧನ್ಯವಾದ ಅರ್ಪಿಸಿದೆ. ಬಿಜೆಪಿ ನಿಲುವನ್ನು ಕಾಂಗ್ರೆಸ್ ಖಂಡಿಸಿದೆ. ಈ ಕಿತ್ತಾಟದಲ್ಲಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಮಧ್ಯಪ್ರವೇಶಿಸಿದ್ದು, ಬಿಜೆಪಿಯ ಪತ್ರದಿಂದಲೇ ಆದೇಶ ಪರಿಷ್ಕರಣೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೇ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
‘ದಹಿ’ ಎಂದು ಕಡ್ಡಾಯವಾಗಿ ಉಲ್ಲೇಖಿಸಬೇಕು ಎಂದು ಎಫ್‌ಎಸ್‌ಎಸ್‌ಎಐ ಇತ್ತೀಚೆಗೆ ಆಯಾ ರಾಜ್ಯಗಳ ಹಾಲು ಒಕ್ಕೂಟಗಳಿಗೆ ಸೂಚನೆ ನೀಡಿತ್ತು. ಇದರ ವಿರುದ್ಧ ಮೊದಲಿಗೆ ಕನ್ನಡ ಹೋರಾಟಗಾರರು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿದ್ದರು. ಕರ್ನಾಟಕದಲ್ಲಿ ಆರಂಭವಾಗಿದ್ದ ಅಭಿಯಾನದ ಕುರಿತ ವರದಿಯನ್ನು ಉಲ್ಲೇಖಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಎಫ್‌ಎಸ್‌ಎಸ್‌ಎಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಧನಿಗೂಡಿಸಿದ್ದರು. ನಂತರ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರೂ ಟ್ವೀಟ್ ಮಾಡಿ ಎಫ್‌ಎಸ್‌ಎಸ್‌ಎಐನ ಆದೇಶವನ್ನು ಟೀಕಿಸಿದ್ದರು.
ಕನ್ನಡ, ತಮಿಳು ಹೋರಾಟಗಾರರು, ಸ್ಟಾಲಿನ್ ಸೇರಿದಂತೆ ಹಲವು ರಾಜಕೀಯ ನಾಯಕರ ವಿರೋಧಗಳ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಗುರುವಾರ ತನ್ನ ಆದೇಶವನ್ನು ಪರಿಷ್ಕರಿಸಿದ್ದು, ಹಿಂದಿಯಲ್ಲಿ ‘ದಹಿ’ ಎಂದು ಉಲ್ಲೇಖಿಸಬೇಕಿಲ್ಲ ಎಂದು ತಿಳಿಸಿದೆ.
ಎಫ್‌ಎಸ್‌ಎಸ್‌ಎಐ ತನ್ನ ಆದೇಶ ಪರಿಷ್ಕರಿಸುತ್ತಲೇ ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಪ್ರಕಟಿಸಲಾಯಿತು. ‘ನಮ್ಮ ಮನವಿಗೆ ಸ್ಪಂದಿಸಿ, ನೀಡಿದ್ದ ಆದೇಶವನ್ನು ಹಿಂಪಡೆದಿದ್ದಕ್ಕೆ ಎಫ್‌ಎಸ್‌ಎಸ್‌ಎಐಗೆ ಧನ್ಯವಾದಗಳು’ ಎಂದು ಬರೆಯಲಾಗಿತ್ತು.
ಬಿಜೆಪಿಯ ಈ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್, ‘ಇನ್ಯಾರದ್ದೋ ಕೂಸಿಗೆ ಕುಲಾವಿ ಹೊಲಿಸುವಂತಹ "ಬಂಡ ಬಾಳು" ಬದುಕಲು ಬಿಜೆಪಿಗೆ ಮಾತ್ರ ಸಾಧ್ಯ! "ದಹಿ" ಹೇರಿಕೆಯ ವಿರುದ್ಧ ಯಾವೊಬ್ಬ ಬಿಜೆಪಿಗರೂ ಬಾಯಿ ಬಿಡಲಿಲ್ಲ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಒಮ್ಮೆಯೂ ಪ್ರಶ್ನಿಸದೆ, ಗುಲಾಮರಂತೆ ಸಮರ್ಥಿಸುವ ಬಿಜೆಪಿ ಈಗ "ದಹಿ"ಯ ಕ್ರೆಡಿಟ್ ಪಡೆಯಲು ಹವಣಿಸುತ್ತಿರುವುದು ಪರಮಹಾಸ್ಯ’ ಎಂದು ಟೀಕೆ ಮಾಡಿತ್ತು.
ಕಾಂಗ್ರೆಸ್ ಮಾಡಿದ್ದ ಈ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಅಣ್ಣಾಮಲೈ, ‘ಅಧಿಸೂಚನೆಯನ್ನು ಹಿಂದಕ್ಕೆ ಪಡೆಯುವಂತೆ ಕೋರಿ ಮಾರ್ಚ್ 29ರಂದು ನಾವು (ಬಿಜೆಪಿ) ಪತ್ರ ಬರೆದಿದ್ದೆವು. ನಮ್ಮ ಕೋರಿಕೆಯನ್ನು ಮನ್ನಿಸಿ ಮಾರ್ಚ್ 30 ರಂದು ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಈ ನಡುವೆ ಯಾರಾದರೂ ಗಾಢ ನಿದ್ರೆಯಲ್ಲಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಟ್ವೀಟ್ ಮಾಡಿದ್ದಾರೆ.
ದಹಿ ವಿರುದ್ಧದ ಟ್ವೀಟ್‌ಗಳು
ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರಿಂದ ಮಾರ್ಚ್ 27ರಂದು ಮೊದಲ ಟ್ವೀಟ್
***
ಕೆಎಂಎಫ್‌ಗೆ ‘ದಹಿ‘ ಆದೇಶ ಬಂದಿರುವುದು, ಕನ್ನಡ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿರುವದರ ಬಗ್ಗೆ ವರದಿ ಉಲ್ಲೇಖಿಸಿ ತಮಿಳುನಾಡು ಸಿಎಂ ಸ್ಟಾಲಿನ್ ಟ್ವೀಟ್ (ಮಾರ್ಚ್ 29)
ಎಫ್‌ಎಸ್‌ಎಸ್‌ಎಐಗೆ ಅಣ್ಣಾಮಲೈ ಪತ್ರ (ಮಾರ್ಚ್ 29)
ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಟ್ವೀಟ್ (ಮಾರ್ಚ್ 30)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.