ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬ್ಯಾನರ್‌ ತೆರವುಗೊಳಿಸಿ: ಸೌಮ್ಯ ರೆಡ್ಡಿ ಆಗ್ರಹ

Last Updated 3 ಏಪ್ರಿಲ್ 2021, 15:26 IST
ಅಕ್ಷರ ಗಾತ್ರ

ಬೆಂಗಳೂರು: ‘ಜನಸಾಮಾನ್ಯರಿಗೆ ಕೋವಿಡ್‌ ಲಸಿಕೆ ನೀಡಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯ. ಇದನ್ನು ಬಿಜೆಪಿಯ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳ ಬಳಿ ಬಿಜೆಪಿ ನಾಯಕರು, ಶಾಸಕರ ಚಿತ್ರಗಳನ್ನೊಳಗೊಂಡ ಬ್ಯಾನರ್‌ಗಳನ್ನು ಹಾಕಲಾಗಿದೆ. ಇವುಗಳನ್ನು ಕೂಡಲೇ ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

‘ಕೋವಿಡ್‌ ಕುರಿತು ಜಾಗೃತಿ ಮೂಡಿಸಲು ಸಹಾಯಕವಾಗಲಿ ಎಂಬ ಕಾರಣದಿಂದ ಬೆಂಗಳೂರಿನಲ್ಲಿ ಹೋರ್ಡಿಂಗ್‌ಗಳನ್ನು ಪ್ರದರ್ಶಿಸಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನ್ಯಾಯಾಲಯವು 2020ರ ಜುಲೈನಲ್ಲಿ ಅನುಮತಿ ನೀಡಿತ್ತು. ಸರ್ಕಾರದ ವತಿಯಿಂದ ನಡೆಯುತ್ತಿರುವ ಲಸಿಕಾ ಕಾರ್ಯಕ್ರಮವು ಪಕ್ಷದ ಸಾಧನೆ ಎಂಬಂತೆ ಬಿಂಬಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.

‘ಜಯನಗರ ಸಾರ್ವಜನಿಕ ಆಸ್ಪತ್ರೆ, ಸಾರಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬೃಂದಾವನ ನಗರ ಹಾಗೂ ಬೆಂಗಳೂರಿನ ಇತರ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ. ಆ ಜಾಗಗಳಲ್ಲಿ ಬಿಜೆಪಿಯ ಬ್ಯಾನರ್‌ಗಳನ್ನು ಹಾಕಲಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳ ಬಳಿ ಬ್ಯಾನರ್‌ ಹಾಕುವುದು ಎಷ್ಟು ಸರಿ. ಅದಕ್ಕೆ ಅವಕಾಶ ಕೊಟ್ಟವರು ಯಾರು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪಕ್ಷದ ಬ್ಯಾನರ್‌ ಮತ್ತು ಫ್ಲೆಕ್ಸ್‌ಗಳನ್ನು ಹಾಕಬಾರದೆಂದು ಹೈಕೋರ್ಟ್‌ ಎರಡು ವರ್ಷದ ಹಿಂದೆಯೇ ಆದೇಶಿಸಿದೆ. ಹಾಗಿದ್ದರೂ ಬಿಜೆಪಿಯು ಬ್ಯಾನರ್‌ ಹಾಕುವುದನ್ನು ಬಿಟ್ಟಿಲ್ಲ. ನ್ಯಾಯಾಲಯದ ಆದೇಶವನ್ನೇ ಆ ಪಕ್ಷ ಧಿಕ್ಕರಿಸಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT