ಶುಕ್ರವಾರ, ಜನವರಿ 22, 2021
28 °C
ಯಡಿಯೂರಪ್ಪ ಬೆಂಬಲಕ್ಕೆ ನಿಂತ ವಲಸಿಗರು, ಮೌನಕ್ಕೆ ಶರಣಾದ ಮೂಲ ಬಿಜೆಪಿ ಮುಖಂಡರು

ಬಗೆಹರಿಯದ ಸಂಪುಟ ಕಗ್ಗಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಕಗ್ಗಂಟು ಮುಂದುವರಿದಿದೆ. ಕೆಲವು ಸಚಿವರೂ ಸೇರಿದಂತೆ ’ವಲಸಿಗ‘ರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಾಯಕತ್ವ ಬೆಂಬಲಿಸಿ ಭಾನುವಾರ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಮೂಲ ಬಿಜೆಪಿಯ ಬಹುತೇಕ ನಾಯಕರು ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದ್ದಾರೆ.

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರಿಂದ ಯಾವುದೇ ಸೂಚನೆ ಬಂದಿಲ್ಲ. ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರವಾಸಕ್ಕೆ ತೆರಳುವ ಮುನ್ನ ಭಾನುವಾರ ಬೆಳಿಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಸಂಪುಟ ವಿಸ್ತರಣೆಗೆ ನಾವು, ನೀವೂ ಇಬ್ಬರೂ ಕಾಯಬೇಕು‘ ಎಂದಿದ್ದರು. ಮಧ್ಯಾಹ್ನ ಚಿತ್ರದುರ್ಗದಲ್ಲಿ ಹೇಳಿಕೆ ನೀಡಿದ ಅವರು, ಎರಡು ಅಥವಾ ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಪ್ರಕಟಿಸಿದರು.

ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮೊದಲೇ ಸಂಪುಟ ವಿಸ್ತರಣೆ ಪೂರ್ಣಗೊಳಿಸಿ ನಾಯಕತ್ವ ಬದಲಾವಣೆಯ ಪ್ರಸ್ತಾವವನ್ನು ಬದಿಗೆ ಸರಿಸಲು ಯಡಿಯೂರಪ್ಪ ಕಸರತ್ತು ಮುಂದುವರಿಸಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಗೆ ಅನುಮೋದನೆ ಪಡೆಯಲು ವರಿಷ್ಠರ ಭೇಟಿಗೆ ಸಮಯ ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ವರಿಷ್ಠರ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ.

ಈ ಎಲ್ಲದರ ನಡುವೆಯೇ ಮಠಾಧೀಶರೂ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ ಕುರಿತ ಚರ್ಚೆಯಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಯಡಿಯೂರಪ್ಪ ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದಾರೆ. ತ್ವರಿತವಾಗಿ ಸಂಪುಟ ವಿಸ್ತರಣೆ ಮಾಡಿ, ಕುರುಬ ಸಮುದಾಯದ ಎಚ್‌.ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ ಮತ್ತು ಆರ್‌. ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಶಾಖಾ ಮಠದ ಸಿದ್ದರಾಮಪುರಿ ಸ್ವಾಮೀಜಿ ಆಗ್ರಹಿಸಿದ್ದಾರೆ.

ಬದಲಾವಣೆ ಪ್ರಸ್ತಾವವೇ ಇಲ್ಲ: ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಎಂ.ಟಿ.ಬಿ. ನಾಗರಾಜ, ‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಕುರಿತು ಎಲ್ಲೂ ಚರ್ಚೆ ನಡೆದಿಲ್ಲ. ಅವಧಿ ಮುಗಿಯುವವರೆಗೂ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ‘ ಎಂದರು.

‘ಬೆಂಗಳೂರಿನಲ್ಲಿ ಶನಿವಾರ ನಾವು ನಡೆಸಿದ ಸಭೆಯಲ್ಲಿ ಯಾವುದೇ ವಿಶೇಷ ಇರಲಿಲ್ಲ. ನಮ್ಮನ್ನು ಮಂತ್ರಿ ಮಾಡಬೇಕಿತ್ತು. ಆದರೆ, ಸಂಪುಟ ವಿಸ್ತರಣೆಯಲ್ಲಿ ವಿಳಂಬ ಆಗಿದೆ. ಯಡಿಯೂರಪ್ಪ ಅವರು ಹೇಳಿದಂತೆ ನಾವು ಕಾಯಬೇಕು. ಕೆಲವೇ ದಿನಗಳಲ್ಲಿ ಆ ಸಂದರ್ಭ ಒದಗಿ ಬರಲಿದೆ‘ ಎಂದರು.

‘ಬಿಜೆಪಿಯಲ್ಲಿ ಮೂಲ, ವಲಸಿಗರು ಎಂಬ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ತಮ್ಮ ಮೇಲೆ ಅಭಿಮಾನ ಜಾಸ್ತಿ ಇದೆ. ಕೆಲವೊಮ್ಮೆ ಮಾತನಾಡುವಾಗ ಶಬ್ಧಗಳ ವ್ಯತ್ಯಾಸದಿಂದ ಪ್ರಮಾದ ಆಗುತ್ತದೆ. ಆ ಬಗ್ಗೆ ತಮಗೇನೂ ಬೇಸರವಿಲ್ಲ’ ಎಂದು ರೇಣುಕಾಚಾರ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾವವಿಲ್ಲ ಎಂದು ಮಡಿಕೇರಿಯಲ್ಲಿ ಹೇಳಿಕೆ ನೀಡಿರುವ ಕಂದಾಯ ಸಚಿವ ಆರ್‌. ಅಶೋಕ, ‘ನಾನು ದೆಹಲಿಗೆ ಹೋಗಿ ಬಂದಿದ್ದೇನೆ. ವರಿಷ್ಠರ ಹಂತದಲ್ಲಿ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಯಡಿಯೂರಪ್ಪ ಇನ್ನೂ ಎರಡೂವರೆ ವರ್ಷ ಕಾಲ ಮುಖ್ಯಮಂತ್ರಿಯಾಗಿ ಉಳಿಯಲಿದ್ದಾರೆ. ಕೊಟ್ಟ ಮಾತಿನಂತೆ ಶಂಕರ್‌, ಮುನಿರತ್ನ, ನಾಗರಾಜ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ‘ ಎಂದರು.

ಬಿಎಸ್‌ವೈಗೆ ಮುರುಘಾ ಶರಣರ ಅಭಯ

ಚಿತ್ರದುರ್ಗ: ‘ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ (ಒಬಿಸಿ) ಲಿಂಗಾಯತರನ್ನು ಸೇರ್ಪಡೆ ಮಾಡುವುದಕ್ಕಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕು. ಯಡಿಯೂರಪ್ಪ ಅವರೇ ನಿಮಗೇನೂ ಆಗದು, ಧೈರ್ಯದಿಂದ ಇರಿ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಯ ನೀಡಿದರು.

ಇಲ್ಲಿನ ಮುರುಘಾ ಮಠದಲ್ಲಿ ಭಾನುವಾರ ನಡೆದ ‘ಮುರುಘಾಶ್ರೀ ಪ್ರಾಚ್ಯವಸ್ತು ಸಂಗ್ರಹಾಲಯ’ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಲು ನೀವು ಧೈರ್ಯದಿಂದ ದೆಹಲಿಗೆ ಹೋಗಿ. ನೀವು ಯಾವಾಗಲೂ ಹೀಗೆ ಇರುತ್ತೀರಿ’ ಎಂದು ವೇದಿಕೆ ಮೇಲಿದ್ದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ನೋಡಿದರು. ಶರಣರ ಅಭಿಪ್ರಾಯಕ್ಕೆ ಇಬ್ಬರೂ ಸ್ವಾಮೀಜಿಗಳು ಒಪ್ಪಿಗೆ ಸೂಚಿಸಿದರು.

ತವರಿನಲ್ಲಿ ಈಶ್ವರಪ್ಪ ಗೈರು

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಭಾನುವಾರ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಆದರೆ, ಅವರ ದೀರ್ಘಕಾಲದ ರಾಜಕೀಯ ಒಡನಾಡಿಯೂ ಆಗಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರೇ ಜತೆಗಿರಲಿಲ್ಲ

ಕುರುಬರ ಎಸ್‌ಟಿ ಹೋರಾಟ ಸಮಿತಿ ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಈಶ್ವರಪ್ಪ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಯವರ ಶಿವಮೊಗ್ಗ ಪ್ರವಾಸ ದಿಢೀರ್‌ ತೀರ್ಮಾನ ಆಗಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ದೂರ ಉಳಿದರು ಎಂಬ ಮಾಹಿತಿ ಲಭ್ಯವಾಗಿದೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಕಾಂಗ್ರೆಸ್‌, ಜೆಡಿಎಸ್‌ ತೊರೆದ ಬಂದವರು ಮಂತ್ರಿ ಸ್ಥಾನ ಕೇಳುವುದು ತಪ್ಪಲ್ಲ. ಅವರ ಋಣ ತೀರಿಸಬೇಕಿದೆ, ತೀರಿಸುತ್ತೇವೆ. ರಾಜ್ಯದ ಜನರು ಪೂರ್ಣ ಬಹುಮತ ನೀಡಿದ್ದರೆ ಈ ಗೊಂದಲವೇ ಇರುತ್ತಿರಲಿಲ್ಲ‘ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು