ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಕಾಂಗ್ರೆಸ್‌ ದೂತರು ಸಂಪರ್ಕದಲ್ಲಿ...: ಎಚ್‌.ಡಿ ಕುಮಾರಸ್ವಾಮಿ

ಪಕ್ಷದ ಬೆಳವಣಿಗೆಯಿಂದ ಉಭಯ ಪಕ್ಷಗಳ ವರಿಷ್ಠರು ಕಂಗೆಟ್ಟಿದ್ದಾರೆ –ಎಚ್‌ಡಿಕೆ
Last Updated 28 ಮಾರ್ಚ್ 2023, 17:29 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್‌ ಹೈಕಮಾಂಡ್‌ನ ದೂತರು ಈಗಾಗಲೇ ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಎರಡೂ ಪಕ್ಷಗಳ ಸ್ಥಳೀಯ ನಾಯಕರು ಜೆಡಿಎಸ್‌ ಕುರಿತು ಲಘುವಾಗಿ ಮಾತನಾಡುತ್ತಿದ್ದಾರೆ. ಜೆಡಿಎಸ್‌ ಪಕ್ಷವನ್ನು ಮಗಿಸಿಬಿಟ್ಟಿದ್ದೇವೆ ಎನ್ನುವವರೂ ಇದ್ದಾರೆ. ಕೆಲವರು 140–150 ಸ್ಥಾನ ಗೆಲ್ಲುವ ಮಾತನಾಡುತ್ತಿದ್ದಾರೆ. ಆದರೆ, ಜೆಡಿಎಸ್‌ನ ಬೆಳವಣಿಗೆಯಿಂದ ಎರಡೂ ಪಕ್ಷದ ವರಿಷ್ಠರು ಕಂಗೆಟ್ಟಿದ್ದಾರೆ. ಅವರ ದೂತರು ಚರ್ಚೆಗೆ ಬಂದಿದ್ದಾರೆ. ಸಹಜವಾಗಿ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದು ಹೇಳಿದರು.

‘ಹೊರಗೆ ಅವರು ಏನನ್ನಾದರೂ ಮಾತನಾಡಲಿ. ಒಳಗಡೆ ಬೇರೆಯೇ ಪರಿಸ್ಥಿತಿ ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌ 75 ಸ್ಥಾನಗಳನ್ನು ದಾಟುವುದಿಲ್ಲ ಎಂದು ಕೆಲವು ಅಧಿಕಾರಿಗಳೇ ಚರ್ಚೆ ನಡೆಸಿದ್ದಾರೆ. ನಮ್ಮ ಶಕ್ತಿ ಏನು ಎಂಬುದು ನನಗೆ ಗೊತ್ತಿದೆ. 123 ಸ್ಥಾನ ಗಳಿಸುವುದೇ ನನ್ನ ಗುರಿ. ಅದಕ್ಕಾಗಿ ಏಪ್ರಿಲ್‌ 10ರವರೆಗೂ ಪಂಚರತ್ನ ರಥಯಾತ್ರೆ ಮುಂದುವರಿಸುತ್ತೇನೆ’ ಎಂದು ಹೇಳಿದರು.

ಮೀಸಲಾತಿ ಪರಿಷ್ಕರಣೆಗೆ ಬೆಂಬಲವಿಲ್ಲ:

‘ಮೀಸಲಾತಿ ಹಂಚಿಕೆಯನ್ನು ಪರಿಷ್ಕರಿಸಲು ಬಿಜೆಪಿ ಸರ್ಕಾರ ಕೈಗೊಂಡಿರುವ ತೀರ್ಮಾನಕ್ಕೆ ನನ್ನ ಬೆಂಬಲವಿಲ್ಲ. ಸಂವಿಧಾನದ ಆಶಯದಂತೆ ಮೀಸಲಾತಿ ಹಂಚಿಕೆಗೆ ನಮ್ಮ ಬೆಂಬಲ. ಮೀಸಲಾತಿ ಹೆಸರಿನಲ್ಲಿ ಜಾತಿ– ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸುವ ತೀರ್ಮಾನಕ್ಕೆ ಬೆಂಬಲ ನೀಡುವುದಿಲ್ಲ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಕಾಂಗ್ರೆಸ್‌ ಯಾರನ್ನೂ ಸಂಪರ್ಕಿಸಿಲ್ಲ’

‘ಮೈತ್ರಿ ಪ್ರಯತ್ನದ ಕುರಿತು ಎಚ್‌.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು. ಕಾಂಗ್ರೆಸ್‌ ಪಕ್ಷ ಅಂತಹ ಪ್ರಯತ್ನ ಮಾಡಿಲ್ಲ. ನಾವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಯಾರ ಬೆಂಬಲವೂ ಅಗತ್ಯವಿಲ್ಲ. ನಮ್ಮ ಪಕ್ಷದ ಯಾರೂ ಅವರನ್ನು ಸಂಪರ್ಕಿಸಿಲ್ಲ. ಅವರನ್ನು ಸಂಪರ್ಕಿಸಿದವರ ಹೆಸರು ಬಹಿರಂಗಪಡಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದರು.

ಬಿಜೆಪಿ– ಜೆಡಿಎಸ್‌ ಹೊಂದಾಣಿಕೆ–ಡಿಕೆಶಿ (ಮಂಡ್ಯ ವರದಿ): ‘ಬಿಜೆಪಿ– ಜೆಡಿಎಸ್‌ ಹೊಂದಾ ಣಿಕೆ ಬಗ್ಗೆ ಬಿಜೆಪಿಯ ಸಿ.ಪಿ.ಯೋಗೇಶ್ವರ್‌ ಅವರೇ ಮಾತನಾಡಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ನಾನು ಮಾತನಾಡಬೇಕಾಗಿಲ್ಲ. ಮಾಧ್ಯಮಗಳೇ ವ್ಯಾಖ್ಯಾನ ಮಾಡಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಸಚಿವ ಕೆ.ಸಿ.ನಾರಾಯಣಗೌಡ ಮತ್ತು ಸಿ.ಪಿ.ಯೋಗೇಶ್ವರ್‌ ನನ್ನೊಂದಿಗೆ ಮಾತನಾಡಿಲ್ಲ. ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುವೆ’ ಎಂದರು.

‘ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಗೆ ವೋಟು ಹಾಕುವುದು ವ್ಯರ್ಥ. ರಾಜ್ಯದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ಅವಕಾಶವಿದೆ. ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಈಗಾಗಲೇ ಅವಕಾಶ ಕೊಟ್ಟಿದ್ದೀರಿ. ನನಗೂ ಒಮ್ಮೆ ಅವಕಾಶ ಕೊಡಿ’ ಎಂದು ಕೋರಿದರು.

‘ಶ್ರೀರಂಗಪಟ್ಟಣಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮುಂತಾದವರು ಇತಿಹಾಸಕ್ಕೆ ಅಪಚಾರ ಮಾಡುವ ಕೆಲಸ ಮಾಡಿದ್ದರು. ಒಕ್ಕಲಿಗ ಸಮುದಾಯಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದರು. ಅವರ ಪ್ರಯತ್ನ ಸಫಲವಾಗಲಿಲ್ಲ’ ಎಂದರು.

ಜೆಡಿಎಸ್, ಕಾಂಗ್ರೆಸ್ ನಮ್ಮ ಪ್ರತಿಸ್ಪರ್ಧಿ: ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ‘ಜೆಡಿಎಸ್ ಮತ್ತು ಕಾಂಗ್ರೆಸ್ ನಮ್ಮ ಪ್ರತಿಸ್ಪರ್ಧಿಗಳು. ಯಾರ ಜೊತೆಗೂ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಈಗಾಗಲೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನ್ನು ಚುನಾವಣೆಯಲ್ಲಿ ಎದುರಿಸುತ್ತೇವೆ. ಎರಡು ಚುನಾವಣೆಗಳಲ್ಲಿ ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ಬಹುಮತ ‌ಇರಲಿಲ್ಲ. ಈ ಬಾರಿ ಸಂಪೂರ್ಣ ಬಹುಮತ ಪಡೆಯುತ್ತೇವೆ’ ಎಂದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಕುರಿತು, ‘ಮಾಡಾಳ್‌ ಬಂಧನದಿಂದ ಬಿಜೆಪಿಗೆ ಮುಜುಗರವಾ
ಗಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ನೀಡುವ ಕೆಲಸ ಆಗುತ್ತದೆ’ ಎಂದರು. ಯಡಿಯೂರಪ್ಪ ಮನೆಗೆ ಕಲ್ಲು‌ ತೂರಾಟ ವಿಚಾರವಾಗಿ ಮಾತನಾಡಿದ ಅವರು, ‘ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿ ಯಶಸ್ವಿಯಾಗಿ ಜಾರಿಗೊಳಿಸಿದ್ದನ್ನು ಸಹಿಸದೆ ಕಲ್ಲುತೂರಾಟ, ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT