ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಬೆಂಕಿ ಉರಿಯುವಾಗ ನಮ್ಮಲ್ಲಿ ಹೊಗೆ ಬರುವುದು ಸಹಜ: ಕಟೀಲ್

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌
Last Updated 2 ಏಪ್ರಿಲ್ 2021, 8:51 IST
ಅಕ್ಷರ ಗಾತ್ರ

ಮಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯದಲ್ಲಿ ದೊಡ್ಡದಾಗಿ ಬೆಂಕಿ ಉರಿಯುತ್ತಿರುವಾಗ, ನಮ್ಮಲ್ಲಿ ಸ್ವಲ್ಪ ಹೊಗೆ ಬರುವುದು ಸಹಜ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್‌.ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಮಂಗಳೂರಿನಲ್ಲಿ ಶುಕ್ರವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್‌ನಲ್ಲಿ ನಾಯಕರ ಜಗಳ ಬೀದಿಗೆ ಬಿದ್ದಿದೆ. ಉಪ ಚುನಾವಣೆ ಸಂದರ್ಭದಲ್ಲಿ ಅವರ ನಡುವಿನ ಗೊಂದಲಗಳು ಮಿತಿಮೀರಿದೆ. ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಎಂದು ಟ್ವೀಟ್‌ನಲ್ಲೇ ಹೇಳಿದ್ದಾರೆ. ಅದನ್ನು ಶಿವಕುಮಾರ್‌ ವಿರೋಧಿಸಿದ್ದಾರೆ. ಅದರ ಎದುರು ನಮ್ಮ ಗೊಂದಲ ದೊಡ್ಡದಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಈಶ್ವರಪ್ಪ ಸತ್ಯ ಹೇಳಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ರಾಹುಲ್‌ ಗಾಂಧಿ ಅವರು ತಮ್ಮದೇ ಸರ್ಕಾರದ ಸುಗ್ರೀವಾಜ್ಞೆಯ ಪ್ರತಿಯನ್ನು ಪ್ರತಿಕಾಗೋಷ್ಠಿಯಲ್ಲಿ ಹರಿದುಹಾಕಿದ್ದಕ್ಕಿಂತ ದೊಡ್ಡ ಅವಮಾನ ಇದಲ್ಲ ಎಂಬುದನ್ನು ಅವರು ತಿಳಿದುಕೊಳ್ಳಲಿ’ ಎಂದು ನಳಿನ್‌ ತಿರುಗೇಟು ನೀಡಿದರು.

‘ಈಶ್ವರಪ್ಪ ಹಿರಿಯ ನಾಯಕರು. ಸಮಸ್ಯೆಯ ಬಗ್ಗೆ ಕುಳಿತು ಚರ್ಚೆ ಮಾಡಬಹುದಿತ್ತು. ಅದರ ಬದಲು ರಾಜ್ಯಪಾಲರಿಗೆ, ಪಕ್ಷದ ವರಿಷ್ಠರಿಗೆ, ನನಗೆ ಪತ್ರ ಬರೆದಿದ್ದಾರೆ. ಈಗಾಗಲೇ ಈಶ್ವರಪ್ಪ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಸಮಸ್ಯೆಯನ್ನು ಪಕ್ಷದ ಚೌಕಟ್ಟಿನಲ್ಲಿ ಮಾತುಕತೆ ನಡೆಸಿ, ಎರಡು ದಿನದೊಳಗೆ ನಾನೇ ಪರಿಹಾರ ಮಾಡುತ್ತೇನೆ’ ಎಂದು ತಿಳಿಸಿದರು.

‌‘ಶಾಸಕ ಬಸನಗೌಡ ಯತ್ನಾಳ್‌ ಮತ್ತು ಕೆ.ಎಸ್‌. ಈಶ್ವರಪ್ಪ ಅವರ ವಿಚಾರ ವಿಭಿನ್ನವಾದುದು. ಯತ್ನಾಳ್‌ ಅವರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದ್ದು, ಅವರು ಉತ್ತರಿಸುತ್ತಾರೆ. ಈಶ್ವರಪ್ಪ ಪತ್ರದಲ್ಲಿ ಉಲ್ಲೇಖಿಸಿರುವುದು ಅನುದಾನದ ಬಗ್ಗೆ. ಈ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮಾತುಕತೆ ನಡೆಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಉಪ ಚುನಾವಣೆ ನಡೆಯುವ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ತನ್ನೆಲ್ಲ ಪ್ರಯತ್ನ ಮಾಡುತ್ತಿದೆ. ಮೂರೂ ಕ್ಷೇತ್ರಗಳಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿಡಿ ಪ್ರಕರಣವು ತನಿಖಾ ಹಂತದಲ್ಲಿದ್ದು, ಕಾನೂನು ಪ್ರಕಾರವಾದ ಚಿಂತನೆಗಳು ನಡೆಯುತ್ತದೆ. ಹೀಗಾಗಿ, ಅದರ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ತನಿಖೆಯಲ್ಲಿ ಏನು ಬರುತ್ತದೆಯೋ ಅದೇ ಸತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT