ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಹೊಡೆದವ ಅವ ನಮ್ಮವನಲ್ಲ, ಅವ ನಮ್ಮವನಲ್ಲ ಎನ್ನುತ್ತಿರುವ ಬಿಜೆಪಿ–ಕಾಂಗ್ರೆಸ್

Last Updated 20 ಆಗಸ್ಟ್ 2022, 10:44 IST
ಅಕ್ಷರ ಗಾತ್ರ

ಮಡಿಕೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕೋಳಿ ಮೊಟ್ಟೆ ಹೊಡೆದವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿವೆ.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಮೊಟ್ಟೆ ಹೊಡೆದಿದ್ದಾರೆ ಎನ್ನಲಾದ ಸಂಪತ್ ಎಂಬ ವ್ಯಕ್ತಿಯು ನನ್ನೊಡನೆ ಫೋಟೊ ತೆಗೆಸಿಕೊಂಡಿದ್ದು, ಆತ ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್ ಹೇಳಿದೆ. ಆದರೆ, ಇದು ಸತ್ಯಕ್ಕೆ ದೂರ. ನನ್ನೊಡನೆ ಅನೇಕ ಕಾಂಗ್ರೆಸ್‌ ಕಾರ್ಯಕರ್ತರೂ ಚಿತ್ರ ತೆಗೆಸಿಕೊಂಡಿದ್ದಾರೆ. ಹಾಗೆಂದು, ಅವರೆಲ್ಲ ನಮ್ಮ ಪಕ್ಷದ ಕಾರ್ಯಕರ್ತರು ಆಗಲು ಸಾಧ್ಯವಿಲ್ಲ’ ಎಂದರು.

‘ಆತ ಕಾಂಗ್ರೆಸ್‌ ಬಾವುಟ, ಶಾಲು ಹಾಕಿಕೊಂಡು ನಿಂತಿರುವ ಚಿತ್ರವೂ ನನ್ನ ಬಳಿ ಇದೆ. ನನ್ನ ಪಕ್ಷದ ಸದಸ್ಯತ್ವವನ್ನೂ ಆತ ಪಡೆದಿಲ್ಲ. ಒಂದು ವೇಳೆ ಸದಸ್ಯತ್ವ ಪಡೆದಿದ್ದರೆ ಕೂಡಲೇ ಆತನನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು’ ಎಂದು ಹೇಳಿದರು.

ಮೊಟ್ಟೆ ಹೊಡೆದವರು ಬಿಜೆಪಿ ಕಾರ್ಯಕರ್ತರೇ ಆಗಿದ್ದರೆ ಆ ಕುರಿತ ಸಾಕ್ಷ್ಯ ಇದ್ದರೆ ಅದನ್ನು ಪೊಲೀಸರಿಗೆ ನೀಡುವಂತೆಯೂ ಅವರು ಸುದ್ದಿಗಾರರಿಗೆ ತಿಳಿಸಿದರು.

ಸಿದ್ದರಾಮಯ್ಯ ಗೆಲ್ಲಲು ಕ್ಷೇತ್ರ ಹುಡುಕುತ್ತಿದ್ದಾರೆ. ಹಾಗಾಗಿ, ಅವರು ಹೋದ ಕಡೆಯಲ್ಲೆಲ್ಲ ಕೋಮುಗಲಭೆ ಸೃಷ್ಟಿಸುಲು ಹವಣಿಸುತ್ತಿದ್ದಾರೆ. ಅವರು ಬೇಕಾದರೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲಿ ಎಂದು ಸವಾಲೆಸೆದರು.

ಮೊಟ್ಟೆ ಹೊಡೆದವರು ಬಿಜೆಪಿ ಶಾಸಕರ ಆಪ್ತರು; ಕಾಂಗ್ರೆಸ್ ಆರೋಪ

‘ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕೋಳಿಮೊಟ್ಟೆ ಹೊಡೆದವರು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ಆಪ್ತರಾಗಿದ್ದಾರೆ’ ಎಂದು ಯುವ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್‌ಗೌಡ ಆರೋಪಿಸಿದರು.

‘ಮೊಟ್ಟೆ ಹೊಡೆದಿದ್ದಾರೆ ಎನ್ನಲಾದ ಸಂಪತ್ ಎಂಬುವವರು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಜತೆ ಕೇಸರಿ ಶಾಲು ಹಾಕಿಕೊಂಡು ಫೋಟೊ ತೆಗೆಸಿಕೊಂಡಿದ್ದಾರೆ. ಆತ ಕಾಂಗ್ರೆಸ್ ಕಾರ್ಯಕರ್ತ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT