ಭಾನುವಾರ, ಮಾರ್ಚ್ 7, 2021
32 °C
ನಾಯಕತ್ವ ಸೇರಿ ಹಲವು ವಿಷಯಗಳ ಚರ್ಚೆ ಸಾಧ್ಯತೆ

ಅಮಿತ್ ಶಾ ಎರಡು ದಿನಗಳ ರಾಜ್ಯ ಭೇಟಿ: ಶಾ ಸಮ್ಮುಖದಲ್ಲಿ ಪ್ರಮುಖರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎರಡು ದಿನಗಳ ರಾಜ್ಯ ಭೇಟಿ ಕಾರಣ ಬಿಜೆಪಿ ಪ್ರಮುಖ ನಾಯಕರ ಸಮಿತಿ ಸಭೆ ನಡೆಯಲಿದ್ದು,  ಶಾ ಮತ್ತು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರು ಭಾಗವಹಿಸಲಿದ್ದಾರೆ.

ನಾಯಕತ್ವದ ವಿಚಾರವೂ ಸೇರಿ ರಾಜ್ಯ ಬಿಜೆಪಿಯನ್ನು ಆಂತರಿಕ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಚಿವ ಸಂಪುಟ ವಿಸ್ತರಣೆ  ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಸೇರಿ ಹಲವರು ಮುಖ್ಯಮಂತ್ರಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಸಂದರ್ಭದಲ್ಲಿ ಈ ಸಭೆ ಮಹತ್ವ ಪಡೆದಿದೆ.

‘ಶಾ ಅವರು ಬೆಂಗಳೂರಿಗೆ ಭೇಟಿ ನೀಡುವ ಕಾರಣ ಸಂಪುಟದ ಹಿರಿಯ ಸದಸ್ಯರನ್ನು ಭೇಟಿ ಮಾಡಲು ಬಯಸಿದ್ದಾರೆ. ಎಲ್ಲರ ಭೇಟಿ ಕಷ್ಟ ಆಗಲಿದೆ ಎಂಬ  ಕಾರಣಕ್ಕೆ, ಹಿರಿಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಸಭೆಯಲ್ಲಿ ಉಪಚುನಾವಣೆಗಳ ಅಭ್ಯರ್ಥಿ ಆಯ್ಕೆ, ಪಕ್ಷದ ಶಾಸಕರು ಶಿಸ್ತು ಕಾಪಾಡುವುದೂ ಸೇರಿ ಹಲವು ವಿಷಯಗಳು ಚರ್ಚೆ ಆಗಲಿವೆ’ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಲ್ಲಿ ಒಂದು ಗುಂಪು ನಾಯಕತ್ವದ ಬದಲಾವಣೆಗೆ ಒತ್ತಾಯಿಸುತ್ತಿದೆ. ಮುಖ್ಯಮಂತ್ರಿಯಾಗಿ ಒಂದು ವರ್ಷದ ಬಳಿಕ ಬಿಟ್ಟುಕೊಡಬೇಕು ಎಂಬ ಷರತ್ತು ಹಾಕಲಾಗಿತ್ತು. ಅದಕ್ಕೆ ಯಡಿಯೂರಪ್ಪ ಒಪ್ಪಿಕೊಂಡಿದ್ದರು ಎಂದು ಹೇಳಲಾಗಿದೆ.

ಯಡಿಯೂರಪ್ಪ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಈ ಸೂಚನೆ ನೀಡಲಾಗಿದೆ.  ಆದರೆ, ತಾವು ಅವಧಿ ಪೂರ್ಣಗೊಳಿಸುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ವಿರಮಿಸುವುದಾಗಿ ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೀಗ ಬಸನಗೌಡ ಪಾಟೀಲ ಯತ್ನಾಳ, ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ವಿರುದ್ಧ ಸಿ.ಡಿ ಪ್ರಕರಣದ ಗಂಭೀರ ಆರೋಪ ಮಾಡಿರುವುದು, ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಈ ಕುರಿತು ಅಮಿತ್‌ ಶಾ ಕೋರ್‌ ಕಮಿಟಿ ಸಭೆಯಲ್ಲಿ ಏನು ಹೇಳುತ್ತಾರೆ ಎಂಬ ಕುತೂಹಲ ಉಂಟಾಗಿದೆ. ವಿಂಡ್ಸರ್‌ ಮ್ಯಾನರ್‌ ಹೊಟೇಲ್‌ನಲ್ಲಿ ಈ ಸಭೆ ನಡೆಯಲಿದೆ.

ಅಮಿತ್ ಶಾ ಎರಡು ದಿನಗಳ ರಾಜ್ಯ ಭೇಟಿ

* ಶನಿವಾರ ಬೆಳಿಗ್ಗೆ 11.30 ಕ್ಕೆ ಬೆಂಗಳೂರಿಗೆ ಬಂದು ಹೆಲಿಕಾಪ್ಟರ್‌ ಮೂಲಕ ಶಿವಮೊಗ್ಗಕ್ಕೆ ತೆರಳಲಿದ್ದು, ಮಧ್ಯಾಹ್ನ 1.30 ಕ್ಕೆ ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸುವರು.

* ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ತುರ್ತು ನಿರ್ವಹಣೆ ವ್ಯವಸ್ಥೆ, ಪೊಲೀಸ್‌ ಗೃಹ 2025 ಮತ್ತು ಮೀಸಲು ಪಡೆಯ ಆಡಳಿತ ಕಚೇರಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 7.40 ಕ್ಕೆ ಪ್ರಮುಖ ನಾಯಕರ ಸಮಿತಿ ಸಭೆಯಲ್ಲಿ ಭಾಗವಹಿಸುತ್ತಾರೆ.

* ಭಾನುವಾರ ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಜನ ಸೇವಕ ಸಮಾವೇಶದ ಸಮಾರೋಪ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ದಿವಂಗತ ಸುರೇಶ್‌ ಅಂಗಡಿಯವರ ಮನೆಗೂ ಭೇಟಿ ನೀಡಲಿದ್ದಾರೆ. ಅಲ್ಲಿಂದಲೇ ದೆಹಲಿಗೆ ವಾಪಸಾಗಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು