ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಕುರಿತ ಹೇಳಿಕೆ ಬಗ್ಗೆ ವಿಜೇತಾ ಅನಂತಕುಮಾರ್‌ ಸ್ಪಷ್ಟನೆ: ಏನಂದ್ರು?

Last Updated 2 ಆಗಸ್ಟ್ 2021, 17:33 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್ ಕುರಿತು ಇತ್ತೀಚೆಗೆ ವ್ಯಕ್ತಪಡಿಸಿದ್ದ ಅಭಿಪ್ರಾಯ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಆ ಕುರಿತು ಕೇಂದ್ರದ ಮಾಜಿ ಸಚಿವ, ದಿ. ಅನಂತಕುಮಾರ್ ಪುತ್ರಿ ವಿಜೇತಾ ಅನಂತಕುಮಾರ್ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.

‘ಇತ್ತೀಚೆಗೆ ನಾನು ಮಾಡಿದ ಟ್ವೀಟೊಂದು ಊಹಾಪೋಹಗಳಿಗೆ ಕಾರಣವಾಗಿದೆ. ಈಗ ನಾನು ಪ್ರಕಟಿಸಿರುವ ಸಂದೇಶವು ಗೊಂದಲಗಳಿಗೆ ತೆರೆ ಎಳೆಯಲಿದ್ದು ಚರ್ಚೆಯನ್ನು ಇಲ್ಲಿಗೆ ಮುಕ್ತಾಯಗೊಳಿಸಲಿದೆ. ನಿಮ್ಮೆಲ್ಲರೊಂದಿಗೆ ಇಲ್ಲಿ ಸಂವಹನ ನಡೆಸಲು ಇಷ್ಟಪಡುತ್ತೇನೆ ಮತ್ತು ಅದನ್ನು ಮುಂದುವರಿಸುತ್ತೇನೆ’ ಎಂದು ವಿಜೇತಾ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಜತೆಗೆ ಸಂದೇಶವೊಂದನ್ನು ಲಗತ್ತಿಸಿದ್ದಾರೆ.

ವಿಜೇತಾ ಸಂದೇಶದಲ್ಲೇನಿದೆ?

‘ರಾಜಕೀಯದಲ್ಲಿ ಸಿದ್ಧಾಂತ ಮತ್ತು ವಿಶ್ಲೇಷಣೆ ಅಥವಾ ಅವಲೋಕನಗಳು ಇರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಒಂದೇ ಎಂದು ಭಾವಿಸಿ ಗೊಂದಲಕ್ಕೆ ಒಳಗಾಗುತ್ತೇವೆ. ರಾಜಕೀಯದ ಕಲಿಕೆ ಬಗ್ಗೆ ಆಸಕ್ತಿಯುಳ್ಳವಳಾಗಿ ಇದು (ಜೆಡಿಎಸ್‌ ಕುರಿತ ಹೇಳಿಕೆ) ನನ್ನ ರಾಜಕೀಯ ಅವಲೋಕನವೇ ಹೊರತು ಸೈದ್ಧಾಂತಿಕ ಅನುಮೋದನೆಯಲ್ಲ. ನನ್ನ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ನನ್ನ ಕುಟುಂಬದ ಸದಸ್ಯರ ಕಲ್ಪನೆಯೊಟ್ಟಿಗೆ ತಳಕು ಹಾಕುವುದು ಅನ್ಯಾಯವಾಗಿದೆ.

ಸುಮಾರು 35 ವರ್ಷಗಳಿಂದ ನನ್ನ ತಂದೆಯವರು ಲಕ್ಷಾಂತರ ಕಾರ್ಯಕರ್ತರ ಸಹಕಾರದೊಂದಿಗೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ತಾಯಿ ಹಸಿವು, ಪೌಷ್ಟಿಕತೆ, ಪರಿಸರ ಕ್ಷೇತ್ರಗಳಲ್ಲಿ ಮತ್ತು ಪಕ್ಷಕ್ಕಾಗಿ ಅವಿರತವಾಗಿ ದುಡಿಯುತ್ತಿದ್ದಾರೆ.

ನೀವು ರಾಜಕೀಯ ಪ್ರವೇಶಿಸಲಿದ್ದೀರಾ ಎಂದು ಅನೇಕರು ನನ್ನನ್ನು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿಯ ರಾಜಕೀಯ ಪಯಣವು ಈ ರೀತಿ ಆರಂಭವಾಗಬಾರದು ಎಂದು ನಾನು ಭಾವಿಸುತ್ತೇನೆ. ಅದು ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವಲ್ಲಿಂದ ಶುರುವಾಗಬೇಕು. ಕಾರ್ಯಕರ್ತರ ಬೆಂಬಲ ಮತ್ತು ಅವರಿಂದ ದೊರೆಯುವ ಪಾಠ ನಿಮ್ಮನ್ನು ನಾಯಕನನ್ನಾಗಿ ಮಾಡುತ್ತದೆ. ಯಾರೂ ಶತ್ರುಗಳಲ್ಲ ಹಾಗೂ ಪರಸ್ಪರ ಗೌರವಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಭೂತ ವಿಚಾರ ಎಂದು ಅಪ್ಪ ನನಗೆ ಕಲಿಸಿದ್ದರು. ನನ್ನ ಗೌರವದ ಅಭಿವ್ಯಕ್ತಿಯನ್ನು ಯಾವುದೋ ಪಕ್ಷ ಸೇರುತ್ತೇನೆ ಎಂದು ತಪ್ಪಾಗಿ ಭಾವಿಸಬಾರದು. ನಾನು ಕ್ರಮಿಸಬೇಕಾದ ಹಾದಿ ಬಲು ದೂರವಿದೆ. ನನ್ನ ತಾಯ್ನಾಡಿಗೆ ಸೇವೆ ಸಲ್ಲಿಸುವುದಕ್ಕಾಗಿ ಕಲಿಕೆಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತೇನೆ. ದೇಶ ಮೊದಲು’ ಎಂದು ಸಂದೇಶದಲ್ಲಿ ವಿಜೇತಾ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಜೆಡಿಎಸ್‌ ಕುರಿತು ಟ್ವೀಟ್ ಮಾಡಿದ್ದ ವಿಜೇತಾ, ‘ಕರ್ನಾಟಕ ರಾಜಕೀಯ ನಿಜಕ್ಕೂ ಏಕೆ ಆಸಕ್ತಿದಾಯಕವಾಗಿದೆ?’ ಎಂದು ಕೇಳಿದ್ದರು. ಜತೆಗೆ, ‘ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿದಿದೆ,’ ಎಂದೂ ಉತ್ತರಿಸಿದ್ದರು. ಈ ಟ್ವೀಟ್‌ಗೆ ಭಾರಿ ಪ್ರತಿಕ್ರಿಯೆ ಸಿಕ್ಕಿದ್ದು, ಹಲವರು ಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು.

ವಿಜೇತಾ ನನ್ನ ಸಹೋದರಿ ಸಮಾನರು. ಅವರಿಗೆ ಧನ್ಯವಾದಗಳು. ಈ ಮಾತು ‌ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದಿದ್ದ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ, ದಿವಂಗತ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮತ್ತು ಅವರ ಪುತ್ರಿ ವಿಜೇತಾ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT