ಮಂಗಳವಾರ, ಜನವರಿ 25, 2022
24 °C

ರೌಡಿ ಯಾರೆಂಬುದು ಜನರಿಗೆ ಗೊತ್ತಿದೆ: ಡಿ.ಕೆ.ಶಿವಕುಮಾರ್‌ಗೆ ವಿಜಯೇಂದ್ರ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ರೌಡಿ ಯಾರೆಂಬುದು ಜನರಿಗೆ ಗೊತ್ತಿದೆ. ಶಾಸಕರ ಕೊಲೆಗೆ ಸಂಚು ಮಾಡಿದವರ ಕೃತ್ಯವನ್ನು ಉಡಾಫೆಯ ಹೇಳಿಕೆ ಮೂಲಕ ಡಿ.ಕೆ.ಶಿವಕುಮಾರ್‌ ಸಮರ್ಥಿಸಿಕೊಂಡದ್ದು ಸರಿಯಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದರು.

‘ಬೆಂಗಳೂರಿನ ಎಲ್ಲ ರೌಡಿಗಳು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಜತೆಗೆ ಇದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಕ್ಕೆ ಮೈಸೂರಿನಲ್ಲಿ ಗುರುವಾರ ಪ್ರತಿಕ್ರಿಯಿಸಿ, ‘ಈ ರೀತಿಯ ಕೆಟ್ಟ ರಾಜಕಾರಣದ ಅವಶ್ಯಕತೆ ನಮ್ಮ ರಾಜ್ಯಕ್ಕೆ ಇದೆಯೇ ಎಂಬುದನ್ನು ಅವರು ಯೋಚನೆ ಮಾಡಿಕೊಳ್ಳಲಿ. ಇದು ಯಾರಿಗೂ ಶೋಭೆ ತರುವುದಲ್ಲ. ಕಾಂಗ್ರೆಸ್‌ನ ಮುಖಂಡರು ಈ ಕೃತ್ಯವನ್ನು ಸಮರ್ಥಿಸಿಕೊಳ್ಳುವರು ಎಂದರೆ ಅವರ ಹಿನ್ನೆಲೆ ಏನೆಂಬುದು ಅರ್ಥವಾಗುತ್ತದೆ’ ಎಂದು ಹರಿಹಾಯ್ದರು.

‘ರಾಜಕೀಯವಾಗಿ ಸೋಲಿಸಲು ಆಗಿಲ್ಲ ಎಂದು ಈ ರೀತಿ ಕೊಲೆ ಸಂಚು ರೂಪಿಸಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಅಕ್ಕಪಕ್ಕದ ರಾಜ್ಯಗಳಲ್ಲಿ ಈ ರೀತಿಯ ರಾಜಕಾರಣ ನೋಡಿದ್ದೇವೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ’ ಎಂದರು.

5–6 ತಿಂಗಳಲ್ಲಿ ಕ್ಷೇತ್ರ ಫೈನಲ್‌: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆಯ ಬಗ್ಗೆ ಹೈಕಮಾಂಡ್‌ ಮತ್ತು ಬಿ.ಎಸ್‌.ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಆ ಬಳಿಕ ನಿರ್ಧರಿಸುತ್ತೇನೆ. ನನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಒಂದು ಕ್ಷೇತ್ರವನ್ನು ಬೇಗನೇ ಅಂತಿಮಗೊಳಿಸಬೇಕು. 5–6 ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವೆ’ ಎಂದರು.

ಇವನ್ನೂ ಓದಿ

ನನ್ನ ಹತ್ಯೆಗೆ ಕಾಂಗ್ರೆಸ್ ನಾಯಕನಿಂದ ಸಂಚು: ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್
ನನ್ನ ಕೊಲೆಯ ಸಂಚಿನ ಸುಳಿವು ಲಭಿಸಿತ್ತು: ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌

 

    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು