ಮಂಗಳವಾರ, ಜನವರಿ 26, 2021
24 °C

ಅಧ್ಯಕ್ಷತೆ ವಹಿಸಲು ಉಪಸಭಾಪತಿಗೆ ಬಿಜೆಪಿ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಇರುವುದರಿಂದ ಅವರು ಪೀಠದ ಮೇಲೆ ಆಸೀನರಾಗುವುದು ಕಾನೂನು ಬಾಹಿರವಾಗಿದ್ದು, ಉಪಸಭಾಪತಿಯವರೇ ಮಂಗಳವಾರ ನಡೆಯುವ ಅಧಿವೇಶನದ ಅಧ್ಯಕ್ಷತೆ ವಹಿಸಬೇಕು ಎಂದು ಬಿಜೆಪಿ ಪತ್ರ ಬರೆದಿದೆ.

‘ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆಗೆ ಅನುವು ಮಾಡಿಕೊಡಬೇಕು. ಅಗತ್ಯವಿದ್ದರೆ ಮತದಾನಕ್ಕೂ ಅವಕಾಶ ಮಾಡಿಕೊಡಬೇಕು’ ಎಂದು ಉಪಸಭಾಪತಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

‘ನ.25 ರಂದು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್‌ ನೀಡಿದ್ದೆವು. ನಿಯಮ 165 ಪ್ರಕಾರ ಡಿ.9 ಕ್ಕೆ 14 ದಿನಗಳು ಕಳೆದಿತ್ತು. ಆದರೆ ಸಭಾಪತಿಯವರು ಡಿ.9 ಅಥವಾ 10 ರಂದು ಚರ್ಚೆಗೆ ಅವಕಾಶ ನೀಡಬೇಕಿತ್ತು. ಡಿ.10 ರಂದು ಏಕಾಏಕಿ ಸದನವನ್ನು ಅನಿರ್ದಿಷ್ಟ ಮುಂದೂಡಿದರು’ ಎಂದು ಬಿಜೆಪಿ ಹೇಳಿದೆ.

ಸಭಾಪತಿಯವರಿಗೂ ಪತ್ರ ಬರೆದಿರುವ ಬಿಜೆಪಿ, ‘ಅವಿಶ್ವಾಸದ ನೋಟಿಸ್‌ ನೀಡಿದ್ದರಿಂದ ತಮಗೆ ಸಭಾಪತಿ ಪೀಠದಲ್ಲಿ ಕೂತುಕೊಳ್ಳಲು ಅಧಿಕಾರ ಇಲ್ಲದೇ ಇದ್ದರೂ, ಅವಿಶ್ವಾಸ ನಿರ್ಣಯ ಕ್ರಮಬದ್ಧವಲ್ಲವೆಂದು ಟಿಪ್ಪಣೆ ಮಾಡಿ ತಿರಸ್ಕರಿಸಿ ಕಾರ್ಯದರ್ಶಿ ಮೂಲಕ ತಲುಪಿಸಿರುವುದು ಕಾನೂನು ಬಾಹಿರ’ ಎಂದು ತಿಳಿಸಿದೆ.

‘ಅವಿಶ್ವಾಸ ನೋಟಿಸ್‌ ಕ್ರಮ ಬದ್ಧ ಹೌದೋ ಅಲ್ಲವೊ ಎಂಬುದನ್ನು ತೀರ್ಮಾನಿಸಬೇಕಾಗಿರುವುದು ವಿಧಾನಪರಿಷತ್‌ ಮಾತ್ರ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ನಿಮಗಿಲ್ಲ. ಆದರೂ ನಾಳೆ ನಡೆಯುವ ಅಧಿವೇಶನದಲ್ಲಿ ಉಪಸಭಾಪತಿಯವರಿಗೆ ಅಧ್ಯಕ್ಷತೆ ವಹಿಸಲು ಸೂಚಿಸಬೇಕು ಮತ್ತು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸುಸೂತ್ರವಾಗಿ ನಡೆಸಲು ಅನುವು ಮಾಡಿಕೊಡಬೇಕು. ತಾವು ಅಧ್ಯಕ್ಷತೆ ವಹಿಸುವುದು ಕಾನೂನು ಬಾಹಿರ’ ಎಂದು ಬಿಜೆಪಿ ಹೇಳಿದೆ.

ಈ ಪತ್ರಗಳಿಗೆ ಮುಖ್ಯಸಚೇತಕ ಮಹಾಂತೇಶ ಕವಟಗಿ ಮಠ,  ಸದಸ್ಯರಾದ ಆಯನೂರು ಮಂಜುನಾಥ, ಅರುಣ್‌ ಶಹಾಪುರ, ಪುಟ್ಟಣ್ಣ, ಅ.ದೇವೇಗೌಡ, ತೇಜಸ್ವಿನಿಗೌಡ, ವೈ.ಎ.ನಾರಾಯಣಸ್ವಾಮಿ, ಲಹರ್‌ ಸಿಂಗ್‌ ಸಹಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು