ಬುಧವಾರ, ಜನವರಿ 27, 2021
20 °C

ಪರಿಷತ್ ಗದ್ದಲ: ಸದನ ಸಮಿತಿಗೆ ಬಿಜೆಪಿ ಸದಸ್ಯರ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಪರಿಷತ್‌

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಡಿ.15 ರಂದು ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಭಾಪತಿ  ಪ್ರತಾಪ್‌ಚಂದ್ರ ಶೆಟ್ಟಿ ರಚಿಸಿದ್ದ ಸದನ ಸಮಿತಿಗೆ ಬಿಜೆಪಿ ಸದಸ್ಯರಾದ ಎಸ್‌.ವಿ.ಸಂಕನೂರ ಮತ್ತು ಎಚ್‌.ವಿಶ್ವನಾಥ್‌ ರಾಜೀನಾಮೆ ನೀಡಿದ್ದಾರೆ.

ಜೆಡಿಎಸ್‌ನ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚಿಸಲಾಗಿತ್ತು. ಶುಕ್ರವಾರ ಮೊದಲ ಸಭೆ ನಡೆಯಿತು. ಈ ಸಭೆಯ ಆರಂಭಕ್ಕೂ ಮೊದಲೇ ಬಿಜೆಪಿ ಸದಸ್ಯರು ‘ಸದನ ಸಮಿತಿ ರಚನೆಯ ವೈಖರಿ ಸರಿ ಇಲ್ಲ. ವಿಶ್ವಾಸವೂ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿ ಮರಿತಿಬ್ಬೇಗೌಡ ಅವರಿಗೆ ರಾಜೀನಾಮೆ ಸಲ್ಲಿಸಿದರು. ‘ಅಂದು ಗಲಾಟೆ ನಡೆದಾಗ ಈಗ ಸದನ ಸಮಿತಿ ಅಧ್ಯಕ್ಷರಾಗಿರುವ ಮರಿತಿಬ್ಬೇಗೌಡರೂ ಇದ್ದರು. ಹೀಗಾಗಿ, ನಿಷ್ಪಕ್ಷ ತನಿಖೆ ನಡೆಸಲು ಸಾಧ್ಯವೇ’ ಎಂದು ಸುದ್ದಿಗಾರರ ಜತೆ ಮಾತನಾಡಿ ಎಚ್‌.ವಿಶ್ವನಾಥ್‌ ಪ್ರಶ್ನಿಸಿದರು.

‘ನಿಯಮಾವಳಿ ಪ್ರಕಾರ ಸದನ ಸಮಿತಿ ರಚನೆಯ ತೀರ್ಮಾನವನ್ನು ಸದನದಲ್ಲೇ ತೆಗೆದುಕೊಳ್ಳಬೇಕು. ಪಕ್ಷಗಳ ಅನುಮತಿ ಪಡೆದ ಬಳಿಕ ಸದಸ್ಯರನ್ನು ಸಮಿತಿಗೆ ಸೇರಿಸಬೇಕು. ಆದರೆ, ಸಭಾಪತಿ ಶಿಷ್ಟಾಚಾರ ಪಾಲಿಸಿಲ್ಲ. ಸಮಿತಿ ಸದಸ್ಯರಲ್ಲಿ ಕೆಲವರು ಗಲಾಟೆಯಲ್ಲಿ ಭಾಗಿಯಾದವರೂ ಇದ್ದಾರೆ. ಅಂತಹವರನ್ನು ಇಟ್ಟುಕೊಂಡು ತನಿಖೆ ನಡೆಸಲು ಸಾಧ್ಯವೆ’ ಎಂದು ಅವರು ಪ್ರಶ್ನಿಸಿದರು.

‘ರಾಜೀನಾಮೆ ನೀಡಬೇಡಿ. ಮೊದಲು ಸಭೆಯಲ್ಲಿ ಕುಳಿತುಕೊಂಡು ಮಾತನಾಡಿ. ಏನೇ ಸಮಸ್ಯೆ ಇದ್ದರೂ ಇತ್ಯರ್ಥ ಮಾಡೋಣ’ ಎಂದು ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಅವರು ವಿಶ್ವನಾಥ್ ಮತ್ತು ಸಂಕನೂರ ಅವರಿಗೆ ಮನವಿ ಮಾಡಿದರು. ಇಬ್ಬರೂ ಮನವಿಗೆ ಸ್ಪಂದಿಸಲಿಲ್ಲ. ಅಂತಿಮವಾಗಿ ಕಾಂಗ್ರೆಸ್‌ ಸದಸ್ಯರ ಜತೆ ಮರಿತಿಬ್ಬೇಗೌಡ ಸಭೆ ನಡೆಸಿದರು.

ಸಮಿತಿಗೆ ಮಾನ್ಯತೆ ಇಲ್ಲ: ‘ಸಭಾಪತಿಯವರು ವಿಧಾನಪರಿಷತ್‌ನ ನಿಯಮಾವಳಿಗಳನ್ನು ಗಾಳಿಗೆ ತೂರಿ ಸದನ ಸಮಿತಿ ರಚಿಸಿದ್ದಾರೆ. ಸದನದಲ್ಲಿ ತೀರ್ಮಾನ ತೆಗೆದುಕೊಳ್ಳದೇ ಸದನ ಸಮಿತಿ ರಚಿಸಿದ್ದಾರೆ. ಇದಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಜೆಡಿಎಸ್‌ಗಿಂತ ಕಾಂಗ್ರೆಸ್‌ ಸದಸ್ಯರೆಂಬಂತೆ ಸದನದಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಂದ ನ್ಯಾಯ ಸಿಗಲು ಸಾಧ್ಯವೇ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು