ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೌಕರಿ ಕೊಡಿಸುವ ಭರವಸೆ: ₹15 ಲಕ್ಷ ಪಡೆದ ಬಿಜೆಪಿ ಶಾಸಕ?

ಪಿಎಸ್‌ಐ ನೌಕರಿ ಕೊಡಿಸುವ ಭರವಸೆ
Last Updated 5 ಸೆಪ್ಟೆಂಬರ್ 2022, 22:58 IST
ಅಕ್ಷರ ಗಾತ್ರ

ಕೊಪ್ಪಳ: ‘ಪಿಎಸ್ಐ‌ ನೌಕರಿ ಕೊಡಿಸುವುದಾಗಿ ಹೇಳಿ ನಿವೃತ್ತ ಕಾನ್‌ಸ್ಟೆಬಲ್‌ ಒಬ್ಬರಿಂದ ₹ 15 ಲಕ್ಷ ಪಡೆದಿದ್ದಾರೆ’ ಎಂದು ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸಗೂರು ವಿರುದ್ಧ ಆರೋಪ ಕೇಳಿಬಂದಿದೆ.

ಕಾನ್‌ಸ್ಟೆಬಲ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಕುಷ್ಟಗಿ ತಾಲ್ಲೂಕಿನ ಬೇಗೂರು ಗ್ರಾಮದಪರಸಪ್ಪ ಮತ್ತು ದಢೇಸಗೂರು ನಡುವಿನ ಸಂಭಾಷಣೆಯು ಸೋಮವಾರ ವೈರಲ್‌ ಆಗಿದೆ. ಆಡಿಯೊ ವೈರಲ್‌ ಆಗುತ್ತಿದ್ದಂತೆ ಪರಸಪ್ಪ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ.

ಶಾಸಕರಿಗೆ ಪೋನ್ ಮಾಡಿ ರುವಪರಸಪ್ಪ ‘ನನ್ನ ಮಗನ ಪಿಎಸ್ಐ‌ ನೇಮಕಾತಿಗೆ ಕೊಟ್ಟಿದ್ದ ₹15 ಲಕ್ಷ ಹಣ ವಾಪಸ್ ಕೊಡಿ. ಕೈ ಮುಗಿತೀನಿ ಸರ್‌. ಹಣ ಕೊಟ್ಟು ಒಂದೂವರೆ ವರ್ಷವಾಯಿತು. ಬಹಳ ಕಷ್ಟದಲ್ಲಿದ್ದೇನೆ’ ಎಂದಿದ್ದಾರೆ.

ಇದಕ್ಕೆ ದಢೇಸಗೂರು, ‘ಹೌದು, ನೀನು ದುಡ್ಡು ‌ಕೊಟ್ಟಿದ್ದೀಯಾ, ವಾಪಸ್ ಕೊಡ್ತೀನಿ ಅಂತ ಹೇಳಿದ್ದೇನಲ್ಲ. ಯಾವ ಕೆಲಸಕ್ಕೆ ‌ಹಣ‌ ಕೊಟ್ಟಿದ್ದೀಯಾ? ಅದನ್ನು ‌ಹೇಗೆ ಕೇಳಬೇಕು ಎನ್ನುವ ಸೌಜನ್ಯವಿಲ್ಲವಾ?’ ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೆಸರೂ ಉಲ್ಲೇಖವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೊಡ್ಡನ ಗೌಡ, ‘ಪರಸಪ್ಪ ಯಾವ ಕೆಲಸಕ್ಕೆ ಹಣ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಹಣ ಹಿಂತಿರುಗಿಸಲು ಶಾಸಕರಿಗೆ ಹೇಳಿದ್ದೆ’ ಎಂದಿದ್ದಾರೆ.

ಬಂಧನಕ್ಕೆ ಆಗ್ರಹ: ‘ಶಾಸಕರನ್ನು ಬಂಧಿಸಬೇಕು. ನೌಕರಿ ಭರವಸೆ ನೀಡಿ ಎಷ್ಟು ಜನರಿಂದ ಹಣ ಪಡೆದಿದ್ದಾರೊ ಆ ಬಗ್ಗೆ ತನಿಖೆ ನಡೆಸಬೇಕು. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿಸಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಒತ್ತಾಯಿಸಿದ್ದಾರೆ.

ಧ್ವನಿ‌ ನನ್ನದೇ: ದಢೇಸಗೂರು

ಕೊಪ್ಪಳ: ‘ವೈರಲ್ ಆದ ಆಡಿಯೊದಲ್ಲಿ ಇರುವ ಧ್ವನಿ ನನ್ನದೇ. ಆದರೆ, ನಾನು ಹಣ ಪಡೆದಿಲ್ಲ. ಬೇರೆ ಇಬ್ಬರ ‌ನಡುವೆ ಜಗಳವಾಗಿತ್ತು. ಅದನ್ನು ಪರಿಹರಿಸಲು ಕೋರಿ ನನ್ನ ಬಳಿ‌ ಅವರು ಬಂದಿದ್ದರು. ಅವರಿಬ್ಬರನ್ನೂ ಒಟ್ಟುಗೂಡಿಸಿ‌ ರಾಜಿ ಪಂಚಾಯಿತಿ ನಡೆಸಿದ್ದೆ. ಅದೇ ಸಂಭಾಷಣೆ ಈಗ ವೈರಲ್ ಮಾಡಿದ್ದಾರೆ‘ ಎಂದು ಬಸವರಾಜ ದಢೇಸಗೂರು ತಿಳಿಸಿದರು.

‘ಚುನಾವಣಾ ವರ್ಷವಿದ್ದು, ವಿರೋಧಿಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಹೀಗಾಗಿ ಆಡಿಯೊ, ವಿಡಿಯೊ ವೈರಲ್‌ ಮಾಡುತ್ತಲೇ ಇರುತ್ತಾರೆ’ ಎಂದರು.

ಸಂಭಾಷಣೆ ಹೀಗಿದೆ...

ಪರಸಪ್ಪ: ಕೈ ಮುಗಿತೀನಿ ನನ್ನ ಹಣ ಕೊಡಿ ಸರ್.

ಶಾಸಕ: ನಾನು ಬೆಂಗಳೂರಿಗೆ ಬಂದಿದ್ದೇನೆ. ಜಿಲ್ಲಾಧ್ಯಕ್ಷ

ದೊಡ್ಡನಗೌಡ ಹತ್ತಿರ ಮಾತನಾಡಿದ್ದೇನೆ.

ಪರಸಪ್ಪ: ಹೌದು ಸರ್, ದೊಡ್ಡನಗೌಡರು ನಮಗೆ ಬೇಕಾದವರು.

ಶಾಸಕ: ನನಗೆ ಯಾರಿಂದಲೂ‌ ಹೇಳಿಸುವುದು, ಕೇಳಿಸುವುದು ಬೇಕಾಗಿಲ್ಲ. ದುಡ್ಡು ವಾಪಸ್ ಕೊಡುತ್ತೇನೆ.

ಪರಸಪ್ಪ: ಹಣ ಕೊಟ್ಟು‌ ಒಂದೂವರೆ ವರ್ಷ ಆಯಿತು ಸರ್.

ಶಾಸಕ: ಹಣ ಪಡೆದಿದ್ದೇನೆ. ಸರ್ಕಾರಕ್ಕೆ ಕೊಟ್ಟ ಹಣಅದು.‌ ಬೆಂಗಳೂರಿನಿಂದ ವಾಪಸ್ ‌ಬಂದ ಮೇಲೆ ಕೊಡು ತ್ತೇನೆ.

ಪರಸಪ್ಪ: ಬೆಂಗಳೂರಿನಿಂದ ವಾಪಸ್ ಬಂದ ಮೇಲೆ ನಿಮ್ಮ ಬಳಿ ಬರುವೆ. ಹಣದ ತೊಂದರೆ ಬಹಳಷ್ಟಿದೆ.

ಶಾಸಕ: ಬಾರಪ್ಪ, ಅನುಮಾನ ಬೇಡ. ಖಂಡಿತಾ ಕೊಡು ತ್ತೇನೆ. ನನಗೆ ಎಷ್ಟು ಕೋಟಿ ಕೊಟ್ಟಿದ್ದೀಯಪ್ಪ.

ಪರಸಪ್ಪ: ಸರ್, ₹15 ಲಕ್ಷ ಕೊಟ್ಟಿದ್ದೇನೆ.

ಶಾಸಕ: ನಿನಗೆ ಮಾನ ಮರ್ಯಾದೆ ಏನಾದರೂ ಇದೆಯಾ? ಯಾರ ಮುಂದೆ ಏನು ಮಾತನಾಡಬೇಕು ಎನ್ನುವ ಸೌಜನ್ಯ ಇದೆಯೊ ಇಲ್ಲವೊ?

ಪರಸಪ್ಪ: ಎಲ್ಲಾ ಹೇಳಿದ್ದೇವಲ್ಲ ಸರ್.

ಶಾಸಕ: ಹಣ ಕೊಡು ಎಂದು‌ ನಾನೇನು ನಿನ್ನ ಮನೆಗೆ ಬಂದಿದ್ದೆನಾ? ನಿನ್ನ ಉದ್ದೇಶವೇನು? ಯಾವ ಕೆಲಸಕ್ಕೆ ‌ಹಣ‌ ಕೊಟ್ಟಿದ್ದೀಯಾ? ಅದನ್ನು ‌ಹೇಗೆ ಕೇಳಬೇಕು ಎನ್ನುವ ಸೌಜನ್ಯವಿಲ್ಲವಾ? ಹುಚ್ಚನ ರೀತಿ ಮಾತ ನಾಡುತ್ತಿದ್ದೀಯಾ? ಎಲ್ಲರೂ‌ ನನಗೆ ಪೋನ್ ‌ಕರೆ ಮಾಡುತ್ತಿದ್ದಾರೆ. ಸಾಲ ಕೊಡು ಎಂದು ಕೇಳಲು‌ ನಿನ್ನ ಮನೆಗೆ ಬಂದಿದ್ದೇನಾ? ನಾಲ್ಕು ದಿನ ಹೆಚ್ಚು ಕಡಿಮೆ ಆಗುತ್ತದೆ. ಹಣ ನಾನೇ ಹೇಳಿ ಕೊಡಿಸುತ್ತೇನೆ. ನಿನ್ನ ಅವಸರಕ್ಕೆ, ನಿನ್ನ ಕೆಲಸಕ್ಕೆ ಹಣ ಕೊಟ್ಟಿದ್ದೀಯಾ. ಮಾತು ಲೂಸ್ ಆಗಿದ್ರೆ ಸರಿ‌ ಇರಲ್ಲ. ನಿನ್ನ ಹಣದಿಂದ‌‌ ನನಗೆ ಏನೂ ಆಗಬೇಕಾಗಿಲ್ಲ‌. ಗೌರವದಿಂದ ‌ಮಾತಾಡಬೇಕು. ಹಣ ಕೊಟ್ಟಿದ್ದಕ್ಕೆ ದಾಖಲೆಗಳಿಲ್ಲ‌.

ಪರಸಪ್ಪ: ನಾನು ಬಡವ ಇದ್ದೇನೆ ಸರ್.

ಶಾಸಕ: ನೀನು ಬಡವ, ಶ್ರೀಮಂತ ‌ಏನೇ ಆಗಿರು.‌ ಮಾತು ಸರಿಯಾಗಿ ಇರಬೇಕು.

ಪರಸಪ್ಪ: ಸರ್, ಹಣ ಕೊಡುವುದಾದರೆ ಕೊಡಿ. ಇಲ್ಲವಾ ದರೆ ಇಲ್ಲ ಎಂದು ಹೇಳಿಬಿಡಿ.

ಶಾಸಕ: ಕೊಡ್ತೀನಿ, ಇವೆಲ್ಲ ಹೇಳಬೇಡ.‌ ನಿನ್ನ ಬಳಿ ಸಾಲ ತಂದಿಲ್ಲ. ಇಷ್ಟೇ ದಿನದಲ್ಲಿ ಕೊಡ್ತೇನೆ ಎಂದು ಹೇಳಿದ್ನಾ?

ಪರಸಪ್ಪ: ಕೊಡುವುದಿಲ್ಲ ಎಂದು ಹೇಳಿ ಬಿಡಿ ಸರ್.

ಶಾಸಕ: ಕೊಡುವುದಿಲ್ಲ ಎಂದು ನಾನು ಯಾಕೆ ಹೇಳಲಿ. ಅಂಥ ಚಿಲ್ಲರೆ ಕೆಲಸ ಮಾಡುವುದಿಲ್ಲ.

ವಿರೋಧ ಪಕ್ಷದವರು ಆಡಿಯೊ, ವಿಡಿಯೊ ಮಾಡಿಸಿ ಷಡ್ಯಂತ್ರ ಮಾಡುತ್ತಿದ್ದಾರೆ. ಹಾಗೆಂದು ಶಾಸಕರ ವಿರುದ್ಧದ ಆರೋಪ ತಳ್ಳಿಹಾಕುವುದಿಲ್ಲ. ಪ್ರಕರಣದ ಬಗ್ಗೆ ತನಿಖೆಯಾಗಲಿ.</p>

- ಆನಂದ್‌ ಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವ

ಹಣವನ್ನು ಸರ್ಕಾರಕ್ಕೆ ಕೊಟ್ಟಿದ್ದೇನೆ ಎಂದು ದಢೇಸಗೂರು ಹೇಳುತ್ತಾರೆ. ಸರ್ಕಾರವೆಂದರೆ ಯಾರ ಕೈಯಲ್ಲಿ ಕೊಟ್ಟಿದ್ದಾರೆ. ಇದರ ಕುರಿತು ಸಂಪೂರ್ಣ ತನಿಖೆ ನಡೆಯಬೇಕು.

- ಎಂ.ಬಿ.ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT