ಭಾನುವಾರ, ಮಾರ್ಚ್ 7, 2021
32 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಆರೋಪ

ಕಾಂಗ್ರೆಸ್‌ ಮತ್ತೊಂದು ಹೆಸರೇ ಭ್ರಷ್ಟಾಚಾರ: ನಳಿನ್ ಕುಮಾರ್‌ ಕಟೀಲ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಾಂಗ್ರೆಸ್‌ನ ಮತ್ತೊಂದು ಹೆಸರೇ ಭ್ರಷ್ಟಾಚಾರ. ಕಾಂಗ್ರೆಸ್‌ ಮುಕ್ತ ಭಾರತವೆಂದರೆ ಅದು ಭ್ರಷ್ಟಾಚಾರ ಮುಕ್ತ ದೇಶ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಆರೋಪಿಸಿದರು.

ಇಲ್ಲಿನ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯಕಾರಿಣಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಲಾಲ್‌ ಬಹದ್ದೂರು ಶಾಸ್ತ್ರಿ ಹೊರತುಪಡಿಸಿ ಕಾಂಗ್ರೆಸ್‌ನ ಬಹುತೇಕರು ಭ್ರಷ್ಟಾಚಾರದ ಕೊಳೆಯನ್ನು ಅಂಟಿಸಿಕೊಂಡಿದ್ದಾರೆ. ಜವಾಹರಲಾಲ್‌ ನೆಹರೂ ಅವರಿಂದ ಮನಮೋಹನ್‌ ಸಿಂಗ್‌ ವರೆಗೆ ಕಾಂಗ್ರೆಸ್‌ನ ಎಲ್ಲ ಪ್ರಧಾನಿಗಳು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಘಟಕದ ಅಧ್ಯಕ್ಷರೇ ಜಾಮೀನು ಮೇಲೆ ಹೊರಗಿದ್ದಾರೆ’ ಎಂದು ಕುಟುಕಿದರು.

‘2004ರಿಂದ 2014ರವರೆಗೆ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಾಲು ಸಾಲು ಹಗರಣಗಳು ನಡೆದವು. ಕೋಂಟ್ಯಂತರ ಹಣವನ್ನು ಲೂಟಿ ಮಾಡಲಾಯಿತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಒಂದೇ ಒಂದು ಹಗರಣ ನಡೆದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ಕೀರ್ತಿ ಮೋದಿ ಹಾಗೂ ವಾಜಪೇಯಿ ಅವರಿಗೆ ಸಲ್ಲಬೇಕು’ ಎಂದು ಹೇಳಿದರು.

‘ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಾಗೂ ಗಾಂಧೀಜಿ ಅವರು ಪಕ್ಷದಲ್ಲಿದ್ದ ಪುಣ್ಯ ಕಾಂಗ್ರೆಸ್‌ಗಿತ್ತು. ಈ ಎರಡು ಪುಣ್ಯಗಳು ಹಲವು ವರ್ಷಗಳವರೆಗೆ ಕಾಂಗ್ರೆಸ್‌ಗೆ ಮತ ತಂದುಕೊಟ್ಟವು. 1990ರಲ್ಲಿ ಕಾಂಗ್ರೆಸ್‌ 1,900 ಶಾಸಕರನ್ನು ಹೊಂದಿದ್ದರೆ, ಬಿಜೆಪಿಗೆ ಮೂರು ಶಾಸಕರಿದ್ದು. ಕಾಲ ಸಂಪೂರ್ಣ ಬದಲಗಿದ್ದು, ಬಿಜೆಪಿ 1,900 ಶಾಸಕರನ್ನು ಹೊಂದಿದೆ. ನಕಲಿ ಗಾಂಧಿ ಕುಟುಂಬದ ರಾಜಕಾರಣದಿಂದ ಕಾಂಗ್ರೆಸ್‌ ವಿರೋಧ ಪಕ್ಷವಾಗಲು ಸಾಧ್ಯವಾಗದ ಹೀನಾಯ ಸ್ಥಿತಿ ತಲುಪಿದೆ’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್ ವಂಶಪಾರಂಪರ್ಯ ನಾಯಕತ್ವಕ್ಕೆ ಜೋತು ಬಿದ್ದಿತು. ಜಾತಿ ರಾಜಕಾರಣಕ್ಕೆ ಕುಮ್ಮಕ್ಕು ನೀಡಿತು. ಮಿತಿ ಮೀರಿದ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿತು. ವೋಟಿಗಾಗಿ ಧರ್ಮಗಳ ತುಷ್ಟೀಕರಣ ಮಾಡಿತು. ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ಒಡೆದಾಳುವ ನೀತಿ ಅನುಸರಿಸಿತು. ವಿಚಾರಧಾರೆಯನ್ನು ಮರೆತು, ಮಹಾತ್ಮ ಗಾಂಧೀಜಿ ಅವರಿಗೆ ದ್ರೋಹ ಬಗೆಯಿತು’ ಎಂದು ಕಿಡಿಕಾರಿದರು.

‘ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯದ ಫಲವಾಗಿ ದೇಶದಲ್ಲಿ ಭಯೋತ್ಪಾದನೆ ಹುಟ್ಟಿಕೊಂಡಿತು. ಅತಿಯಾದ ಜಾತಿ ಪ್ರೇಮದಿಂದ ಸಮಾಜದ ಶಾಂತಿಗೆ ಭಂಗ ಉಂಟಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವೀರಶೈವ ಮತ್ತು ಲಿಂಗಾಯತ ಸಮುದಾಯವನ್ನು ಇಬ್ಬಾಗ ಮಾಡಲು ಪ್ರಯತ್ನಿಸಿ ವಿಫಲರಾದರು. ಅಧಿಕಾರ ಸಿಕ್ಕಾಗ ಮೈಮರತರೆ ಏನಾಗುತ್ತದೆ ಎಂಬುದಕ್ಕೆ ಕಾಂಗ್ರೆಸ್ ಉತ್ತಮ ನಿದರ್ಶನ’ ಎಂದು ಹೇಳಿದರು.

‘ಬಿಜೆಪಿ ಗುರಿ ಅಧಿಕಾರವಲ್ಲ’

ದೇಶದ ವೈಭವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದು ಬಿಜೆಪಿ ಗುರಿಯೇ ಹೊರತು ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವುದಲ್ಲ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

‘ಶ್ಯಾಮ್‌ ಪ್ರಸಾದ್ ಮುಖರ್ಜಿ, ದೀನ ದಯಾಳ್‌ ಉಪಾಧ್ಯಾಯ ಅವರು ಅಧಿಕಾರಕ್ಕೆ ಹಂಬಲಿಸಲಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿ ಕಾರ್ಯಕರ್ತರ ಹೃದಯದಲ್ಲಿ ನೆಲೆಸಿದರು. ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ನಾಲ್ಕು ದಶಕ ಪಕ್ಷಕ್ಕೆ ಶ್ರಮಿಸಿ ಅಧಿಕಾರಕ್ಕೆ ಏರಿದ್ದಾರೆ. ಅಧಿಕಾರದ ಆಸೆಗಾಗಿ ರಾಜಕೀಯಕ್ಕೆ ಬರಬೇಡಿ’ ಎಂದರು.

ಸರ್ಕಾರ ಮಂಡಿಯೂರಿದೆ: ಸಂಸದ

ಮೂರನೇ ಎರಡರಷ್ಟು ಬಹುಮತ ಹೊಂದಿದ ಕೇಂದ್ರ ಸರ್ಕಾರ ರೈತರ ಹೋರಾಟದ ಎದುರು ಮಂಡಿಯೂರಿದೆ. ಸರ್ಕಾರ ಸಹನೆಯಿಂದಲೇ ನಡೆದುಕೊಳ್ಳುತ್ತಿದೆ. ಆದರೆ, ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದ ದಾಂದಲೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

‘ಬಿಜೆಪಿ ಬೆಳವಣಿಗೆ, ಕೇಂದ್ರ ಸರ್ಕಾರದ ಆಡಳಿತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಸಹಿಸಲು ಸಾಧ್ಯವಿಲ್ಲದ ಶಕ್ತಿಗಳು ಗಲಭೆಗೆ ಕುಮ್ಮಕ್ಕು ನೀಡುತ್ತಿವೆ. ತ್ರಿವರ್ಣ ಧ್ವಜಕ್ಕೆ ಮಾಡಿದ ಅಪಮಾನದ ಬಗ್ಗೆ ಯುವ ಶಕ್ತಿ ಆಲೋಚಿಸುವ ಅಗತ್ಯವಿದೆ. ಇಂತಹ ಕೃತ್ಯಗಳನ್ನು ನೋಡಿ ಬಿಜೆಪಿ ಸುಮ್ಮನೆ ಕೂರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಭದ್ರೆ, ರೈಲು ಮಾರ್ಗಕ್ಕೆ ಕೋರಿಕೆ

ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಮುಂದಿನ ಮೂರು ವರ್ಷದಲ್ಲಿ ಜಿಲ್ಲೆಯ ಜನರಿಗೆ ನೀರು ಒದಗಿಸುವ ಉದ್ದೇಶದಿಂದ ಇನ್ನಷ್ಟು ತ್ವರಿತವಾಗಿ ಕಾಮಗಾರಿ ನಡೆಸುವ ಅಗತ್ಯವಿದೆ. ಇದಕ್ಕೆ ಬೇಕಾಗುವ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವ ಅಗತ್ಯವಿದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮನವಿ ಮಾಡಿದರು.

‘ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾರ್ಯವೂ ಆರಂಭವಾಗಬೇಕಿದೆ. ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಂ.ಚಂದ್ರಪ್ಪ, ಕೆ.ಪೂರ್ಣಿಮಾ, ವಿಧಾನಪರಿಷತ್ ಸದಸ್ಯ ಚಿಂದಾನಂದಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್‌, ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಮಹೇಶ್‌ ತೆಂಗಿನಕಾಯಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಇದ್ದರು.

***

ನಮಗೆ ಸಿಕ್ಕಿರುವುದು ಅಧಿಕಾರವಲ್ಲ, ಸಾಮಾಜಿಕ ಹೊಣೆಗಾರಿಕೆ. ನೊಂದವರ ಧ್ವನಿಯಾಗಿ, ಬಡವರ ಕಣ್ಣೀರು ಒರೆಸುವ ಕೆಲಸ ಮಾಡೋಣ. ಸರ್ಕಾರ ಮತ್ತು ಜನರ ಕೊಂಡಿಯಾಗಿ ಕಾರ್ಯನಿರ್ವಹಿಸೋಣ.

ಡಾ.ಸಂದೀಪ್‌, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು