ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ಭದ್ರತೆ ಹೆಚ್ಚಳ

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಬಳಿಕ ಜನರ ಚಲನವಲನಗಳ ಮೇಲೆ ವಿಶೇಷ ನಿಗಾ
Last Updated 26 ನವೆಂಬರ್ 2022, 18:13 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ಬಳಿಕ ಹಾಗೂ ಹಿಂದೂ ಧರ್ಮದ ದೇವಸ್ಥಾನಗಳನ್ನು ಗುರಿಯಾಗಿಸಿ ಭಯೋತ್ಪಾದನಾ ಕೃತ್ಯ ನಡೆಸುವ ಕುರಿತ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ನಗರದ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರಮುಖ ದೇವಸ್ಥಾನಗಳ ಭದ್ರತೆ ಹೆಚ್ಚಳ ಮಾಡಲಾಗಿದೆ.

ದೇವಸ್ಥಾನಗಳಿಗೆ ಹೆಚ್ಚುವರಿಯಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದದಲ್ಲದೇ, ದೇವಸ್ಥಾನದ ಆಸುಪಾಸಿನಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾಗುವ ದೃಶ್ಯಗಳ ಬಗ್ಗೆಯೂ ವಿಶೇಷ ನಿಗಾ ಇಡಲಾಗುತ್ತಿದೆ. ಸಶಸ್ತ್ರ ಮೀಸಲು ಪಡೆಯ ವಾಹನಗಳೂ ದೇವಸ್ಥಾನದ ಬಳಿ ಬೀಡುಬಿಟ್ಟಿವೆ.

ಕದ್ರಿ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿಯವರು, ಹೆಚ್ಚಿನ ಭದ್ರತೆ ನೀಡುವಂತೆ ಕೋರಿ ಕದ್ರಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರು. ಬಳಿಕ ದೇವಸ್ಥಾನದ ಭದ್ರತೆ ಹೆಚ್ಚಿಸಲಾಗಿದೆ.

‘ಕದ್ರಿ ದೇವಸ್ಥಾನವನ್ನು ಗುರಿಯಾಗಿ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹರಿದಾಡಿತ್ತು. ಹಾಗಾಗಿ ನಾವು ಭದ್ರತೆ ಹೆಚ್ಚಿಸಲು ಮನವಿ ಮಾಡಿದ್ದೇವೆ. ಪೊಲೀಸರು ದೇವಸ್ಥಾನಕ್ಕೆ ಆಗಾಗ ಭೇಟಿ ನೀಡಿ ನಿಗಾ ಇಡುತ್ತಿದ್ದಾರೆ’ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ ತಿಳಿಸಿದರು.

ಮಂಗಳಾದೇವಿ ದೇವಸ್ಥಾನ ಹಾಗೂ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದವರು ವಿಶೇಷ ಭದ್ರತೆಯನ್ನು ಕೋರಿಲ್ಲ. ಆದರೆ, ಪೊಲೀಸರೇ ಈ ದೇವಸ್ಥಾನಕ್ಕೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

‘ನಮ್ಮಲ್ಲಿಬ್ಯಾಗ್‌ಗಳನ್ನು ದೇವಸ್ಥಾನದ ಒಳಗೆ ಕೊಂಡೊಯ್ಯುವುದಕ್ಕೆ ಅವಕಾಶ ನೀಡುತ್ತಿಲ್ಲ. ‌ಈ ಪರಿಪಾಠ ಹಿಂದಿನಿಂದಲೂ ಇತ್ತು. ದೇವಸ್ಥಾನದಲ್ಲಿ ಜಾತ್ರೆ ಸಂದರ್ಭದಲ್ಲಿ ಲೋಹಶೋಧಕ ಬಳಸಿ ಭಕ್ತರನ್ನು ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಎರಡು ದಿನಗಳಿಂದ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಈ ಬಗ್ಗೆ ನಾವೇನೂ ಕೋರಿಕೆ ಸಲ್ಲಿಸಿರಲಿಲ್ಲ’ ಎಂದು ದೇವಸ್ಥಾನದ ಸಿಬ್ಬಂದಿ ವಿಜಯಾನಂದ ’ಪ್ರಜಾವಾಣಿ‘ಗೆ ತಿಳಿಸಿದರು.

‘ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಪೊಲೀಸರು ಹೆಚ್ಚಿನ ಭದ್ರತೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ದೇವಸ್ಥಾನದಲ್ಲಿ ನಮ್ಮ ಭದ್ರತಾ ಸಿಬ್ಬಂದಿಯೂ ಕಾರ್ಯನಿರ್ವಹಿಸುತ್ತಿರುತ್ತಾರೆ. ಇದು ಲೋಪರಹಿತ ವ್ಯವಸ್ಥೆ ಎಂದು ಹೇಳಲಾಗದು. ಯಾವುದಕ್ಕೂ ಎಚ್ಚರದಿಂದ ಇರುವುದು ಒಳ್ಳೆಯದು’ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಖಜಾಂಚಿ ಪದ್ಮರಾಜ್‌ ತಿಳಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾಗಳಿಗೂ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಈ ದೇವಸ್ಥಾನಗಳ ಭದ್ರತೆಗೂ ವಿಶೇಷ ನಿಗಾ ವಹಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ ಇದೇ 29ರಂದು ನಡೆಯಲಿದೆ.

‘ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಲೋಹಶೋಧಕ ಯಂತ್ರಗಳು, ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಮೊದಲೇ ಅಳವಡಿಸಲಾಗಿತ್ತು. ಪೊಲೀಸರ ನಿರ್ದೇಶನದ ಮೇರೆಗೆ ಭದ್ರತಾ ವ್ಯವಸ್ಥೆಯನ್ನು ಮೇಲ್ದರ್ಗೇರಿಸಿದ್ದೇವೆ’ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ, ‘ಕುಕ್ಕರ್‌ ಬಾಂಬ್‌ ಸ್ಫೋಟದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾಗುವ ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಆಗಾಗ ದೇವಸ್ಥಾನಗಳಿಗೆ ದಿಢೀರ್‌ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಜಿಲ್ಲೆಯ ಗಡಿಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ’ ಎಂದು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಮಂಗಳೂರು ನಗರದಲ್ಲಿ ಜನ ಜಂಗುಳಿ ಸೇರುವ ಕಡೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT