ಶನಿವಾರ, ಮೇ 21, 2022
19 °C

ಸಂಡೂರು ತಹಶೀಲ್ದಾರ್‌ ರಶ್ಮಿ ವರ್ಗಾವಣೆ: ಭೂಕಬಳಿಕೆ ತಡೆದಿದ್ದಕ್ಕೆ ಶಿಕ್ಷೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಮಾಜಿ ಸಚಿವ ಸಂತೋಷ್‌ ಲಾಡ್‌ ಮತ್ತು ಅವರ ಕುಟುಂಬದ ಸದಸ್ಯರು ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ತೋರಣಗಲ್ಲು ಹೋಬಳಿ ಮಾಳಾಪುರ ಗ್ರಾಮದ ಸರ್ವೆ ನಂಬರ್‌ 123ರಲ್ಲಿ ಹೊಂದಿದ್ದಾರೆನ್ನಲಾದ 47.63 ಎಕರೆ ಸರ್ಕಾರಿ ಭೂಮಿ ಮಂಜೂರಾತಿ ರದ್ದುಪಡಿಸುವಂತೆ ಶಿಫಾರಸು ಮಾಡಿದ್ದೇ ಸಂಡೂರು ತಹಶೀಲ್ದಾರ್‌ ಎಚ್‌.ಜೆ. ರಶ್ಮಿ ಅವರ ತಲೆದಂಡಕ್ಕೆ ಕಾರಣ’ ಎಂಬ ಆರೋಪ ಕೇಳಿ ಬರುತ್ತಿದೆ.

ರಶ್ಮಿ, 2021ರ ಆಗಸ್ಟ್‌ 2ರಂದು ಬಳ್ಳಾರಿ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿ, ಈ ಜಮೀನು ಮಂಜೂರಾತಿ ರದ್ದುಪಡಿಸುವಂತೆ ಶಿಫಾರಸು ಮಾಡಿದ್ದರು. ತಹಶೀಲ್ದಾರ್‌ ಮೇಲೆ ಕಾಂಗ್ರೆಸ್‌ ಶಾಸಕರು ಹಗೆ ಸಾಧಿಸುವುದಕ್ಕೆ ಇದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಎ.ಸಿ ಅವರಿಗೆ ರಶ್ಮಿ ಸಲ್ಲಿಸಿರುವ ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ವರದಿಯಲ್ಲಿ ಏನಿದೆ?: ಸರ್ಕಾರದ ದಾಖಲೆಗಳಲ್ಲಿ ಮಾಳಾಪುರ ಸರ್ವೆ ನಂಬರ್‌ 123ರ 47.63 ಎಕರೆ ಜಮೀನು ಸರ್ಕಾರದ್ದು ಎಂದು ನಮೂದಾಗಿದೆ. 1968–69ನೇ ಸಾಲಿನ ಕೈಬರಹದ ಪಹಣಿ ಕಾಲಂ ಸಂಖ್ಯೆ 9ರಲ್ಲಿ ‘ಎಡಬ್ಲ್ಯು’(ಬಂಜರು ಭೂಮಿ) ಎಂದು ನಮೂದಾಗಿದೆ. 1982ರ ವರೆಗಿನ ಕೈಬರಹದ ಪಹಣಿಯಲ್ಲೂ ಇದೇ ಪ್ರಸ್ತಾಪವಿದೆ. 1982–83ನೇ ಸಾಲಿನ ಕೈಬರಹದ ಪಹಣಿ ಪರಿಶೀಲಿಸಿದಾಗ ಸರ್ವೆ ನಂಬರ್‌ 123ರ ಜಮೀನು 47.63 ಎಕರೆ ವಿಸ್ತೀರ್ಣ ‘ಹನುಮನ ಮಗಹೊನ್ನೂರ’ ಎಂಬುವವರ ಹೆಸರಿಗೆ ಖಾತೆ ಆಗಿರುತ್ತದೆ. ಆ ಸಾಲಿನ ಪಹಣಿಯಲ್ಲಿ ಹಕ್ಕು ಬದಲಾವಣೆ ಸಂಖ್ಯೆನಮೂದಾಗಿರುವುದಿಲ್ಲ. ಖಾತೆ ಬದಲಾವಣೆ ಹಾಗೂ ಜಮೀನು ಮಂಜೂರಾದ ದಾಖಲೆ ಲಭ್ಯವಿರುವುದಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ.

1982–83ರಿಂದ 1990–91ರವರೆಗಿನ ಕೈಬರಹದ ಪಹಣಿಯಲ್ಲಿ ‘ಹನುಮನ ಮಗ ಹೊನ್ನೂರ’ ಅವರ ಹೆಸರಿನಲ್ಲಿ ಖಾತೆ ಮುಂದುವರಿದಿದೆ. ಆದರೆ, 1992–93ರಿಂದ 1996–97ರ ಕೈಬರಹದ ಪಹಣಿ ಕಾಲಂ ನಂಬರ್‌9ರಲ್ಲಿ ಅಶೋಕ್‌ ಲಾಡ್‌, ವಿನಾಯಕ ಲಾಡ್‌, ಸಂತೋಷ್‌ ಲಾಡ್‌, ಶಿವಾಜಿರಾವ್‌ ಪೋಳ್‌, ರೂಪಾ ಯು. ಲಾಡ್‌ ಅವರ ಹೆಸರಿಗೆ ಖಾತೆ ಬದಲಾವಣೆ ಆ‌ಗಿರುತ್ತದೆ. ಇವರೆಲ್ಲರೂ ಹೊನ್ನೂರ ಅವರಿಂದ ಜಮೀನನ್ನು ಕ್ರಯಕ್ಕೆ ಪಡೆದಿದ್ದು, ತದನಂತರ ಹಕ್ಕು ಬದಲಾವಣೆ ಆಗಿರುತ್ತದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಆದರೆ, ಜಮೀನಿನ ಸ್ವಾಧೀನಾನುಭವದಲ್ಲಿ ಈರಮ್ಮ, ಹೊನ್ನೂರಸ್ವಾಮಿ, ಮಾರಕ್ಕ, ಬಸಾಪುರ ಹನುಮಂತ, ದೊಡ್ಡ ಮಾರಣ್ಣ, ಚೌಡಮ್ಮ, ಲಕ್ಷ್ಮೀ, ಮಾರಕ್ಕ, ಕಾಶಣ್ಣ, ಮಹೇಶ, ಮಾರಣ್ಣ, ಜಗದೀಶ, ದುರುಗಮ್ಮ, ಓದಣ್ಣ, ಅಲ್ಲಾಭಕ್ಷಿ ಸೇರಿದಂತೆ 16 ರೈತರಿದ್ದಾರೆ. ಆದ್ದರಿಂದ ಸರ್ವೆ ನಂಬರ್‌ 123ರ 47.63 ಎಕರೆ ಜಮೀನು ಕೇವಲ ಒಬ್ಬ ರೈತನ ಹೆಸರಿಗೆ ಮಂಜೂರಾಗಿರುವುದು ಭೂ ಮಂಜೂರಾತಿ ಅಧಿನಿಯಮದ ಉಲ್ಲಂಘನೆ ಆಗಿರುತ್ತದೆ ಎಂದು ತೋರಣಗಲ್ಲು ಕಂದಾಯ ನಿರೀಕ್ಷಕರು ವರದಿ ನೀಡಿದ್ದರು. ಈ ವರದಿ ಆಧರಿಸಿ ಜಮೀನು ಮಂಜೂರಾತಿ ರದ್ದತಿಗೆ ತಹಶೀಲ್ದಾರ್‌ ಶಿಫಾರಸು ಮಾಡಿದ್ದರು.

ಸರ್ಕಾರ ಭೂಮಿ ಕೊಟ್ಟಿದ್ದಲ್ಲ: ಲಾಡ್‌
‘ಮಾಳಾಪುರ ಗ್ರಾಮದಲ್ಲಿರುವ 47 ಎಕರೆ ಸರ್ಕಾರದಿಂದ ಲಾಡ್ ಕುಟುಂಬಕ್ಕೆ ಕೊಟ್ಟಿದ್ದಲ್ಲ. ನಮ್ಮ ಸಹೋದರ ಅಕ್ಷಯ್ ಲಾಡ್ ಅವರು ಗ್ರಾಮದ ಜಮೀನಿನ ಒಡೆಯ ಹೊನ್ನೂರಪ್ಪನವರಿಂದ ಲಾಡ್ ಕುಟುಂಬದ ಸದಸ್ಯರ ಹೆಸರಿನಲ್ಲಿ ಖರೀದಿಸಿದ್ದಾರೆ. ಈ ಕುರಿತು ಸೇಲ್ ಡೀಡ್ ಆಗಿದೆ. ಇದರ ವಿಚಾರ ನ್ಯಾಯಾಲಯದಲ್ಲಿದೆ. ಇದಕ್ಕೂ ಶಾಸಕ ಈ. ತುಕಾರಾಂ ಅವರಿಗೂ ಯಾವುದೇ ಸಂಬಂಧವಿಲ್ಲ. ಶಾಸಕರ ಹಕ್ಕುಚ್ಯುತಿಯಾಗಿರುವುದನ್ನು ಗಮನಿಸಿ, ಸರ್ಕಾರವೇ ತಹಶೀಲ್ದಾರ್ ಅವರನ್ನು ವರ್ಗಾಯಿಸಿದೆ’ ಎಂದು ಮಾಜಿ ಸಚಿವ ಸಂತೋಷ ಲಾಡ್‌ ಸ್ಪಷ್ಟನೆ ನೀಡಿದ್ದಾರೆ.

*
ಲಾಡ್‌ ಅವರ ಹಿತಾಸಕ್ತಿ ರಕ್ಷಣೆ ಮಾಡುವ ಉದ್ದೇಶದಿಂದ ಸರ್ಕಾರದ ಮೇಲೆ ಒತ್ತಡ ಹೇರಿ, ಒಳ್ಳೆಯ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಲಾಗಿದೆ.
–ವಿ.ಎಸ್‌. ಶಿವಶಂಕರ್‌, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು