ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪ್ರಕರಣ: ಪಿಡಿಒಗೆ ಐದು ವರ್ಷ ಜೈಲು

Last Updated 19 ನವೆಂಬರ್ 2022, 19:50 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನ ಮಾಲೀಕರಿಗೆ 11–ನಕ್ಷೆ ಖಾತೆ ಮಾಡಿಕೊಡಲು ₹ 1 ಲಕ್ಷ ಲಂಚ ಪಡೆದಿದ್ದ ಪ್ರಕರಣದಲ್ಲಿ ಆನೇಕಲ್‌ ತಾಲ್ಲೂಕಿನ ಶಾಂತಿಪುರ ಗ್ರಾಮ ಪಂಚಾಯಿತಿಯ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಡಿ. ರಾಮಕೃಷ್ಣಪ್ಪ ಅಪರಾಧಿ ಎಂದು ತೀರ್ಮಾನಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಒಂಬತ್ತನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಐದು ವರ್ಷಗಳ ಜೈಲು ಶಿಕ್ಷೆ ಮತ್ತು ₹ 50,000 ದಂಡ ವಿಧಿಸಿದೆ.

ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂಡಸಂದ್ರ ಗ್ರಾಮದಲ್ಲಿನ ಎರಡು ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿದ್ದ ಪಿ.ವಿ. ನಿರ್ಮಲ್‌ ಎಂಬುವವರು 11–ಇ ನಕ್ಷೆ ನೀಡುವಂತೆ ಕೋರಿ 2014ರಲ್ಲಿ ಗ್ರಾಮ ಅರ್ಜಿ ಸಲ್ಲಿಸಿದ್ದರು. ₹ 1.10 ಲಕ್ಷ ಲಂಚ ನೀಡುವಂತೆ ರಾಮಕೃಷ್ಣಪ್ಪ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವಿಭಾಗಕ್ಕೆ ದೂರು ನೀಡಿದ್ದರು.

ನಿರ್ಮಲ್‌ ಅವರಿಂದ ₹ 1 ಲಕ್ಷ ಲಂಚ ಪಡೆಯುತ್ತಿದ್ದ ರಾಮಕೃಷ್ಣಪ್ಪ ಅವರನ್ನು 2014ರ ಡಿಸೆಂಬರ್‌ 1ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಲೋಕಾಯುಕ್ತದ ಆಗಿನ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ.ವಿ. ಕೃಷ್ಣಪ್ಪ, ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಶ್ರೀಧರ್‌ ಎಸ್‌. ಅವರು ಗುರುವಾರ ಅಂತಿಮ ಆದೇಶ ಪ್ರಕಟಿಸಿದರು.

ಪ್ರಕರಣದಲ್ಲಿ ರಾಮಕೃಷ್ಣಪ್ಪ ದೋಷಿ ಎಂದು ತೀರ್ಮಾನಿಸಿದ ನ್ಯಾಯಾಲಯ, ಅಪರಾಧಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ₹ 50,000 ದಂಡ ವಿಧಿಸಿತು. ದಂಡ ಪಾವತಿಗೆ ತಪ್ಪಿದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆಯೂ ಸೂಚಿಸಿತು.

ಲೋಕಾಯುಕ್ತದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಕೆ. ಮಹಾಲಕ್ಷ್ಮಿ ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಯ ಪರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT