ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಅವರಿಗೆ ಶಾಸಕರ ದುಂಬಾಲು; ಸಂಭಾವ್ಯ ಸಚಿವರಿಗೆ ರಾತ್ರಿ ಸೂಚನೆ ಸಾಧ್ಯತೆ!

Last Updated 3 ಆಗಸ್ಟ್ 2021, 9:46 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾತ್ರಿ ನಗರಕ್ಕೆ ಮರಳಿದ ಬಳಿಕ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಚಿವ ಸ್ಥಾನದ ಪಟ್ಟಿಯಲ್ಲಿರುವ ಶಾಸಕರಿಗೆ ದೂರವಾಣಿ ಮೂಲಕ ಸೂಚನೆ ನೀಡುವ ಸಾಧ್ಯತೆ ಇದೆ.

ಬೊಮ್ಮಾಯಿ ಬೆಂಗಳೂರಿಗೆ ಬರುವ ವೇಳೆಗೆ ಸಂಪುಟ ಸೇರಲಿರುವ ಶಾಸಕರ ಪಟ್ಟಿಯೂ ಸಿದ್ಧವಾಗಿ ತಲುಪಬಹುದು ಅಥವಾ ಅವರೊಂದಿಗೆ ಕಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸೋಮವಾರ ರಾತ್ರಿ ಬಹಳ ಹೊತ್ತಿನವರೆಗೆ ಪಟ್ಟಿ ಅಂತಿಮಗೊಳಿಸುವ ಕಸರತ್ತು ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಸಚಿವಾಕಾಂಕ್ಷಿ ಶಾಸಕರಲ್ಲಿ ಆತಂಕವೂ ಹೆಚ್ಚಾಗಿದೆ. ಸಂಪುಟ ವಿಸ್ತರಣೆ ಪ್ರಕ್ರಿಯೆ ತಡವಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಮೊದಲ ಬಾರಿ ಗೆದ್ದು ಬಂದ ಶಾಸಕರಲ್ಲಿ ಕೆಲವರು ಸಚಿವ ಸ್ಥಾನಕ್ಕಾಗಿ ಪ್ರಬಲ ಲಾಬಿ ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಬಿಎಸ್‌ವೈ ಮನೆಗೆ ಶಾಸಕರ ದಂಡು: ದೆಹಲಿಯಲ್ಲಿ ಸಚಿವರಾಗುವವರ ಪಟ್ಟಿ ಬಹುತೇಕ ಸಿದ್ಧಗೊಂಡಿದ್ದರೂ ಬೆಂಗಳೂರಿನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ಮಂಗಳವಾರವೂ ಮುಂದುವರೆಸಿದರು.

ಯಡಿಯೂರಪ್ಪ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಬೆಳ್ಳಿ ‍ಪ್ರಕಾಶ್‌, ಪರಣ್ಣ ಮುನವಳ್ಳಿ, ರಾಮಪ್ಪ ಲಮಾಣಿ, ನೆಹರೂ ಓಲೇಕಾರ ಮುಂತಾದವರು ಸಚಿವ ಸ್ಥಾನಕ್ಕೆ ಶಿಫಾರಸು ಮಾಡುವಂತೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ. ತಮ್ಮ ಮಾತು ನಡೆಯುವುದಿಲ್ಲ. ವರಿಷ್ಠರ ತೀರ್ಮಾನವೇ ಅಂತಿಮ ಎಂದು ಯಡಿಯೂರಪ್ಪ ಹೇಳಿದರೂ ಶಾಸಕರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಮೂಲಗಳು ಹೇಳಿವೆ.

ನೆಹರು ಓಲೇಕಾರ್‌ ಅವರು ತಮ್ಮ ಬೆಂಬಲಿಗರೊಂದಿಗೆ ಕಾವೇರಿ ನಿವಾಸಕ್ಕೆ ಬಂದಿದ್ದರು. ಓಲೇಕಾರ್‌ ಅವರನ್ನು ಸಚಿವರನ್ನಾಗಿ ಮಾಡಬೇಕು, ಒಂದು ವೇಳೆ ಸಚಿವ ಸ್ಥಾನ ನೀಡದೇ ಇದ್ದರೆ ಮುಖ್ಯಮಂತ್ರಿಯವರಿಗೆ ಹಾವೇರಿ ಜಿಲ್ಲೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದ ಎಚ್ಚರಿಕೆ ನೀಡಿದ್ದೂ ಅಲ್ಲದೆ, ಪ್ರತಿಭಟನೆಯನ್ನೂ ನಡೆಸಿದರು. ಬಳಿಕ ಪೊಲೀಸರು ಅವರನ್ನು ಅಲ್ಲಿಂದ ಕಳುಹಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಆರಗ ಜ್ಞಾನೇಂದ್ರ ಅವರೂ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT