ಶನಿವಾರ, ಜುಲೈ 24, 2021
25 °C
ಪಕ್ಷ ಸಂಘಟನೆಗೆ ಸೂಚಿಸಿದ ಅಮಿತ್ ಶಾ: ಬಿಎಸ್‌ವೈ ಹೇಳಿಕೆ

ಬಿಎಸ್‌ವೈ ನಾಯಕತ್ವ ಬದಲಾವಣೆಗೆ ಬಿಜೆಪಿ ವರಿಷ್ಠರ ಇಂಗಿತ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಾಯಕತ್ವದ ಬದಲಾವಣೆಗೆ ಬಿಜೆಪಿ ವರಿಷ್ಠರು ಇಂಗಿತ ವ್ಯಕ್ತಪಡಿಸಿದ್ದು, ಆ ದಿಕ್ಕಿನತ್ತ ಆರಂಭಿಕ ಹೆಜ್ಜೆಗಳನ್ನು ಇಡಲಾರಂಭಿಸಿರುವ ಸುಳಿವು ಗೋಚರಿಸಿದೆ.

‘ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರದಿಂದ ಬಾಕಿ ಇರುವ ಅನುಮತಿ ಪಡೆಯಲು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ನೆರವು ಕೋರಿ ದೆಹಲಿಗೆ ಬಂದಿದ್ದೇನೆ’ ಎಂದು ಯಡಿಯೂರಪ್ಪ ಹೇಳಿಕೊಂಡಿದ್ದರು. ಆದರೆ, ಸಂಬಂಧಪಟ್ಟ ಇಲಾಖೆ ಸಚಿವರು, ಅಧಿಕಾರಿಗಳನ್ನು ಜತೆಯಲ್ಲಿ ಕರೆತರದೇ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಮತ್ತು ವಿಧಾನಪರಿಷತ್ತಿನ ಸದಸ್ಯ ಲೆಹರ್ ಸಿಂಗ್‌ ಮಾತ್ರ ಅವರ ಜತೆಗೆ ರಾಜಧಾನಿಗೆ ಬಂದಿದ್ದರು.

ದೆಹಲಿ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ.

ಈ ಭೇಟಿಯುದ್ದಕ್ಕೂ ನಡೆದ ವಿದ್ಯಮಾನಗಳು, ಯಡಿಯೂರಪ್ಪನವರ ಮಾತುಗಳನ್ನು ಗಮನಿಸಿದರೆ ನಾಯಕತ್ವ ಬದಲಾವಣೆಯ ಪ್ರಕ್ರಿಯೆಗೆ ಆ ಪಕ್ಷದ ವರಿಷ್ಠರು ಚಾಲನೆ ಕೊಟ್ಟಂತೆ ಕಾಣುತ್ತಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಹರಿದಾಡುತ್ತಿವೆ.

ನಾಯಕರ ಭೇಟಿ ಬಳಿಕ ಯಡಿಯೂರಪ್ಪ ಆಡಿರುವ ಮಾತುಗಳು ಕೂಡ, ‘ಸರ್ಕಾರದ ಮುಂದಿನ ಚಟುವಟಿಕೆ, ಅಭಿವೃದ್ಧಿಯ ಯೋಜನೆಗಳಿಗಿಂತ ಪಕ್ಷ ಸಂಘಟನೆಯತ್ತ ಗಮನ ಹರಿಸಿ’ ಎಂದು ವರಿಷ್ಠರು ಸೂಚಿಸಿದ್ದಾರೆ ಎಂಬ ಅರ್ಥದಲ್ಲೇ ಇವೆ. ಇದು ಬೇರೆಯದೇ ಆದ ಸಂಕೇತಗಳನ್ನು ನೀಡುತ್ತಿದೆ ಎಂಬ ವಿಶ್ಲೇಷಣೆಯೂ ನಡೆದಿದೆ.

‘ಸಾಧ್ಯವಾದಷ್ಟು ಬೇಗ ಪದತ್ಯಾಗಕ್ಕೆ ಅಣಿಯಾಗುವಂತೆ ಯಡಿಯೂರಪ್ಪ ಅವರಿಗೆ ‘ಕಿವಿಮಾತು’ ಹೇಳಿರುವ ಬಿಜೆಪಿ ವರಿಷ್ಠರು, ಭವಿಷ್ಯದಲ್ಲಿ ಪಕ್ಷ ಬಲವರ್ಧನೆಗೆ ಒತ್ತು ನೀಡುವಂತೆ ಹೇಳಿದ್ದಾರೆ’ ಎಂಬ ಮಾತುಗಳು ರಾಜಧಾನಿಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗುರಿಯಾಗಿವೆ.

ಪ್ರಧಾನಿ ಮೋದಿ ಸಲಹೆಯ ಮೇರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ ಸಿಂಗ್‌ ಹಾಗೂ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ ಯಡಿಯೂರಪ್ಪ, ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿಯೇ ಪ್ರಯತ್ನ ಮುಂದುವರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಮಾರ್ಗ ಮಧ್ಯೆ ಕರೆ: ನಡ್ಡಾ ಹಾಗೂ ರಾಜನಾಥ ಸಿಂಗ್‌ ಭೇಟಿ ನಂತರ ಅಮಿತ್‌ ಶಾ ಅವರ ಭೇಟಿಗೆ ಅವಕಾಶ ಕೋರಿ ಹೋಟೆಲ್‌ ಒಂದರಲ್ಲಿ 45 ನಿಮಿಷ ಕಾದು ಉಪಾಹಾರ ಸೇವಿಸಿದ ಯಡಿಯೂರಪ್ಪ, ಭೇಟಿ ನಿಗದಿ ಆಗದೇ ಇದ್ದುದರಿಂದ ತಮ್ಮ ಮಗ ಬಿ.ವೈ. ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ, ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಹಾಗೂ ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌ ಅವರೊಂದಿಗೆ ಬೆಂಗಳೂರಿಗೆ ಮರಳಲು ಮಧ್ಯಾಹ್ನ 1ರ ವೇಳೆಗೆ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದರು. ಆದರೆ, ಮಾರ್ಗ ಮಧ್ಯೆ ಕರೆ ಬಂದಿದ್ದರಿಂದ ಶಾ ಅವರ ನಿವಾಸಕ್ಕೆ ಧಾವಿಸಿ, 20 ನಿಮಿಷ ಚರ್ಚಿಸಿದರು.

ಶಾ ಆಶೀರ್ವಾದ: ‘ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುವಂತೆ ಸೂಚಿಸುವ ಮೂಲಕ ಪಕ್ಷ ಸಂಘಟನೆಯ ಹೊಣೆಯನ್ನೂ ವಹಿಸಿರುವ ಅಮಿತ್‌ ಶಾ, ಈ ನಿಟ್ಟಿನಲ್ಲಿ ನಮ್ಮ ಆಶೀರ್ವಾದ ನಿಮ್ಮ ಮೇಲಿರಲಿದೆ’ ಎಂಬ ಭರವಸೆ ನೀಡಿದ್ದಾಗಿ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

'ನಡ್ಡಾ ಅವರು ನನ್ನ ಮೇಲೆ ನಂಬಿಕೆ, ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪೂರ್ಣ‌ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ‌ ನೀಡಿದ್ದಾರೆ’ ಎಂದು ನಡ್ಡಾ ಭೇಟಿ ಬಳಿಕ ಮುಖ್ಯಮಂತ್ರಿ ಹೇಳಿದರು.

ಸಂಪುಟ ಪುನರ್‌ ರಚನೆ?: ಯಡಿಯೂರಪ್ಪ ತಲೆದಂಡ ಆಗಲಿದೆ ಎಂದು ಭಾವಿಸಿ, ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವ ಭಿನ್ನಮತೀಯರಿಗೆ ತಕ್ಕ ಶಾಸ್ತಿ ಆಗಲಿದೆ. ಶೀಘ್ರವೇ ರಾಜ್ಯ ಸಚಿವ ಸಂಪುಟ ಪುನರ್‌ ರಚನೆ ಆಗಲಿದೆ ಎಂದು ಯಡಿಯೂರಪ್ಪ ಆಪ್ತ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು