ಬುಧವಾರ, ಮೇ 18, 2022
29 °C
ಕೇಂದ್ರಕ್ಕೆ ನಿಯೋಗ ಹೋಗಿ ಎಂದಿದ್ದ ಯಡಿಯೂರಪ್ಪ: ರಾತ್ರಿ ಹೊತ್ತಿಗೆ ನಿಲುವು ಬದಲು

ಪಂಚಮಸಾಲಿ ಮೀಸಲಾತಿಗೆ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಂಚಮಸಾಲಿ ಮೀಸಲಾತಿಗಾಗಿ ಕೇಂದ್ರಕ್ಕೆ ನಿಯೋಗಹೋಗಿ’ ಎಂದು ವಿಧಾನಸಭೆಯಲ್ಲಿ ಶುಕ್ರವಾರ ಮಧ್ಯಾಹ್ನ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ರಾತ್ರಿ ಹೊತ್ತಿಗೆ ತಮ್ಮ ನಿಲುವು ಸಡಿಲಿಸಿದರು. ಮೀಸಲಾತಿ ಬದಲಾವಣೆ ಕುರಿತು ಅಧ್ಯಯನ ನಡೆಸಲು ಅವರು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದ್ದಾರೆ.

‘ಈ ವಿಚಾರದಲ್ಲಿ ನಾನು ಏಕಾಏಕಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ನಮ್ಮದೇ ಪಕ್ಷದ 25 ಸಂಸದರು ಇದ್ದಾರೆ. ಅವರ ನಿಯೋಗ ಕರೆದುಕೊಂಡು ಹೋಗಿ ಪರಿಹಾರ ಕಂಡುಕೊಳ್ಳಿ‘ ಎಂದು ತಮ್ಮ ಪಕ್ಷದ ಶಾಸಕರೇ ಆಗಿರುವ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ಯಡಿಯೂರಪ್ಪ ಅವರು ಹೇಳಿದ್ದರು.

ಮುಖ್ಯಮಂತ್ರಿ ಹೇಳಿಕೆ ಟೀಕೆಗೆ ಗುರಿಯಾಗಿತ್ತು. ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ಕೊಡಬೇಕು ಎಂದೂ ಆಗ್ರಹಿಸಿದ್ದರು. ಸ್ವಾಮೀಜಿ ಹೇಳಿಕೆಗೂ ಆಕ್ರೋಶ ವ್ಯಕ್ತವಾಗಿತ್ತು.

ಈ ಬಗ್ಗೆ ರಾತ್ರಿ ಹೊತ್ತಿಗೆ ಪತ್ರಿಕಾ ಹೇಳಿಕೆ ನೀಡಿದ ಯಡಿಯೂರಪ್ಪ, ‘ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ಸಮುದಾಯಗಳ ಒಳಿತಿಗೆ ನಾನು ಬದ್ಧ. ಇಂತಹ ಗಂಭೀರ ವಿಚಾರದ ಬಗ್ಗೆ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳದೇ, ತಜ್ಞರೊಂದಿಗೆ ಸಮಗ್ರ
ವಾಗಿ ಚರ್ಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಕೋರಿದ್ದಾರೆ.

ಅಲ್ಲದೇ, ‘ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ‘ಎ’ ಮೀಸಲಾತಿ ನೀಡುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದ್ದಾರೆ.

ಅಧಿವೇಶನದಲ್ಲಿ ನಡೆದಿದ್ದೇನು: ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಉತ್ತರ ನೀಡಿ ಕುಳಿತರು.

ಈ ವೇಳೆ ಬಸನಗೌಡ ಪಾಟೀಲ ಯತ್ನಾಳ್‌, ‘ಪಂಚಮಸಾಲಿ ಹಾಗೂ ಹಾಲುಮತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮೂರು ಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸಿದ್ದೇವೆ. ಆದರೆ, ಆ ವಿಷಯದ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಿಲ್ಲ’ ಎಂದು ದೂರಿದರು.

‘ಸರ್ಕಾರ ಸ್ಪಂದಿಸುವ ತನಕ ಹೋರಾಟ’
‘ಎಸ್‌ಟಿಗೆ ಸೇರಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರೆ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ’ ಎಂದು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

‘ಪ್ರಜಾವಾಣಿ’ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಅವರು, ‘ಕುಲಶಾಸ್ತ್ರೀಯ ಅಧ್ಯಯನದ ವರದಿ ಒಂದು ತಿಂಗಳಲ್ಲಿ ಬರುವ ಸಾಧ್ಯತೆ ಇದೆ. ಅದನ್ನೂ ಸೇರಿಸಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂಬುದು ನಮ್ಮ ಮನವಿ. ಸ್ಪಂದನೆ ಸಿಗದಿದ್ದರೆ ಹೋರಾಟ ನಿಲ್ಲುವುದಿಲ್ಲ. ಮುಂದಿನ ಹೋರಾಟದ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು. ‘ಸ್ವಾಮೀಜಿ ಇದ್ದಾರೆ, ಅವರೇ ಹೋರಾಟ ಮಾಡುತ್ತಾರೆ ಎಂದರೆ ಆಗುವುದಿಲ್ಲ. ನಮ್ಮ ಜತೆಗೆಬೆನ್ನೆಲುಬಾಗಿ ಸಮುದಾಯದ ಎಲ್ಲರೂ ನಿಲ್ಲಬೇಕು. ಇಲ್ಲದಿದ್ದರೆ ‘ಎಣ್ಣೆ ಬಂದಾಗ ಕಣ್ಮುಚ್ಚಿಕೊಂಡರು’ ಎಂಬಂತೆ ಆಗಲಿದೆ’ ಎಂದು ಸಮುದಾಯದವರಿಗೆ ಕಿವಿ
ಮಾತು ಹೇಳಿದರು. ‘ಮೀಸಲಾತಿಗಾಗಿ ಕೇಂದ್ರದ ಮೊರೆ ಹೋಗಿ’ ಎಂದು ಯಡಿಯೂರಪ್ಪ ಅವರು ನೀಡಿದ ಹೇಳಿಕೆಗೆ ಸ್ವಾಮೀಜಿ ಪ್ರತಿಕ್ರಿಯಿಸಲಿಲ್ಲ.

‘ಈಗ ವಿರೋಧ ಪಕ್ಷದ ನಾಯಕರು ಸರ್ಕಾರದ ಉತ್ತರದ ಬಗ್ಗೆ ಸ್ಪಷ್ಟೀಕರಣ ಕೇಳುತ್ತಿದ್ದಾರೆ. ನಿಮಗೆ ಮತ್ತೆ ಅವಕಾಶ ನೀಡುತ್ತೇನೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

‘ಮತ್ತೆ ನೀವು ಕಲಾಪ ಮುಂದೂಡಿ ಹೋಗುತ್ತೀರಿ. ಉತ್ತರವೇ ಸಿಗುವುದಿಲ್ಲ. ಮುಖ್ಯಮಂತ್ರಿ ಅವರು ಈಗಲೇ ಹೇಳಿಕೆ ನೀಡಬೇಕು’ ಎಂದು ಯತ್ನಾಳ್‌ ಆಗ್ರಹಿಸಿದರು.

ಆಗ ಎದ್ದುನಿಂತ ಯಡಿಯೂರಪ್ಪ, ‘ನಮ್ಮದು ಪ್ರಾದೇಶಿಕ ಪಕ್ಷವಲ್ಲ, ರಾಷ್ಟ್ರೀಯ ಪಕ್ಷ. ಇಂತಹ ವಿಚಾರವನ್ನು ನಾನು ಏಕಾಏಕಿ ತೀರ್ಮಾನ ಮಾಡಲು ಆಗುವುದಿಲ್ಲ. ಪ್ರಧಾನಿ, ಗೃಹ ಸಚಿವರು ಹಾಗೂ ಕೇಂದ್ರದ ಪ್ರಮುಖರ ಜತೆಗೆ ಚರ್ಚಿಸಿ ಮುಂದುವರಿಯಬೇಕಿದೆ’ ಎಂದರು. ಅಷ್ಟಕ್ಕೆ ಸುಮ್ಮನಾಗದ ಯತ್ನಾಳ್, ಹಟಕ್ಕೆ ಬಿದ್ದವರಂತೆ, ‘ಈ ಬಗ್ಗೆ ಈಗಲೇ ನಿಲುವು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರಕ್ಕೆ ನಿಯೋಗ ಹೋಗಿ ಪರಿಹಾರ ಕಂಡುಕೊಳ್ಳಿ’ ಎಂದು ಯಡಿಯೂರಪ್ಪ ತುಸು ಕಟುವಾಗಿಯೇ ಪ್ರತಿಕ್ರಿಯಿಸಿದರು. ‘ನಮ್ಮ ಸಮುದಾಯವನ್ನು ಅವಕಾಶವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ’ ಎಂದು ಯತ್ನಾಳ ಆರೋಪಿಸಿದರು.

‘ಮೀಸಲಾತಿಗಾಗಿ ಕುರುಬ ಸಮುದಾಯದವರ ಹೋರಾಟ ನಡೆಯುತ್ತಿದೆ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದೆ. ಅದಕ್ಕೆ ಮುಖ್ಯಮಂತ್ರಿ ಉತ್ತರಿಸಿಲ್ಲ’ ಎಂದು ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ‍ಪ್ರಶ್ನಿಸಿದರು. ಅದಕ್ಕೆ ಮುಖ್ಯಮಂತ್ರಿ ಉತ್ತರಿಸಲಿಲ್ಲ.

ಯಡಿಯೂರಪ್ಪ ರಾಜೀನಾಮೆ ಕೊಡಲಿ’
ಚಿತ್ರದುರ್ಗ: ‘ಪಂಚಮಸಾಲಿ ಸಮುದಾಯದ ಕನಸನ್ನು ನುಚ್ಚುನೂರುಮಾಡುವ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆ. ಸಮಾಜದ ಮತ ಪಡೆದು ಉನ್ನತ ಹುದ್ದೆಗೇರಿದ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಹಿರಿಯೂರು ತಾಲ್ಲೂಕಿನ ಕಸ್ತೂರಿ ರಂಗಪ್ಪನಹಳ್ಳಿಯಲ್ಲಿ ಆಡಿದ ಮಾತುಗಳನ್ನು ಸ್ವಾಮೀಜಿ ‘ಫೇಸ್‌ಬುಕ್‌’ ಪುಟದಲ್ಲಿ ಹಂಚಿಕೊಂಡಿದ್ದಾರೆ.

‘ಪಂಚಮಸಾಲಿ ಸಮುದಾಯ ಕೇಳುತ್ತಿರುವ ಮೀಸಲಾತಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಕೇಂದ್ರದ ಅನುಮತಿ ಅಗತ್ಯವಿಲ್ಲ. ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಪರಮಾಧಿಕಾರವನ್ನು ಮುಖ್ಯಮಂತ್ರಿ ಹೊಂದಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರ ಹೆಗಲಿಗೆ ಹಾಕುವ ನಾಟಕವನ್ನು ಮುಖ್ಯಮಂತ್ರಿ ಬಿಡಬೇಕು’ ಎಂದು ಆಗ್ರಹಿಸಿದರು. ‘ಪಂಚಮಸಾಲಿ ಸಮುದಾಯ ಬಲಿಷ್ಠವಾದರೆ ಯಡಿಯೂರಪ್ಪ ಕುಟುಂಬಕ್ಕೆ ತೊಂದರೆಯಾಗುತ್ತದೆ. ಮುಖ್ಯಮಂತ್ರಿ ಆಗಬೇಕು ಎಂಬ ಅವರ ಪುತ್ರನ ಕನಸು ನುಚ್ಚುನೂರಾಗುತ್ತದೆ. ಈ ಕಾರಣಕ್ಕೆ ಸಮುದಾಯವನ್ನು ಒಗ್ಗೂಡಲು ಅವರು ಬಿಡುತ್ತಿಲ್ಲ. ನಾಡಿಗಿಂತ ಕುಟುಂಬದ ಹಿತ ಅವರಿಗೆ ಮುಖ್ಯವಾಗಿದೆ’ ಎಂದು ಆರೋಪಿಸಿದರು.

‘ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು ಮೀಸಲಾತಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಒಂದೇ ದಿನಕ್ಕೆ ನಿಲುವು ಬದಲಿಸಿದ್ದಾರೆ. ಅವರ ರಾಜೀನಾಮೆಗೆ ಸಮುದಾಯದ ಶಾಸಕರು ಒತ್ತಡ ಹೇರಬೇಕು. ಇಲ್ಲವಾದರೆ, ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು